ರಾಷ್ಟ್ರೀಯ

ಭಾರತದಲ್ಲಿ ವೃದ್ಧರ ಸ್ಥಿತಿ ಶೋಚನೀಯ!: ನಿರ್ಲಕ್ಷಕ್ಕೆ ತುತ್ತಾಗಿರುವ ಶೇ.65ರಷ್ಟು ವೃದ್ಧರು

Pinterest LinkedIn Tumblr

sad

ಹೊಸದಿಲ್ಲಿ, ಜು.13: ಭಾರತದ ಮೂರನೆ ಎರಡಂಶದಷ್ಟು ವೃದ್ಧರು ತಾವು ಕುಟುಂಬದ ಇತರ ಸದಸ್ಯರಿಂದ ಕಡೆಗಣಿಸಲ್ಪಟ್ಟಿದ್ದೇವೆಂದು ಹೇಳುತ್ತಾರೆ ಹಾಗೂ ಮೂರನೆ ಒಂದಂಶದಷ್ಟು ಹಿರಿಯರು ತಾವು ದೈಹಿಕ ಕಿರುಕುಳ ಹಾಗೂ ನಿಂದನೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಿಗಿಂತ ನಗರಪ್ರದೇಶ ಗಳಲ್ಲಿಯೇ ಅಧಿಕ ಸಂಖ್ಯೆಯ ವಯೋವೃದ್ಧರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ.

ಹಿರಿಯ ನಾಗರಿಕರ ಸ್ಥಿತಿಗತಿಗಳ ಕುರಿತಾಗಿ ‘ಏಜ್‌ವೆಲ್ ಪ್ರತಿಷ್ಠಾನ’ವು ಇತ್ತೀಚೆಗೆ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದ ಕಳವಳಕಾರಿ ಅಂಶಗಳಿವು.

‘ಏಜ್‌ವೆಲ್ ಪ್ರತಿಷ್ಠಾನವು’ ತಾನು ಇತ್ತೀಚೆಗೆ ಬಿಡುಗಡೆಗೊಳಿಸಿದ ‘ಭಾರತದಲ್ಲಿ ವಯೋವೃದ್ಧರ ಮಾನವಹಕ್ಕುಗಳು: ಸಾಮಾಜಿಕ ಅಭಿವೃದ್ಧಿಯ ಕುರಿತ ವಿಮರ್ಶಾತ್ಮಕ ದೃಷ್ಟಿಕೋನ’ ಎಂಬ ಅಧ್ಯಯನ ವರದಿಯಲ್ಲಿ ಈ ಅಂಶಗಳನ್ನು ಬಯಲಿಗೆಳೆದಿದೆ. ಈ ವರದಿಯನ್ನು ತಯಾರಿಸಲು ಪ್ರತಿಷ್ಠಾನವು ದೇಶಾದ್ಯಂತ 5 ಸಾವಿರಕ್ಕೂ ಅಧಿಕ ಹಿರಿಯ ನಾಗರಿಕರನ್ನು ಸಂದರ್ಶಿಸಿತ್ತು.

ಸಾಮಾಜಿಕ ಬದಲಾವಣೆಗಳಿಂದ ವಯೋವೃದ್ಧರ ಜೀವನಮಟ್ಟದ ಮೇಲಾ ಗುವ ಪರಿಣಾಮಗಳನ್ನು ತಿಳಿಯುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿತ್ತು. ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸವಾಗಿರುವ 60ಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.89.5ರಷ್ಟು ಮಂದಿ ಬಹುತೇಕ ಆರ್ಥಿಕ ಕಾರಣಗಳಿಂದಾಗಿ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆಯೆಂದು ಭಾವಿಸಿದ್ದಾರೆ.

ಸಮೀಕ್ಷೆಯಲ್ಲಿ ಉತ್ತರಿಸಿದ 2,258 ಮಂದಿ (45.2 ಶೇ.) ಹಿರಿಯ ನಾಗರಿಕರು 60ರಿಂದ 70 ವರ್ಷದೊಳಗಿನವರಾಗಿದ್ದರೆ, 1,574 ಮಂದಿ 71ರಿಂದ 80 ವರ್ಷ ಹಾಗೂ 1,169 ಮಂದಿ 81 ವರ್ಷ ಅಥವಾ ಅದಕ್ಕಿಂತ ಹಿರಿಯ ವಯಸ್ಸಿನವರಾಗಿದ್ದಾರೆ.

2,490 ಪುರುಷರು ಹಾಗೂ 2,510 ಮಹಿಳೆಯರನ್ನು ಅಧ್ಯಯನಕ್ಕಾಗಿ ಸಂದರ್ಶಿಸಲಾಗಿತ್ತು.

ವೇಗವಾಗಿ ಬೆಳೆಯುತ್ತಿರುವ ಅಧುನೀಕತೆ,ಅವಿಭಕ್ತ ಕುಟುಂಬ ವ್ಯವಸ್ಥೆಯ ಅವನತಿ, ಶ್ರಮಿಕಸಮೂಹದ ಹಾಗೂ ಯುವಜನರು ನಗರಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವುದು, ಹಿರಿಯರ ಪಾಲನೆಯ ಮೇಲೆ ಗಂಭೀರವಾದ ದುಷ್ಪರಿಣಾಮವನ್ನು ಬೀರಿದೆಯೆಂದು ಅಧ್ಯಯನ ವರದಿ ತಿಳಿಸಿದೆ.

ತಾವು ವೃದ್ಧಾಪ್ಯದಲ್ಲಿ ನಿರ್ಲಕ್ಷಕ್ಕೊಳ ಗಾಗಿದ್ದೇವೆಂದು ಶೇ. 65.2ಕ್ಕೂ ಅಧಿಕ ಮಂದಿ ಹೇಳಿಕೊಂಡಿದ್ದಾರೆ. ಕುಟುಂಬದೊಳಗೆ ಅಥವಾ ಸಮಾಜದಲ್ಲಿ ತಾವು ದೈಹಿಕ ಕಿರುಕುಳ ಅಥವಾ ನಿಂದನೆಗೊಳಗಾಗಿರುವುದಾಗಿ ಶೇ.54.1ರಷ್ಟು ವೃದ್ಧರು ಹೇಳುತ್ತಾರೆ. ಪ್ರತಿ ನಾಲ್ವರು ವೃದ್ಧರಲ್ಲಿ ಒಬ್ಬರು ಅಂದರೆ ಶೇ.25.3 ಮಂದಿ ತಮ್ಮ ಕುಟುಂಬದ ಸದಸ್ಯರಿಂದ ಶೋಷಣೆಗೊಳಗಾಗಿದ್ದೇವೆಂಬುದನ್ನು ಒಪ್ಪಿಕೊಂಡಿದ್ದಾರೆ.

Write A Comment