ರಾಷ್ಟ್ರೀಯ

ಸಂಸತ್ ಅಧಿವೇಶನ: ರಾಹುಲ್ ವಿರುದ್ಧ ಕೇಸ್‌: ಗಡ್ಕರಿ ಗುಡುಗು; ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಎಚ್ಚರಿಕೆ ನೀಡಿದ ಗಡ್ಕರಿ/ ಸಂಸತ್ತಿನ ಒಳಗೆ ಹೊರಗೆ ಪ್ಲೇಕಾರ್ಡ್‌ಗಳ ಅಬ್ಬರ

Pinterest LinkedIn Tumblr

parliament-delhi-jpgಹೊಸದಿಲ್ಲಿ: ಪ್ರತಿಪಕ್ಷಗಳು ಹಾಗೂ ಆಡಳಿತಾರೂಢ ಪಕ್ಷದ ಜಟಾಪಟಿಯಿಂದಾಗಿ ಸಂಸತ್ತಿನ ಮುಂಗಾರು ಅಧಿವೇಶನದ ನಾಲ್ಕನೇ ದಿನವೂ ವ್ಯರ್ಥವಾಗಿ ಉಭಯ ಸದನಗಳ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.

ಲಲಿತ್‌ಗೇಟ್, ವ್ಯಾಪಂ ಹಗರಣಗಳ ವಿರುದ್ಧ ಸಿಡಿದು ಬಿದ್ದಿರುವ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ಆರ್ಭಟದಲ್ಲಿ ಇಡೀ ವಾರದ ಕಲಾಪ ತೊಳೆದು ಹೋಗಿದೆ. ಪ್ರತಿಪಕ್ಷಗಳನ್ನು ಹಣಿಯಲು ಆಡಳಿತಾರೂಢ ಬಿಜೆಪಿಯೂ ಸಂಸತ್ತಿನೊಳಗೆ ಪ್ರತಿಭಟನೆಗೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಸವಾಲು, ಪ್ರತಿ ಸವಾಲು ಹಾಕುವ ವಿದ್ಯಮಾನಕ್ಕೆ ರಾಜ್ಯಸಭೆಯು ಶುಕ್ರವಾರ ಸಾಕ್ಷಿಯಾಯಿತು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ‘ಕ್ರಿಮಿನಲ್’ ಎಂಬ ಧಾಟಿಯಲ್ಲಿ ಸಂಬೋಧಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡುಗಿದರು. ”ಸರಿಯಾದ ತಿಳಿವಳಿಕೆ ಇಲ್ಲದೆ ಸುಷ್ಮಾಜೀ ವಿರುದ್ಧ ರಾಹುಲ್ ದೂರುತ್ತಿದ್ದಾರೆ. ಸುಷ್ಮಾಜೀ ಯಾವುದೇ ತಪ್ಪು ಮಾಡಿಲ್ಲ. ಕಚೇರಿ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿಲ್ಲ. ಆದರೂ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸುತ್ತಿರುವ ರಾಹುಲ್ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಇಲ್ಲವಾದರೆ ಅವರ ವಿರುದ್ಧ ಮಾನನಷ್ಟ ಖಟ್ಲೆ ಹೂಡಲಾಗುವುದು,” ಎಂದು ಗಡ್ಕರಿ ಅಬ್ಬರಿಸಿದರು.

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್, ”ಆಧಾರವೇ ಇಲ್ಲದೆ ಕಾಂಗ್ರೆಸ್ ವಿರುದ್ಧ ನೀವು ಮಾಡುತ್ತಿರುವ ಆರೋಪಗಳ ವಿರುದ್ಧ ನಾವೂ ಸಹ ಮೊಕದ್ದಮೆ ಹೂಡುತ್ತೇವೆ. ಈಗಾಗಲೇ ಸಾಕಷ್ಟು ಪ್ರಕರಣಗಳ ಹೊರೆ ಹೊತ್ತಿರುವ ನಿಮಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ,” ಎಂದು ಎಚ್ಚರಿಸಿದರು.

ಬಿಜೆಪಿಯಿಂದಲೂ ಪ್ರತಿಭಟನೆ!
ಮೇಲ್ಮನೆ ಸಮಾವೇಶಗೊಳ್ಳುತ್ತಲೇ ಲಲಿತ್‌ಗೇಟ್ ಹಾಗೂ ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್, ರಾಜಸ್ಥಾನ ಸಿಎಂ ವಸುಂಧರಾ ರಾಜೆ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಆಗ್ರಹಿಸಿದ ಕಾಂಗ್ರೆಸ್ ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಲು ಆರಂಭಿಸಿದರು.

ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳಲ್ಲಿ ಸದ್ದು ಮಾಡುತ್ತಿರುವ ಹಗರಣಗಳು, ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್, ಹಿಮಾಚಲಪ್ರದೇಶದ ಸಿಎಂ ವೀರಭದ್ರಸಿಂಗ್, ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯಿ ಹೆಗಲೇರಿರುವ ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಸದಸ್ಯರು, ಸಭಾಪತಿ ವೇದಿಕೆ ಬಳಿಸಾರಿ ಪ್ರತಿಭಟನೆಗೆ ಕುಳಿತರು.

ಇದರಿಂದ ಅಚ್ಚರಿಗೊಳಗಾದ ಜೆಡಿಯು ವರಿಷ್ಠ ಶರದ್ ಯಾದವ್, ”ಆಡಳಿತಾರೂಢ ಸದಸ್ಯರೇ ಧರಣಿಗೆ ಕುಳಿತಿರುವುದು ಎಂದೂ ಕಂಡು ಕೇಳಿಲ್ಲದ ಅಭೂತಪೂರ್ವ ಬೆಳವಣಿಗೆ. ಅವರು ಯಾರ ನೆರವು ಕೇಳುತ್ತಿದ್ದಾರೆ? ದೇವರ ಸಹಾಯವನ್ನೇ,” ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯರ ಪ್ರತಿಭಟನೆಯಿಂದ ಕೆರಳಿದ ಉಪ ಸಭಾಪತಿ ಕುರಿಯನ್ ಅವರು, ”ಬಿಜೆಪಿ ಸದಸ್ಯರೇಕೆ ಹೀಗೆ ವರ್ತಿಸುತ್ತಿದ್ದಾರೆ? ನೀವೇ ಕಲಾಪ ಹಾಳು ಮಾಡುತ್ತಿದ್ದೀರಲ್ಲ,” ಎಂದು ಕೋಪದಿಂದ ನುಡಿದರು. ಇದಕ್ಕೆ ಸಮ್ಮತಿಸಿದ ಆಜಾದ್, ”ನಾವಲ್ಲ, ಬಿಜೆಪಿ ಸದಸ್ಯರಿಂದಲೇ ಕಲಾಪ ಹಾಳಾಗುತ್ತಿದೆ,” ಎಂದು ದೂರಿದರು.

ಕೆರಳಿದ ಸ್ಪೀಕರ್ ಮಹಾಜನ್
ಲೋಕಸಭೆಯಲ್ಲೂ ಪ್ರತಿಪಕ್ಷಗಳ ಗಲಾಟೆ ಜೋರಾಗಿತ್ತು. ಕಲಾಪ ಆರಂಭಗೊಳ್ಳುತ್ತಲೇ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರತಿಪಕ್ಷ ನಾಯಕರು ನೀಡಿದ್ದ ನಿಲುವಳಿ ಸೂಚನೆಗಳನ್ನು ಪ್ರಸ್ತಾಪಿಸಿದರು.

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯ್ಲಿ ಅವರು ಲಲಿತ್‌ಗೇಟ್ ವಿರುದ್ಧ, ವ್ಯಾಪಂ ಹಗರಣದ ಸಂಬಂಧ ಸಿಪಿಐನ ಮೊಹಮದ್ ಸಲೀಮ್ ಹಾಗೂ ಆಪ್‌ನ ಭಗವಂತ್ ಮಾನ್ ಅವರು ನಿಲುವಳಿ ಸೂಚನೆ ಮಂಡಿಸುವುದಾಗಿ ನೋಟಿಸ್ ಕೊಟ್ಟಿದ್ದರು. ಆದರೆ, ಇವನ್ನು ತಾವು ತಿರಸ್ಕರಿಸಿರುವುದಾಗಿ ಹೇಳಿದ ಸ್ಪೀಕರ್ ಮಹಾಜನ್, ಪ್ರಶ್ನೋತ್ತರ ಅವಧಿಯನ್ನು ಆರಂಭಿಸಲು ಮೊದಲಾದರು. ಇದರಿಂದ ವ್ಯಗ್ರರಾದ ಪ್ರತಿಪಕ್ಷಗಳ ಸಂಸದರು, ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸ್ಪೀಕರ್ ವೇದಿಕೆ ಬಳಿಸಾರಿ ಘೋಷಣೆ ಕೂಗಿದರು. ಇದರಿಂದ ಆಕ್ರೋಶಭರಿತರಾದ ಮಹಾಜನ್, ”ಕಲಾಪ ನಡೆಸುವುದು ನಿಮಗೆ ಇಷ್ಟವಿಲ್ಲ. ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದೂ ನಿಮಗೆ ಬೇಕಿಲ್ಲ,” ಎಂದು ಕುಟುಕಿದರು. ಗಲಾಟೆ ನಿಲ್ಲದ ಕಾರಣ ಸೋಮವಾರದವರೆಗೆ ಕಲಾಪ ಮುಂದೂಡಿದರು.

ಪ್ರಶ್ನೋತ್ತರ ಸಮಯ
-ಸೇನೆಯಲ್ಲಿ 9,642 ಸಾವಿರ ಅಧಿಕಾರಿಗಳು, ನೌಕಾಪಡೆಯಲ್ಲಿ 1,779 ಸಿಬ್ಬಂದಿ ಕೊರತೆ; 2012ರಿಂದ ಆರ್ಮಿಯಲ್ಲಿ 644, ನೌಕಾಪಡೆಯ 343, ವಾಯುಪಡೆಯ 441 ಅಧಿಕಾರಿಗಳ ಸ್ವಯಂ ನಿವೃತ್ತಿ

-ಕಳೆದ ಮೂರು ವರ್ಷಗಳಲ್ಲಿ 3 ಸುಖೋಯ್ ಸೇರಿ 20 ಯುದ್ಧವಿಮಾನಗಳ ಪತನ; ಇಬ್ಬರು ವಾಯುಪಡೆ ಸಿಬ್ಬಂದಿ ಸಾವು, ಹಲವು ನಾಗರಿಕರಿಗೆ ಗಾಯ

-ಲೋಕಸಭೆ, ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸೀಟುಗಳನ್ನು ಮೀಸಲಿಡುವ ಮಹಿಳಾ ಮೀಸಲು ವಿಧೇಯಕ ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿಲ್ಲ.

Write A Comment