ಹೊಸದಿಲ್ಲಿ: ದಿಲ್ಲಿಯ ಆಮ್ ಆದ್ಮಿ ಸರಕಾರ, ಪಕ್ಷದ ಪ್ರಚಾರಕ್ಕಾಗಿ 526 ಕೋಟಿ ರೂ. ವ್ಯಯಿಸಿದ್ದು, ಅದೇ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು, ಎಂದು ಬಿಜೆಪಿ ನಗರದೆಲ್ಲೆಡೆ ಹೋರ್ಡೀಂಗ್‌ಗಳನ್ನು ಹಾಕಿದೆ.
ಆಮ್ ಆದ್ಮಿ ಪಕ್ಷ ವ್ಯಯಿಸಿದ ಕೋಟಿ ಹಣವನ್ನು ಮಹಿಳಾ ಸುರಕ್ಷತೆಗಾಗಿ ಅಲ್ಲಲ್ಲಿ ಕ್ಯಾಮೆರಾಗಳನ್ನು ಹಾಕಿಸಬಹುದಿತ್ತು. ಅಗತ್ಯವಿರುವೆಡೆ ಆಸ್ಪತ್ರೆ, ಶೌಚಾಲಯ, ಶಾಲೆಗಳನ್ನು ಕಟ್ಟಲು ಬಳಸಬಹುದಿತ್ತು, ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ದಿಲ್ಲಿ ಸಾರ್ವಜನಿಕರಿಗೆ ಪಕ್ಷದ ಪ್ರಚಾರಕ್ಕಾಗಿ ವ್ಯಯಿಸಿದ ಹಣದ ಬಗ್ಗೆ ಕೇಜ್ರಿವಾಲ್ ಬಹಿರಂಗಗೊಳಿಸಬೇಕೆಂದೂ, ಬಿಜೆಪಿ ಆಗ್ರಹಿಸಿದೆ.
‘ಆರಂಭದಿಂದಲೂ ಆಮ್ ಆದ್ಮ ಪಕ್ಷ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕೆ ಯಾವುದೇ ಅಭ್ಯಂತರವಿಲ್ಲ. ಶೀಲಾ ದೀಕ್ಷಿತ್ ಸರಕಾರವೂ ಜಾಹೀರಾತಿಗಾಗಿ ವಾರ್ಷಿಕ ಕೇವಲ 10-12 ಕೋಟಿ ವ್ಯಯಿಸುತ್ತಿತ್ತು. ಆದರೆ, ಕೇಜ್ರಿವಾಲ್ ಸರಕಾರ ನೂರಾರು ಕೋಟಿ ಲೆಕ್ಕದಲ್ಲಿ ಪ್ರಚಾರಕ್ಕೆ ಹಣ ವ್ಯಯಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ,’ ಎಂದು ದಿಲ್ಲಿ ಘಟಕದ ಬಿಜೆಪಿ ಮುಖ್ಯಸ್ಥ ಸತೀಶ್ ಉಪಾಧ್ಯಾಯ್ ಹೇಳಿದ್ದಾರೆ.
‘526 ಕೋಟಿ ರೂ. ಬಳಸಿ ದಿಲ್ಲಿ ಸರಕಾರ ಮಹಿಳಾ ಸುರಕ್ಷೆತೆಗಾಗಿ ನಗರದೆಲ್ಲೆಡೆ 5 ಲಕ್ಷ ಕ್ಯಾಮೆರಾಗಳನ್ನು ಹಾಕಿಸಬಹುದಿತ್ತು, 200 ಹೊಸ ಶಾಲೆಗಳು, 50 ಹೊಸ ಕಾಲೇಜುಗಳನ್ನು ತೆರೆಯಬಹುದಿತ್ತು. ಇದರಿಂದ ವಿದ್ಯಾರ್ಥಿಗಳ ಭವಿಷ್ಯವಾದರೂ ಉಜ್ವಲಗೊಳ್ಳುತ್ತಿತ್ತು. ಆದರೆ, ಈ ಜಾಹೀರಾತುಗಳು ಪಕ್ಷಕ್ಕಾಗಿ ಮಾತ್ರ ಉಪಯೋಗಕ್ಕೆ ಬರಲಿದ್ದು, ಅದರಿಂದ ಜನರಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ,’ ಎಂದು ಉಪಾಧ್ಯಾಯ್ ಹೇಳಿದ್ದಾರೆ.
‘ದಿಲ್ಲಿಯ ಅನೇಕ ಕಾಲೋನಿಗಳು ಕಾಂಗ್ರೆಸ್ ಸರಕಾರವಿದ್ದಾಗ ಹೇಗಿತ್ತೋ, ಹಾಗೆಯೇ ಇವೆ. ಕೇಜ್ರಿವಾಲ್ ಸರಕಾರ ಬಂದಿದ್ದರಿಂದ ಯಾವುದೇ ಬದಲಾವಣೆಗಳೂ ಸಾಧ್ಯವಿಲ್ಲ,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.