ನವದೆಹಲಿ: ಭಾರತದ ಅತ್ಯಾಧುನಿಕ ಕ್ಷಿಪಣಿ ಉಡಾವಣೆ ಕೇಂದ್ರವಾಗಿರುವ ಬಂಗಾಳಕೊಲ್ಲಿಯಲ್ಲಿನ ದ್ವೀಪವೊಂದಕ್ಕೆ ಮಿಸೈಲ್ ಮ್ಯಾನ್ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಲು ಚಿಂತಿಸಲಾಗಿದೆ.
ಕಲಾಂ ಅವರು ಸಲ್ಲಿಸಿದ ಸೇವೆಯ ಗೌರವಾರ್ಥ ಈ ದ್ವೀಪಕ್ಕೆ ಕಲಾಂ ಐಲ್ಯಾಂಡ್ ಎಂದು ನಾಮಕರಣ ಮಾಡಲಾಗುವುದು ಎಂದು ತಿಳಿದುಬಂದಿದೆ. ಕಲಾಂ ತಾವು ಅಭಿವೃದ್ಧಿಪಡಿಸಿದ ಹಲವು ಕ್ಷಿಪಣಿಗಳ ಪ್ರಯೋಗಾರ್ಥ ಪರೀಕ್ಷೆಯನ್ನು ಈ ದ್ವೀಪದಲ್ಲಿಯೇ ನಡೆಸಿದ್ದರು.
ಮಾತ್ರವಲ್ಲ ಅವರು ರಚಿಸಿದ ‘ಮೈ ಜರ್ನಿ’ ಪುಸ್ತಕದಲ್ಲಿನ ಕೆಲ ಪದ್ಯಗಳ ರಚನೆಗೂ ಈ ದ್ವೀಪದಲ್ಲಿನ ಏಕಾಂತತೆ, ಪ್ರಶಾಂತ ವಾತಾವರಣ ಹುಮ್ಮಸ್ಸು ಮೂಡಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಒರಿಸ್ಸಾ ಕರಾವಳಿಯಲ್ಲಿರುವ ಈ ದ್ವೀಪಕ್ಕೆ ಕಲಾಂ ಅವರ ಹೆಸರು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಅರ್ಪಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.