ವಾಷಿಂಗ್ಟನ್: ಇರಾಕ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಜನರನ್ನು ಕೊಂದಿರುವ ಅಮೆರಿಕ, ಇಸ್ಲಾಮಿಕ್ ಸ್ಟೇಟ್‌ಗಿಂತಲೂ ಕ್ರೂರ ಎನ್ನುವ ಮೂಲಕ ಭಾರತೀಯ ಮೂಲದ ಅಮೆರಿಕದ ಫ್ರೊಫೆಸರ್ ದೀಪಾ ಕುಮಾರ್ ಮಾಧ್ಯಮ ಹಾಗೂ ಶೈಕ್ಷಣಿಕ ವಲಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ.
‘ಹೌದು ಐಎಸ್‌ಐಎಸ್ ಅತಿ ಕ್ರೂರ. ಆದರೆ, ಇರಾಕ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ 13 ಲಕ್ಷ ಮಂದಿಯನ್ನು ಸಾಯಿಸಿರುವ ಅಮೆರಿಕ ಅದಕ್ಕಿಂತಲೂ ಕ್ರೂರ,’ ಎಂದು ರುಟ್ಗರ್ಸ್ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಪ್ರೊಫೆಸರ್ ದೀಪಾ ಕುಮಾರ್ ಮಾರ್ಚ್ 26ರಂದು ಟ್ವೀಟ್ ಮಾಡಿದ್ದರು.
ಪೋಸ್ಟ್ ಆದ ಕೆಲವು ದಿನಗಳ ನಂತರ ಗಮನ ಸೆಳೆದಿರುವ ಅವರ ಟ್ವೀಟ್ ಬಗ್ಗೆ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಬಗ್ಗೆ ಕೆಟ್ಟ ಭಾವನೆ ಇದ್ದರೆ, ಅಮೆರಿಕದಿಂದ ಹೊರ ಹೋಗುವಂತೆ ಹಲವರು ಸೂಚಿಸಿದ್ದಾರೆ. ಇನ್ನು ಕೆಲವರು ಅದನ್ನು ತಮಾಷೆ ಎಂದು ನಿರ್ಲಕ್ಷಿಸಿದ್ದಾರೆ. ಇನ್ನು ಕೆಲ ಸಹೋದ್ಯೋಗಿಗಳು ಅವರ ಅಭಿಪ್ರಾಯಕ್ಕೆ ಸಹಮತಿ ಸೂಚಿಸಿ, ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ದೀಪಾ ಅವರ ಈ ಟ್ವೀಟ್ ಬಗ್ಗೆ ಫಾಕ್ಸ್ ನ್ಯೂಸ್ ಶುಕ್ರವಾರ ವರದಿ ಪ್ರಸಾರ ಮಾಡಿದ ನಂತರ ವಿಷಯ ವಿವಾದದ ಸ್ವರೂಪ ಪಡೆದಿದ್ದು, ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.