ರಾಷ್ಟ್ರೀಯ

86 ದೇಗುಲಗಳ ನೆಲಸಮ ಮಾಡಿದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ಆಕ್ರೋಶಗೊಂಡ ಆರ್‌ಎಸ್‌ಎಸ್‌; ವಸುಂಧರಾ ರಾಜೆ ಅವರನ್ನು ಔರಂಗಜೇಬ್‌ಗೆ ಹೋಲಿಕೆ

Pinterest LinkedIn Tumblr

vasu

ಜೈಪುರ: ನಗರದ 86 ದೊಡ್ಡ ಹಾಗೂ ಸಣ್ಣ ಮಂದಿರಗಳು ನೆಲಸಮಗೊಂಡಿರುವ ವಿಚಾರವಾಗಿ ಅಸಮಾಧಾನಗೊಂಡಿರುವ ಆರ್‌ಎಸ್‌ಎಸ್‌, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಔರಂಗಜೇಬ್‌ಗೆ ಹೋಲಿಸಿದೆ.

ಲಲಿತ್ ಮೋದಿ ವಿವಾದದಿಂದ ನಲುಗಿರುವ ರಾಜ್ಯ ಸರಕಾರದ ವಿರುದ್ಧ ಕಳೆದ ವಾರ ಆರ್‌ಎಸ್‌ಎಸ್‌ ನಾಯಕರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಹಲವಾರು ಮಂದಿರಗಳನ್ನು ಕೆಡವಿದ್ದ ಔರಂಗಬೇಬನ ಆಡಳಿತಕ್ಕೆ ಬಿಜೆಪಿ ಸರಕಾರವನ್ನು ಹೋಲಿಸಿರುವ ಆರ್‌ಎಸ್‌ ಎಸ್‌, ವಿಷಯವನ್ನು ಸಂಘದ ಕೇಂದ್ರ ಕಚೇರಿ ಗಮನಕ್ಕೆ ತರುವುದಾಗಿ ಹೇಳಿದೆ.

ಈ ಮಧ್ಯೆ, ವಿಷಯದ ಬಗ್ಗೆ ಚರ್ಚಿಸಲು ರಾಜೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು. ಮಂದಿರಗಳ ನೆಲಸಮ ಮಾಡುವ ವಿಷಯವನ್ನು ಮೊದಲೇ ಗಮನಕ್ಕೆ ತರದ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

‘ಆರ್‌ಎಸ್‌ಎಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಕೆಲವೇ ದಿನಗಳಲ್ಲಿ ಗೊಂದಲ ಬಗೆಹರಿಯುವ ವಿಶ್ವಾಸ ಇದೆ,’ ಎಂದು ಆರೋಗ್ಯ ಸಚಿವ ರಾಜೇಂದ್ರ ರಾಥೋಡ್‌ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಅಕ್ರಮವಾಗಿ ನಿರ್ಮಾಣವಾಗಿದ್ದ ಧಾರ್ಮಿಕ ಕೇಂದ್ರಗಳನ್ನು ಸ್ಥಳೀಯಾಡಳಿತ ಕೆಡವಿಹಾಕಿತ್ತು. ಕಾರ್ಯಾರಣೆ ವೇಳೆ ಜೈಪುರದ 86 ದೊಡ್ಡ ಹಾಗೂ ಸಣ್ಣ ಮಂದಿರಗಳು ನೆಲಸಮಗೊಂಡಿವೆ.

Write A Comment