ಮದ್ಯದಂಗಡಿಗಳನ್ನು ನಡೆಸಬೇಡಿ ಎಂದು ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ ಮದ್ಯಸೇವನೆ, ಮಾರಾಟ ಮಾಡುವವರು ಕಂಡರೆ ಅವರಿಗೆ ಪೊರಕೆಯಲ್ಲಿ ಹೊಡೆಯಿರಿ ಎಂದು ಮಹಿಳೆಯರು ಆರ್ಭಟಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಹೌದು. ಬಿಹಾರದ ಮಹಿಳಾ ಪಂಚಾಯತ್ ಈ ಆದೇಶ ನೀಡಿದ್ದು ಶೇಖ್ ಪುರ ಜಿಲ್ಲೆಯ ರಂಜಾನ್ ಪುರ ಗ್ರಾಮದಲ್ಲಿ ಮದ್ಯಸೇವನೆ ನಿಷೇಧಿಸಿದ್ದು ಮದ್ಯ ಮಾರಾಟ ಮಾಡುವವರಿಗೆ ಹಾಗೂ ಸೇವನೆ ಮಾಡುವವರಿಗೆ ದಂಡ ವಿಧಿಸಬೇಕೆಂದು ಆದೇಶ ನೀಡಿದೆ. ಅಷ್ಟೇ ಅಲ್ಲ, ಕುಡುಕರಿಗೆ ಪೊರಕೆ ಹೊಡೆಯಿರಿ ಎಂದು ಮಹಿಳೆಯರಿಗೆ ಪಂಚಾಯತ್ ಖಡಕ್ ಸೂಚನೆ ನೀಡಿದೆ.
ಮದ್ಯ ಮಾರಾಟ ಗ್ರಾಮದ ಮಹಿಳೆಯರಿಗೆ ಕಂಟಕದಂತಾಗಿದ್ದು ಪಂಚಾಯತ್ ನ ನಿರ್ಧಾರವನ್ನು ಜನರಿಗೆ ತಿಳಿಸಲು ಗ್ರಾಮದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಪೋಸ್ಟರ್ ಹಾಕಲು ಮಹಿಳೆಯರು ನಿರ್ಧರಿಸಿದ್ದಾರಂತೆ. ಅಷ್ಟೇ ಅಲ್ಲ, ಪಂಚಾಯತ್ ನ ಆದೇಶದ ಹೊರತಾಗಿಯೂ ಮದ್ಯ ಸೇವನೆ ಮಾಡಿದರೆ 2 ,500 ಹಾಗೂ ಮಾರಾಟ ಮಾಡುವುದು ಕಂಡುಬಂದರೆ ರೂ. 19 ,000 ರೂ ದಂಡ ವಿಧಿಸಲು ಚಿಂತನೆ ನಡೆದಿದೆಯಂತೆ.
ಏನೇ ಇರಲಿ, ಕುಡಿದ ನಶೆಯಲ್ಲಿ ಹೆಂಡತಿಯರಿಗೆ ಬಾರಿಸುವ ಕುಡುಕ ಗಂಡಂದಿರಿಗೆ ಮದ್ಯದಂಗಡಿಗೆ ಹೋಗುವ ಮುನ್ನವೇ ಲಗಾಮು ಹಾಕಲು ಮುಂದಾಗಿರುವುದಕ್ಕೆ ಭೇಷ್ ಎನ್ನಲೇಬೇಕು.