ತ್ರಿಪುರ: ಗಲ್ಲು ಶಿಕ್ಷೆಗೆ ಗುರಿಯಾದ ಯಾಕೂಬ್ ಮೆಮನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಭಯೋತ್ಪದಕರಾಗಿರಬಹುದು ಎಂದು ಹೇಳುವ ಮೂಲಕ ತ್ರಿಪುರದ ರಾಜ್ಯಪಾಲ ತಥಾಗತ ರಾಯ್ ವಿವಾದಕ್ಕೀಡಾಗಿದ್ದಾರೆ.
1993 ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನ್ನು ನಿನ್ನೆ ಗಲ್ಲಿಗೇರಿಸಿದ ನಂತರ ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮೆಮನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸದ್ದವರಲ್ಲಿ ಭಯೋತ್ಪಾದಕರೂ ಇರುವ ಸಾಧ್ಯತೆ ಇದೆ ಹಾಗಾಗಿ, ಅವರ ಮೇಲೆ ನಿಗಾ ಇಡಿ ಎಂದು ತಥಾಗತ ರಾಯ್ ಹೇಳಿದ್ದರು.
ಗುಪ್ತಚರ ಇಲಾಖೆಯವರು ಮೆಮನ್ ಸಂಬಂಧಿಕರು ಮತ್ತು ಆಪ್ತರನ್ನು ಬಿಟ್ಟ ಬೇರೆ ಯಾರೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೋ ಅಂತಹವರ ಮೇಲೆ ಒಂದು ಕಣ್ಣು ಇಡುವುದು ಒಳ್ಳೆಯದು ಎಂದು ರಾಯ್ ಟ್ವೀಟ್ ಮಾಡಿದ್ದರು.
ರಾಜ್ಯಪಾಲರ ಈ ಹೇಳಿಕೆಗೆ ಟ್ವಿಟರ್ ನಲ್ಲಿ ಟೀಕೆ ಹೆಚ್ಚಾಗುತ್ತಿದ್ದಂತೆ, ಭದ್ರತೆ ದೃಷ್ಟಿಯಿಂದ ನಾನು ಈ ಹೇಳಿಕೆ ನೀಡಿದೆ. ರಾಜ್ಯದ ಭದ್ರತೆ ಬಗ್ಗೆ ಕಾಳಜಿವಹಿಸುವುದು ರಾಜ್ಯಪಾಲರು ಜವಾಬ್ದಾರಿಯಾಗಿರುತ್ತದೆ. ಪೊಲೀಸರು ಯಾಕೂಬ್ ಸಾವಿನ ಶೋಕತಪ್ತರ ಮೇಲೆ ನಿಗಾ ಇಡುವುದರಿಂದ ಮುಂದಾಗವ ಭಯೋತ್ಪಾದನೆಯನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ಇದಕ್ಕೆ, ರಾಜ್ಯಪಾಲರು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧಗಳು ವ್ಯಕ್ತವಾದವು. ಮತ್ತೆ ಪ್ರತಿಕ್ರಯಿಸಿದ ರಾಜ್ಯಪಾಲರು, ಇಲ್ಲಿ ನಾನು ಯಾವುದೇ ಸಮುದಾಯದ ಮೇಲೆ ನಿಗಾ ಇಡು ಎಂದು ಹೇಳಿಲ್ಲ. ಹಾಗಾಗಿ, ನನಗೇಕೆ ಅಪರಾಧ ಪ್ರಜ್ಞೆ ಕಾಡಬೇಕು ಎಂದು ಪ್ರಶ್ನಿಸಿದ್ದಾರೆ.