ರಾಷ್ಟ್ರೀಯ

56 ಇಂಚಿನ ಎದೆ 5.6 ಇಂಚಿಗೆ ಇಳಿಯುತ್ತೆ: ಮೋದಿ ಕಾಲೆಳೆದ ರಾಹುಲ್‌ ಗಾಂಧಿ

Pinterest LinkedIn Tumblr

rahulಜೈಪುರ: ‘ಅಳಿಯ’ನ ಬಗ್ಗೆ ಪ್ರಧಾನಿ ಕಾಲೆಳೆದ ಒಂದು ಗಂಟೆ ಬೆನ್ನಲ್ಲೇ ತಿರುಗೇಟು ನೀಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಇನ್ನಾರು ತಿಂಗಳಲ್ಲಿ ನರೇಂದ್ರ ಮೋದಿ ಅವರ 56 ಇಂಚಿನ ಎದೆ 5.6 ಇಂಚಿಗೆ ಇಳಿಯಲಿದೆ ಎಂದು ಗುಡುಗಿದ್ದಾರೆ.

ಜಮ್ಮು-ಕಾಶ್ಮೀರದ ಸಚಿವ ಹಾಗೂ ಸಂಸದರಾಗಿದ್ದ ಡಿ. ಗಿರ್‌ಧಾರಿ ಲಾಲ್ ಡೋಗ್ರಾ ಅವರ ಜನ್ಮ ಶತಮಾನೋತ್ಸವದಲ್ಲಿ ಜಮ್ಮುವಿನಲ್ಲಿ ಶುಕ್ರವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಗಿರಿಧರ್‌ ಲಾಲ್‌ ಅವರು ಹಣ ಹಾಗೂ ಅಧಿಕಾರದ ಆಸೆ ಇಲ್ಲದೆ ದುಡಿದ ರಾಜಕೀಯ ಕಾಲಮಾನದವರು. ಅವರೆಂದೂ ತಮ್ಮ ಕುಟುಂಬದವರನ್ನು ಸಾರ್ವಜನಿಕ ಜೀವನದಲ್ಲಿ ಮುನ್ನಡೆಗೆ ತರಲು ಬಯಸಿದವರಲ್ಲ. ಅಳಿಯ ಅರುಣ್‌ ಜೇಟ್ಲಿಗೂ ನೆರವಾದವರಲ್ಲ. ಜನರ ನಡುವೆ ಉತ್ತಮರನ್ನು ಆಯ್ಕೆ ಮಾಡಬಲ್ಲವರಾಗಿದ್ದರು. ಜೇಟ್ಲಿ ಅವರನ್ನು ಕಂಡಾಗ ಅವರ ಆಯ್ಕೆ ಅರ್ಥವಾಗುತ್ತದೆ. ಆದರೆ ಇಂದು ಎಂಥ ಅಳಿಯಂದಿರನ್ನು ನಾವು ನೋಡುತ್ತಿದ್ದೇವೆ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಹಾಗೂ ಅಳಿಯ ರಾಬರ್ಟ್‌ ವಾದ್ರಾ ಅವರನ್ನು ಪ್ರಸ್ತಾಪಿಸಿದ್ದರು. ಅವರು

ಇದಕ್ಕೆ ಶುಕ್ರವಾರವೇ ಜೈಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ತೀವ್ರವಾಗಿ ತಿರುಗೇಟು ನೀಡಿರುವ ರಾಹುಲ್‌ ಗಾಂಧಿ, ನಾ ಖಾವುಂಗ, ನಾ ಖಾನೆ ದೂಂಗ(ನಾನೂ ಭ್ರಷ್ಟಾಚಾರದ ಹಣ ತಿನ್ನಲ್ಲ, ಯಾರಿಗೂ ತಿನ್ನಲು ಬಿಡುವುದಿಲ್ಲ) ಎಂದಿದ್ದ ಪ್ರಧಾನಿ ಮೋದಿ ಮಾತು ತಪ್ಪಿದ್ದಾರೆ. ವಸುಂಧರಾ ರಾಜೆ ಅವರನ್ನು ರಿಮೋಟ್‌ ಕಂಟ್ರೋಲ್‌ ಮೂಲಕ ಲಂಡನ್‌ನಲ್ಲಿರುವ ವ್ಯಕ್ತಿ ಆಟವಾಡಿಸುತ್ತಿದ್ದಾರೆ. ಲಲಿತ್ ಮೋದಿ, ವ್ಯಾಪಂ ಹಗರಣದ ಬಗ್ಗೆ ಮೌನ ವಹಿಸಿದ್ದಾರೆ ಎಂದು ದೂರಿದರು.

ಅಲ್ಲದೆ, 56 ಇಂಚಿನ ಎದೆ ಹೇಳಿಕೆಯನ್ನು ಪುನರಾವರ್ತಿಸಿದರಲ್ಲದೆ, ಮೋದೀಜಿ ಅವರ 56 ಇಂಚಿನ ಎದೆ 5.6 ಇಂಚಿಗೆ ಇಳಿಯಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಹೇಳಿಕೆಗೆ ತಕ್ಷಣವೇ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಂಬಿತ್‌ ಪಾತ್ರ, 5.6 ಎಂಎಂನ ದೃಷ್ಟಿ ಇರುವ ಜನರು ಅದಕ್ಕಿಂತಲೂ ದೂರ ನೋಡಲು ಸಾಧ್ಯವಾಗದು ಎಂದು ಹೇಳಿದ್ದಾರೆ.

Write A Comment