ರಾಷ್ಟ್ರೀಯ

ಟಾಪ್ ಟೆನ್ ಕ್ರಿಮಿನಲ್‌ಗಳಲ್ಲಿ ಮೋದಿ ಒಬ್ಬರು ಎಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್

Pinterest LinkedIn Tumblr

moಫೈಜಾಬಾದ್: ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತ ಗಮನ ಸೆಳೆಯುವ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಮತ್ತೆ ಪ್ರಧಾನಿ ಮೋದಿ ತಂಟೆಗೆ ಬಂದಿದ್ದಾರೆ. ಮೋದಿ ಜಗತ್ತಿನ ಪ್ರಮುಖ 10 ಕ್ರಿಮಿನಲ್‌‌ಗಳ ಪೈಕಿ ಒಬ್ಬರು ಎಂದು ಹೇಳುವ ಮೂಲಕ ಹೊಸದೊಂದು ವಿವಾದವನ್ನು ಅವರು ತಲೆಗೆ ಸುತ್ತಿಕೊಂಡಿದ್ದಾರೆ.

ಫೈಜಾಬಾದ್‌ನಲ್ಲಿ ನಡೆದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಆಜಂ ಖಾನ್, ಮೋದಿಯ ವಿರುದ್ಧ ಕಟುವಾದ ಮಾತುಗಳನ್ನು ಹರಿಯ ಬಿಟ್ಟರು. ಮೋದಿ ಜಗತ್ತಿನ 10 ಅಪರಾಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದಿದಷ್ಟೇ ಅಲ್ಲದೇ ಮೋದಿಗೆ ದರೋಡೆಕೋರನ ಪಟ್ಟವನ್ನಿತ್ತಿದ್ದಾರೆ.

ಮೋದಿಯನ್ನು ಬಾದಶಾ ಎಂದು ಹಂಗಿಸಿದ ಅವರು ಬಾದಶಾ (ಮೋದಿ) ಹೆಸರು ಗೂಗಲ್ ಸರ್ಚ್‌‌ನಲ್ಲಿ ಜಗತ್ತಿನ ಟಾಪ್ 10 ಕ್ರಿಮಿನಲ್‌‌ಗಳ ಪಟ್ಟಿಯಲ್ಲಿದೆ ಎಂದರೆ ಈ ದೇಶದ ಗತಿ ಏನು ಎಂದು ವ್ಯಂಗ್ಯವಾಡಿದ್ದಾರೆ.

“ಮೋದಿ ಕೇವಲ ಕ್ರಿಮಿನಲ್ ಅಲ್ಲ. ನಂಬರ್ 1 ಸುಳ್ಳುಗಾರ, ಚುನಾವಣೆಗೂ ಪೂರ್ವ ಜನತೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕಪ್ಪು ಹಣವನ್ನು ಭಾರತಕ್ಕೆ ಮರಳಿ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೂ ತಲಾ 15 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿಕೊಂಡಿದ್ದರು. ಅದು ಸುಳ್ಳೆಂದು ಸಾಬೀತಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಯುವಜನಾಂಗಕ್ಕೆ ಉದ್ಯೋಗವನ್ನು ಕಲ್ಪಿಸಿ ಕೊಡಲು ಸಹ ಸರಕಾರ ವಿಫಲವಾಗಿದೆ”, ಎಂದು ಖಾನ್ ಗುಡುಗಿದ್ದಾರೆ.

ಕೆಲ ದಿನಗಳ ಹಿಂದೆ ಅಂತರ್ಜಾಲ ಹುಡುಕು ತಾಣ ಗೂಗಲ್‌ನಲ್ಲಿ ‘ಟಾಪ್‌ 10 ಕ್ರಿಮಿನಲ್ಸ್‌’ ಎಂದು ಹುಡುಕಾಟ ನಡೆಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವೂ ಕಾಣಿಸಿಕೊಳ್ಳುತ್ತಿತ್ತು. ಇಂಟರ್ನೆಟ್‌ ಲೋಕದಲ್ಲಿ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ಮೋದಿ ಅಷ್ಟೇ ಅಲ್ಲ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ನಟ ಹೃತಿಕ್‌ ರೋಶನ್‌ ಅವರ ಭಾವಚಿತ್ರಗಳೂ “ಕ್ರಿಮಿನಲ್‌ ಹುಡುಕಾಟ’ದಲ್ಲಿ ಕಾಣಿಸಿಕೊಂಡಿತ್ತು. ತನ್ನ ತಪ್ಪಿಗಾಗಿ ಗೂಗಲ್ ಕ್ಷಮೆಯನ್ನು ಯಾಚಿಸಿತ್ತು.

Write A Comment