ರಾಷ್ಟ್ರೀಯ

14 ವರ್ಷ ಶಿಕ್ಷೆ ಅನುಭವಿಸಿದವರ ಬಿಡುಗಡೆಗೆ ಸುಪ್ರೀಂ ಅಸ್ತು

Pinterest LinkedIn Tumblr

India-Jails

ಹೊಸದಿಲ್ಲಿ: ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಜೈಲಲ್ಲಿ ಕಳೆದವರನ್ನು ಬಿಡುಗಡೆ ಮಾಡುವ ಹಕ್ಕನ್ನು ಚಲಾಯಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಕೋರ್ಟ್‌ ಮತ್ತೆ ದಯಪಾಲಿಸಿದೆ.

ಅಪರಾಧ ನಡೆಸಿ ಅದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಗಳನ್ನು 14 ವರ್ಷದ ಜೈಲು ಶಿಕ್ಷೆ ಬಳಿಕ ಕ್ಷಮಿಸಿ ಮತ್ತೆ ಸ್ವತಂತ್ರ ಜೀವನದ ಕಡೆಗೆ ಮುನ್ನಡೆಯಲು ಅವರಿಗೆ ಅವಕಾಶ ಮಾಡಿಕೊಡುವ ರಾಜ್ಯ ಸರಕಾರಗಳ ಹಕ್ಕನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿರುವುದರಿಂದ ಇಂಥ ಸ್ಥಿತಿಯಲ್ಲಿರುವ ಸಾವಿರಾರು ಕೈದಿಗಳು ನಿಟ್ಟುಸಿರು ಬಿಡುವಂತಾಗಿದೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರು ಕಳೆದ 22 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವುದರಿಂದ ಅವರನ್ನು ಬಿಡುಗಡೆ ಮಾಡುವ ತಮಿಳುನಾಡು ಸರಕಾರದ ನಿರ್ಧಾರದ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಕಳೆದ ವರ್ಷ ಜುಲೈ 14ರಂದು ರಾಜ್ಯ ಸರಕಾರಗಳ ಹಕ್ಕಿಗೆ ತಡೆ ವಿಧಿಸಿತ್ತು. ಆದರೆ ಗುರುವಾರ ಶಿಕ್ಷೆ ಅನುಭವಿಸುತ್ತಿರುವವರು ನಿಟ್ಟುಸಿರುವ ಬಿಡುವಂತಹ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ.

ಇದು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಳ್ಳಲು ಬಯಸುತ್ತಿರುವ ದೇಶದ ನಾನಾ ರಾಜ್ಯಗಳ ಜೈಲುಹಕ್ಕಿಗಳಿಗೆ ಅವಕಾಶ ಬಾಗಿಲನ್ನು ತೆರೆದಿದೆ.

ಹಲವು ಪ್ರಕರಣಗಳಿಗಿಲ್ಲ ಅವಕಾಶ:

ಹಾಗಂತ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಲ್ಲರಿಗೂ ಈ ಅವಕಾಶ ಲಭ್ಯವಾಗದು. ಏಕೆಂದರೆ ಲೈಂಗಿಕ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಗೆ ತುತ್ತಾಗಿರುವವರಿಗೆ ಈ ಆದೇಶ ಅನ್ವಯಿಸದು ಎಂದು ಸ್ವತಃ ಸುಪ್ರೀಂಕೋರ್ಟ್‌ ಪೀಠ ಸ್ಪಷ್ಟಪಡಿಸಿದೆ.

ಅಲ್ಲದೆ ಸಿಬಿಐ ಸೇರಿದಂತೆ ಕೇಂದ್ರ ಸರಕಾರದ ಸಂಸ್ಥೆಗಳು ತನಿಖೆ ನಡೆಸಿ, ಅಪರಾಧ ಸಾಬೀತಾದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವವರಿಗೂ ಬಿಡುಗಡೆಯ ಭಾಗ್ಯ ಲಭ್ಯವಾಗದು. ಇದಲ್ಲದೆ ನ್ಯಾಯಾಲಯಗಳು ಶಿಕ್ಷೆಯನ್ನು 20 ವರ್ಷ ಇಲ್ಲವೇ 25 ವರ್ಷ ಎಂದೆಲ್ಲ ನಿಗದಿಪಡಿಸಿದ ಪ್ರಕರಣಗಳಲ್ಲೂ ಕೈದಿಯನ್ನು 14 ವರ್ಷಗಳ ವಿನಾಯಿತಿಯಡಿ ಬಿಡುಗಡೆ ಮಾಡಲಾಗದು ಎಂದು ಪೀಠ ಹೇಳಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದವರ ಬಿಡುಗಡೆಯನ್ನು ಕೇಂದ್ರ ಸರಕಾರ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣವಾಗಿ ಅಂತಿಮ ತೀರ್ಪು ಬರುವವರೆಗೆ ದೋಷಿಗಳನ್ನು ಬಿಡುಗಡೆಗೊಳಿಸಬಾರದು ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

Write A Comment