ರಾಷ್ಟ್ರೀಯ

ಪ್ರೇಮ ವೈಫಲ್ಯ; ಅಕ್ಕ ತಂಗಿಯರ ಕೊಲೆಯಲ್ಲಿ ಅಂತ್ಯ

Pinterest LinkedIn Tumblr

muಹೈದರಾಬಾದ್: ಪ್ರೇಮ ವೈಫಲ್ಯದಲ್ಲಿ ಹತಾಶೆಗೊಂಡ ಯುವಕನೊಬ್ಬ ಸಹೋದರಿಯರಿಬ್ಬರನ್ನು ಕೊಂದು ಹಾಕಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಮೃತ ದುರ್ದೈವಿಗಳನ್ನು ಎಸ್.ಶ್ರೀಲೇಖಾ(21) ಮತ್ತು ಆಕೆಯ ಹಿರಿಯ ಸಹೋದರಿ ಯಾಮಿನಿ ಸರಸ್ವತಿ(24) ಎಂದು ಗುರುತಿಸಲಾಗಿದೆ. ಅವರು ನಾಗೊಲೆಯ ವಾಣಿಜ್ಯ ತೆರಿಗೆ ಕಾಲೊನಿಯ ನಿವಾಸಿಗಳಾಗಿದ್ದು ಆರೋಪಿಯನ್ನು  ಅಮಿತ್ ಸಿಂಗ್ (22) ಎಂದು ಗುರುತಿಸಲಾಗಿದೆ. ಆತ ಪದವಿ ವಿದ್ಯಾರ್ಥಿಯಾಗಿದ್ದು ಶಾದ್‌ನಗರದ ನಿವಾಸಿಯಾಗಿದ್ದಾನೆ.

ಶ್ರೀಲೇಖಾ ಸಾಗರ್ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬಿ.ಟೆಕ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಆಕೆಯ ಅಕ್ಕ ಕಳೆದ ವರ್ಷವಷ್ಟೇ ಇಂಜಿನಿಯರಿಂಗ್ ಮುಗಿಸಿದ್ದಳು. ಸದ್ಯದಲ್ಲಿಯೇ ಆಕೆಯ ಮದುವೆಯೂ ನಿಶ್ಚಯವಾಗಿತ್ತು.

ಆರೋಪಿ ಮತ್ತು ಶ್ರೀಲೇಖಾ ಪಿಯುಸಿಯಲ್ಲಿ ಜತೆಯಾಗಿಯೇ ಓದಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರಲ್ಲಿ ಪ್ರೇಮ ಸಂಬಂಧವಿತ್ತು ಎಂದು ತಿಳಿದು ಬಂದಿದೆ. ನಂತರ ಇಂಜಿನಿಯರಿಂಗ್ ಓದಲೆಂದು ಹೈದರಾಬಾದ್‌ಗೆ ಹೋದ ನಂತರ ಶ್ರೀಲೇಖಾ ಆತನನ್ನು ದೂರ ಮಾಡಲು ಪ್ರಾರಂಭಿಸಿದ್ದಳು ಎಂದು ಹೇಳಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ 8.30 ಕ್ಕೆ ಶ್ರೀಲೇಖಾ ಮನೆಯ ಬಳಿ ಬಂದ ಅಮಿತ್ ಬಾಗಿಲು ತೆರೆದಿದ್ದುದರಿಂದ ನಿರಾಯಾಸವಾಗಿ ಒಳಗೆ ಬಂದು ಸಹೋದರಿಯರಿಬ್ಬರ ಬಳಿ ವಾದಕ್ಕಿಳಿದಿದ್ದಾನೆ. ವಿವಾದ ತಾರಕಕ್ಕೇರುತ್ತಿದ್ದಂತೆ ಯಾಮಿನಿ ಸಹಾಯವನ್ನು ಕೇಳಲು ಹೊರಗೆ ಧಾವಿಸಿದ್ದಾಳೆ. ಅವಳನ್ನು ಅಡ್ಡಗಟ್ಟಿದ ಅಮಿತ್ ಆಕೆಯನ್ನು 18 ಬಾರಿ ಇರಿದು ಸಾಯಿಸಿದ್ದಾನೆ. ಆಕೆ ನೆಲಕ್ಕುರುಳಿದ್ದಂತೆ ಅಮಿತ್ ಶ್ರೀಲೇಖಾಳ ಹೊಟ್ಟೆಗೂ 8 ಬಾರಿ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆ ನಡೆದ ಸಂದರ್ಭದಲ್ಲಿ ಸಹೋದರಿಯರಿಬ್ಬರೇ ಮನೆಯಲ್ಲಿದ್ದರು. ಮೃತರ ಪೋಷಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

Write A Comment