ನವದೆಹಲಿ: ಭಾರತದ ಜಾರಿ ನಿರ್ದೇಶನಾಲಯ ಹಾಗೂ ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್(ಎ.ಎಫ್.ಪಿ) ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ಜಾಲ ಪತ್ತೆಯಾಗಿದೆ.
ಕಳೆದ ಸೆಪ್ಟೆಂಬರ್ ನಿಂದ ಎ.ಎಫ್.ಪಿ ಅಧಿಕಾರಿಗಳು ಹಾಗು ಇಡಿ ಅಧಿಕಾರಿಗಳು ಅಕ್ರಮ ಹಣ ವಾರ್ಗಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಲು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರು. ಹಲವು ತಿಂಗಳ ಕಾರ್ಯಾಚರಣೆ ಬಳಿಕ ಆಸ್ಟ್ರೇಲಿಯಾ- ಹಾಂಕ್ ಕಾಂಗ್- ಯು.ಎಸ್- ಯು.ಕೆ ಯ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪತ್ತೆಮಾಡಲಾಗಿದೆ. ಆಸ್ಟ್ರೇಲಿಯಾ, ಹಾಂಕ್-ಕಾಂಗ್, ಭಾರತ ಹಾಗೂ ಯು.ಎಸ್ ನಲ್ಲಿರುವ ಅನಧಿಕೃತ ಕಂಪನಿಗಳು ಅಕ್ರಮ ಹಣವನ್ನು ಸಕ್ರಮವನ್ನಾಗಿಸಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಸುವ ಕೆಲಸ ಮಾಡುತ್ತಿದ್ದವು.
ಮಾದಕ ವಸ್ತುಗಳಿಂದ ಬರುತ್ತಿದ್ದ ಅಕ್ರಮ ಹಣವನ್ನು ಭಾರತದಲ್ಲಿರುವ ಅಧಿಕೃತ 44 ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಈ 44 ಖಾತೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗಷ್ಟೇ ಸ್ಥಗಿತಗೊಳಿಸಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸಂಡೇ ಸ್ಟ್ಯಾಂಡರ್ಡ್ ಪತ್ರಿಕೆ ಪಡೆದಿರುವ ತನಿಖಾ ವರದಿಯ ಪ್ರಕಾರ, ಭಾರತದ ತ್ರಿಪಾಟ್ ಎಂಟರ್ ಪ್ರೈಸಸ್, ಎಸ್.ಕೆ ಟ್ರೇಡಿಂಗ್ ಪ್ರೈವೆಟ್ ಲಿಮಿಟೆಡ್ ಹಾಗೂ ಆಸ್ಟ್ರೇಲಿಯಾ, ಹಾಂಕ್-ಕಾಂಗ್, ಯು.ಎಸ್ ನಲ್ಲಿರುವ ಇನ್ನಿತರ ಖಾಸಗಿ ಸಂಸ್ಥೆಗಳು ಹಣದ ನಿಜವಾದ ಸಂಪನ್ಮೂಲವನ್ನು ಮರೆಮಾಚಿ ಹಣವನ್ನು ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಕ್ರಮ ಹಣವನ್ನು ಏಕೀಕರಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತನಿಖಾ ವರದಿಯಲ್ಲಿ ಒಟ್ಟು ಆರು ಜನ ಅನಿವಾಸಿ ಭಾರತೀಯರ ಹೆಸರಿದ್ದು 4 ಜನ ಆಸ್ಟ್ರೇಲಿಯನ್ ಮಾದಕ ಲೋಕದಲ್ಲಿ ತೊಡಗಿದ್ದ ವ್ಯಕ್ತಿಗಳ ಹೆಸರಿದೆ.
2013 ರ ಫೆಬ್ರವರಿ- ಮಾರ್ಚ್ ನಲ್ಲಿ ಪ್ರತಿ ನಿತ್ಯವೂ ಒಂದು ವಹಿವಾಟಿನಂತೆ ಒಟ್ಟು ಒಂದು ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಗಳನ್ನು ವರ್ಗಾವಣೆ ಮಾಡಲಾಗಿತ್ತು ಎಂದು ತನಿಖಾ ವರದಿ ತಿಳಿದುಬಂದಿದೆ.