ರಾಷ್ಟ್ರೀಯ

ವ್ಯಾಪಂ ಹಗರಣ : ನಿನ್ನೆ ಪತ್ರಕರ್ತ, ಇಂದು ಕಾಲೇಜ್ ಡೀನ್ ಸಾವು; 46ಕ್ಕೂ ಹೆಚ್ಚು ಜನರ ಬಲಿ !

Pinterest LinkedIn Tumblr

dd

ಜಬಲ್ಪುರ (ಮ.ಪ್ರ.), ಜು.5: ಮಧ್ಯ ಪ್ರದೇಶದ ವೃತ್ತಿ ಶಿಕ್ಷಣ ಪರೀಕ್ಷಾ ಮಮಡಳಿ (ವ್ಯಾಪಂ) ಹಗರಣದ ಕಬಂಧ ಬಾಹುಗಳು ಬೆಳೆಯುತ್ತಲೇ ಇದ್ದು, ನಿನ್ನೆ ಪತ್ರಕರ್ತನೊಬ್ಬನ ನಿಗೂಢ ಸಾವಿನ ಬೆನ್ನಲ್ಲೇ ಇಂದು ಇಲ್ಲಿನ ಎನ್.ಎಸ್.ವೈದ್ಯಕೀಯ ಕಾಲೇಜಿನ ಡೀನ್ ಒಬ್ಬರು ಜೀವ ತೆತ್ತಿದ್ದಾರೆ.

ಮಧ್ಯ ಪ್ರದೇಶದಲ್ಲಿನ ಈ ವ್ಯಾಪಂ ಹಗರಣ ದಿನದಿಂದ ದಿನಕ್ಕೆ ಭೂತಾಕಾರವಾಗಿ ಎಲ್ಲೆಲ್ಲಿಗೋ ವ್ಯಾಪಿಸಿಕೊಳ್ಳುತ್ತಿದ್ದು, ಈವರೆಗೆ ಈ ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 46ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಎಲ್ಲಾ ಸಾವುಗಳೂ ಅತ್ಯಂತ ನಿಗೂಢವಾಗಿಯೇ ಉಳಿದಿರುವುದು ಅಚ್ಚರಿಯ ಜತೆಗೆ ಜನರಲ್ಲಿ ಭೀತಿಯನ್ನೂ ಮೂಡಿಸಿವೆ. ವ್ಯಾಪಂ ಹಗರಣ ಕುರಿತಂತೆ ವರದಿ ಮಾಡಲು ಹೋಗಿದ್ದ ಪತ್ರಕರ್ತ ಅಕ್ಷಯ್‌ಸಿಂಗ್ ನಿನ್ನೆ ನಿಗೂಢವಾಗಿ ಮೃತಪಟ್ಟಿದ್ದು, ಇಂದು ದೆಹಲಿಯಲ್ಲಿ ಅವನ ಅಂತ್ಯಕ್ರಿಯೆ ನಡೆಯಿತು.

ಇದಕ್ಕೂ ಮೊದಲೇ ಜಬಲ್ಪುರ ಎನ್‌ಎಸ್ ಮೆಡಿಕಲ್ ಕಾಲೇಜಿನ ಡೀನ್ ಒಬ್ಬರು ದೆಹಲಿಯ ಖಾಸಗಿ ಹೊಟೇಲ್ ಒಂಸದರಲ್ಲಿ ನಿಗೂಢವಾಗೇ ಮೃತಪಟ್ಟಿದ್ದು, ಅವರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ಇವರ ಸಾವೂ ಕೂಡ ಅನುಮಾನಾಸ್ಪದವಾಗಿಯೇ ಇದೆ.

ಸಿಬಿಐ ತನಿಖೆಗೆ ಒತ್ತಾಯ: ಇಡೀ ಪ್ರಕರಣ ಬೃಹದಾಕಾರವಾಗಿದ್ದು, ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಆದರೆ, ಇದನ್ನು ನಿರಾಕರಿಸಿರುವ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ್, ಹಗರಣದ ತನಿಖೆಯನ್ನು ಈಗಾಗಲೇ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸುಪ್ರೀಂಕೊರ್ಟ್‌ನಲ್ಲಿ ಸಿಬಿಐ ತನಿಖೆಗೆ ಒಪ್ಪಿಸಲು ಮನವಿ ಸಲ್ಲಿಸಿತ್ತು. ಆದರೆ, ಅದನ್ನು ತಳ್ಳಿ ಹಾಕಿರುವ ಸುಪ್ರೀಂ, ತನಿಖೆಯನ್ನು ತಾನೇ ನಡೆಸುವುದಾಗಿ ಹೈಕೋರ್ಟ್ ಹೇಳಿರುವುದನ್ನು ಪುರಸ್ಕರಿಸಿದೆ. ಈ ಮಧ್ಯೆ, ನನ್ನ ವ್ಯಾಪ್ತಿಯಲ್ಲಿ ಬರುವುದನ್ನೆಲ್ಲ ನಾನು ಮಾಡುತ್ತಿದ್ದೇನೆ. ಸಿಬಿಐ ತನಿಖೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಸಾವಿನ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಮೃತರ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ್ ಹೇಳಿದ್ದಾರೆ.

Write A Comment