ಹೊಸದಿಲ್ಲಿ: ಲಲಿತ್ ಮೋದಿಗೆ ವೀಸಾ ದೊರಕಿಸಲು ಬ್ರಿಟಿಷ್ ಸರಕಾರಕ್ಕೆ ಮನವಿ ಮಾಡಿಕೊಂಡಿರಲಿಲ್ಲ, ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆಯನ್ನೂ ನೀಡುವುದಿಲ್ಲ ಎಂದು ಪುನರುಚ್ಚರಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರತಿಪಕ್ಷಗಳಿಗೆ ಚರ್ಚೆಯೇ ಬೇಕಾಗಿಲ್ಲ, ಗದ್ದಲವೆಬ್ಬಿಸಿ ಕಲಾಪ ನಡೆಯದಂತೆ ನೋಡಿಕೊಳ್ಳುವುದು ಮಾತ್ರ ಅವುಗಳ ಉದ್ದೇಶ ಎಂದು ಟೀಕಿಸಿದ್ದಾರೆ.
ಎರಡು ವಾರಗಳಿಂದ ಸಂಸತ್ತಿನ ಮುಂಗಾರು ಅಧಿವೇಶನ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಸೋಮವಾರ ಬೆಳಗ್ಗೆ ಗದ್ದಲ, ರಾಜೀನಾಮೆ ಆಗ್ರಹದ ನಡುವೆಯೇ ಹೇಳಿಕೆ ನೀಡಿದ ಸುಷ್ಮಾ, ಯಾವುದೇ ತಪ್ಪು ಮಾಡಿಲ್ಲ, ಸುಖಾ ಸುಮ್ಮನೇ ತಪ್ಪುಗಳನ್ನೇ ಸರಿ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ ಎಂದು ಹೇಳಿದರು. ಅಲ್ಲದೆ, ತಾಕತ್ತಿದ್ದರೆ ಈ ಬಗ್ಗೆ ಚರ್ಚೆಗೆ ಬನ್ನಿ ಎಂದೂ ಸುಷ್ಮಾ ಸವಾಲು ಹಾಕಿದ್ದಾರೆ.
ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ಆಧಾರರಹಿತ ಎಂದು ಸುಷ್ಮಾ ಪದೇ ಪದೇ ಹೇಳಿದರು. ಕಾಂಗ್ರೆಸ್ ಸದಸ್ಯರ ಗದ್ದಲ ಮುಂದುವರಿದಂತೆ, ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.