ರಾಷ್ಟ್ರೀಯ

‘ಸಮಾನ ಶ್ರೇಣಿ, ಸಮಾನ ಪಿಂಚಣಿ’ ಯೋಜನೆ ಜಾರಿಗೆ ಅಣ್ಣಾ ಹಜಾರೆ ಆಗ್ರಹ

Pinterest LinkedIn Tumblr

Anna-Hazareನವದೆಹಲಿ: ಭಾನುವಾರ ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ ಮಾಜಿ ಯೋಧರು   ‘ಸಮಾನ ಶ್ರೇಣಿ, ಸಮಾನ ಪಿಂಚಣಿ’ ಯೋಜನೆ  ಜಾರಿಗೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಕೈ ಜೋಡಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಯೋಧರ ನೆರವಿಗೆ ನಾನು ಇಲ್ಲಿಗೆ ಬಂದಿದ್ದೇನೆ. ಅಹಿಂಸೆಯ ಮೂಲಕ ಮಾಜಿ ಯೋಧರ ಬೇಡಿಕೆಗಳ ಈಡೇರಿಕೆಗೆ ನಾವು ಒತ್ತಾಯಿಸುತ್ತೇವೆ ಎಂದರು.

‘ಸಮಾನ ಶ್ರೇಣಿ, ಸಮಾನ ಪಿಂಚಣಿ’ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಲುಧಿಯಾನಾದಲ್ಲಿ ಆಗಸ್ಟ್ 2ರಂದು, ರೊಹ್ ಟಕ್ ನಲ್ಲಿ ಆಗಸ್ಟ್ 9ರಂದು, ಮಹಾರಾಷ್ಟ್ರದಲ್ಲಿ ಆಗಸ್ಟ್ 23ರಂದು ರ್ಯಾಲಿ ಹಮ್ಮಿಕೊಳ್ಳುವುದಾಗಿ ಅಣ್ಣಾ ಹಜಾರೆ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಅದರಲ್ಲಿ ದೇಶದ ರೈತರ ಮತ್ತು ಸೈನಿಕರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದು ಬರೆದಿದ್ದಾರೆ.ಸಂಸದರ ಸಂಬಳವನ್ನು 50 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸುವ ಸರ್ಕಾರ, ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೆ ತಿಂಗಳಿಗೆ ಕೇವಲ 3 ಸಾವಿರದ 500 ರೂಪಾಯಿ ನೀಡುತ್ತದೆಯಷ್ಟೆ, ಏಕೆ ಈ ತಾರತಮ್ಯ? ಈ ದೇಶದ ಬಡವರಿಗೆ ನೀಡಿರುವ ಆಶ್ವಾಸನೆಗಳನ್ನು ಸರ್ಕಾರ ಈಡೇರಿಸದಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಣ್ಣಾ ಹಜಾರೆ ತಮ್ಮ ಪತ್ರದಲ್ಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ‘ಸಮಾನ ಶ್ರೇಣಿ, ಸಮಾನ ಪಿಂಚಣಿ’ ಯೋಜನೆಯನ್ನು ಶೀಘ್ರವೇ ಜಾರಿಗೆ ತರಬೇಕೆಂದು ಮಾಜಿ ಯೋಧರು ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ದೆಹಲಿಯಲ್ಲಿಂದು ಮಾಜಿ ಯೋಧರು ನಡೆಸಿದ  ಮ್ಯಾರಥಾನ್ ಸಂದರ್ಭದಲ್ಲಿ ಈ ಒತ್ತಾಯ ಮಾಡಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಯುದ್ಧ ಮಾಡಿದ ಮತ್ತು ಯುದ್ಧದಲ್ಲಿ  ಮಡಿದ ಸೈನಿಕರ ಗೌರವಾರ್ಥ ವಿಜಯ್  ದಿವಸವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ದೌಲಾ ಕಾನ್ ನಿಂದ ಇಂಡಿಯಾ ಗೇಟ್ ವರೆಗೆ ಓಟವನ್ನು ಆಯೋಜಿಸಲಾಗಿದೆ. ಮಾಜಿ ಸೈನಿಕರ ಹಕ್ಕಾದ ಸಮಾನ ಪಿಂಚಣಿ, ಸಮಾನ ಶ್ರೇಣಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದವರೊಬ್ಬರಲ್ಲಿ ಹೇಳಿದರು.

ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಅದಕ್ಕಾಗಿ ನಾವು ಹಲವಾರು ವರ್ಷಗಳಿಂದ ಕಾಯುತ್ತಿದ್ದೇವೆ. ಈಗ ಬೀದಿಗಿಳಿದು ಹೋರಾಡುತ್ತಿದ್ದೇವೆ ಎಂದು ಮಾಜಿ ಸೈನಿಕರೊಬ್ಬರು ಹೇಳಿದರು.

”ಸಮಾನ ಶ್ರೇಣಿ, ಸಮಾನ ಪಿಂಚಣಿ”(ಒಆರ್ ಒಪಿ) ಯೋಜನೆ ಮಾಜಿ ಸೇನಾಧಿಕಾರಿಗಳ ದೀರ್ಘಕಾಲದ ಬೇಡಿಕೆಯಾಗಿದ್ದು, ಸಮಾನ ಶ್ರೇಣಿಯಲ್ಲಿ ಮತ್ತು ಸಮಾನ ಅವಧಿಯವರೆಗೆ ಸೇವೆ ಮಾಡಿ ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ನೀಡುವ ಪಿಂಚಣಿ ಇದಾಗಿದೆ.

Write A Comment