ರಾಷ್ಟ್ರೀಯ

ಕ್ರೆಡಿಟ್ ಕಾರ್ಡ್ ಬೇಕೆ.. ಕಾರ್ಡ್ ಪಡೆಯುವ ಮುನ್ನ ಸ್ವಲ್ಪ ಯೋಚಿಸಿ..!: ಬೇಕಾಬಿಟ್ಟಿ ಕಾರ್ಡ್ ಬಳಕೆ ಮಾಡಿದರೆ ಬ್ಯಾಂಕ್ ಬಿಲ್ಲು ಶಾಕ್ ನೀಡುತ್ತದೆ

Pinterest LinkedIn Tumblr

creditcard1ಇದು ಪ್ಲಾಸ್ಟಿಕ್ ಮನಿ ಯುಗ..ಸಮಾಜದ ಪ್ರತಿಯೊಬ್ಬ ನಾಗರೀಕನ ಕೈಯಲ್ಲಿ ಮೊಬೈಲ್ ಹೇಗೆ ಸಾಮಾನ್ಯವಾಗಿದೆಯೋ ಹಾಗೆಯೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು ಇಂದು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ.

ಕ್ರೆಡಿಟ್ ಕಾರ್ಡ್​ಗಳನ್ನು ನಾವೆಲ್ಲ ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸಲು ಬಳಕೆ ಮಾಡುತ್ತೇವೆ. ಇದು ಕಾರ್ಡ್​ನ ಮೂಲ ಉದ್ದೇಶವೂ ಕೂಡ. ಕೈಗೆ ಕಾರ್ಡ್ ಬಂತು ಎಂದು ಬೇಕಾಬಿಟ್ಟಿ ಬಳಕೆ ಮಾಡಿದರೆ, ಬ್ಯಾಂಕುಗಳು ನೀಡುವ ಬಿಲ್ ಖಂಡಿತಾ ನಮಗೆ ಶಾಕ್ ನೀಡುವುದರಲ್ಲಿ ಅಚ್ಚರಿ ಇಲ್ಲ. ಇದೇ ಕಾರಣಕ್ಕಾಗಿ ಬಹಳಷ್ಟು ಜನ ಕ್ರೆಡಿಟ್ ಕಾರ್ಡ್ ತಂಟೆಗೇ ಹೋಗುವುದಿಲ್ಲ. ಮತ್ತೆ ಕೆಲವರಿಗೆ ಕ್ರೆಡಿಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದಿರುವುದಿಲ್ಲ. ಹಾಗಾಗಿ ಕ್ರೆಡಿಟ್ ಕಾರ್ಡ್ ಯಾವ ರೀತಿ ನಮಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಕ್ರೆಡಿಟ್ ಕಾರ್ಡ್ ನ್ನು ವ್ಯಕ್ತಿಗತವಾಗಿ ನೀಡಲಾಗುತ್ತದೆ. ಇಲ್ಲಿ ನಿಮ್ಮ ವಯಸ್ಸು ಮತ್ತು ತಿಂಗಳ ಆದಾಯವನ್ನು ಲೆಕ್ಕ ಹಾಕಿ ಖರೀದಿ ಲಿಮಿಟ್ ತಿಳಿಸಲಾಗುತ್ತದೆ. ಕಾರ್ಡ್ ಕೊಳ್ಳುವ ಮುನ್ನವೇ ಕಾರ್ಡ್ ನ ಪೂರ್ವಾಪರ ವಿಚಾರಿಸುವುದು ಬುದ್ಧಿವಂತರ ಲಕ್ಷಣ. ಯಾವ-ಯಾವ ಬ್ಯಾಂಕ್ ನ ಖರೀದಿ ಮಿತಿ ಎಷ್ಟಿದೆ. ಅವುಗಳ ಗ್ರೇಸ್ ಪೀರಿಯಡ್ (ಸಾಲ ಮರುಪಾವತಿ ಹೆಚ್ಚುವರಿ ಸಮಯ) ಎಷ್ಟಿದೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಲಿಚ್ಛಿಸುವವರು ಈ ಕೆಳಕಂಡ ಮಾಹಿತಿಗಳನ್ನು ಕಡ್ಡಾಯವಾಗಿ ತಿಳಿದಿರಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?

ಪ್ರತಿಯೊಂದು ಕ್ರೆಡಿಟ್ ಕಾರ್ಡಿಗೂ ಅದರ ಹಿಂಬದಿಯಲ್ಲಿ ಒಂದು ಕಪ್ಪು ಬಣ್ಣದ ಮ್ಯಾಗ್ನೆಟಿಕ್ ಟೇಪ್ ಹಾಕಿರಲಾಗುತ್ತದೆ. ಇದರ ಮೂಲಕ ಕಾರ್ಡ್ ಖಾತೆ ವಿವರಗಳು ಲಭ್ಯವಾಗುತ್ತದೆ. ಖರೀದಿ ಸಮಯದಲ್ಲಿ ನಾವು ಬಿಲ್ ಪಾವತಿಗೆ ಕ್ರೆಡಿಟ್ ಕಾರ್ಡ್ ನೀಡಿದಾಗ ಅದನ್ನು ಸ್ವೈಪ್ ಮಾಡಲಾಗುತ್ತದೆ. ಕಾರ್ಡ್ ಹಿಂಬದಿಯ ಮ್ಯಾಗ್ನೆಟಿಕ್ ಟೇಪ್ ವ್ಯವಹಾರಕ್ಕೆ ನೆರವಾಗುತ್ತದೆ. ಬ್ಯಾಂಕ್ ನೀಡಿರುವ ರಹಸ್ಯ ಪಿನ್ ಸಂಖ್ಯೆಯನ್ನು ದಾಖಲು ಮಾಡಿದ ನಂತರವೇ ಖರೀದಿ ಮೊತ್ತವನ್ನು ವ್ಯಾಪಾರಿ ನಮೂದಿಸಬಹುದು. ದೂರವಾಣಿ ಸಂಪರ್ಕದ ಆಧಾರದಲ್ಲಿ ನಿಮ್ಮ ಬ್ಯಾಂಕ್ ನಿಂದ ಹಣ ಸಂದಾಯವಾಗುತ್ತದೆ.

ಪ್ರಸ್ತುತ ಬಹುತೇಕ ಎಲ್ಲ ಬ್ಯಾಂಕುಗಳು ಆಯಾ ಕಾರ್ಡುದಾರರಿಗೆ ಖರೀದಿ ವ್ಯವಹಾರಗಳ ಮಾಹಿತಿಯನ್ನೂ ತತ್ ಕ್ಷಣವೇ ಸಂಬಂಧಿಸಿದ ಮೊಬೈಲ್ ಫೋನ್ ನಂಬರ್ ಗಳಿಗೆ

ರವಾನಿಸುತ್ತದೆ. ಹೀಗಾಗಿ ಒಂದು ಪರಿಶೀಲನೆ ಸಂದೇಶವನ್ನು ಕಾರ್ಡ್ ಬಳಕೆದಾರರು ಗಮನಿಸಬೇಕಾಗುತ್ತದೆ. ಇದಲ್ಲದೆ ಪ್ರತಿಯೊಂದು ಕಾರ್ಡ್ ಗಳಿಗೂ ಆಯಾ ಬ್ಯಾಂಕುಗಳು ಇಂತಿಷ್ಟು ಖರೀದಿ ಮಿತಿಯನ್ನು ಹೇರಿರುತ್ತವೆ. ನಮ್ಮ ಖರೀದಿ ಮಿತಿಯನ್ನು ನಾವು ಯಾವ ಕಾರಣಕ್ಕೂ ಮೀರುವಂತಿಲ್ಲ. ಪರಿಶೀಲನೆ ಮುಗಿದು ಹಣ ಸಂದಾಯವಾದ ನಂತರ ಎರಡು ಟ್ರಾನ್ಸಾಕ್ಷನ್ ರಸೀದಿಗಳ ಪ್ರತಿ ದೊರೆಯುತ್ತವೆ. ನಮ್ಮ ರುಜು ಹಾಕಿದ ಒಂದನ್ನು ವ್ಯಾಪಾರಿಗೆ ನೀಡಬೇಕು. ಮತ್ತೊಂದನ್ನು ನೀವು ಇಟ್ಟುಕೊಳ್ಳಬೇಕು.

ಕ್ರೆಡಿಟ್ ಕಾರ್ಡ್ ನ ಮಿತಿಗಳೇನು..?

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ನ್ನು ನಗದು ಹಣದ ಬದಲಾಗಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಪ್ರತಿಯೊಂದು ಬ್ಯಾಂಕು ಕಾರ್ಡ್ ಬಳಕೆದಾರನ ಆರ್ಥಿಕ ಹಿನ್ನಲೆ, ಮಾಸಿಕ ಸಂಬಳ, ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಆಯಾ ಬ್ಯಾಂಕುಗಳು ನಿರ್ಧಿಷ್ಟ ಖರೀದಿ ಮಿತಿ ಹೇರಿರುತ್ತವೆ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮೇಲೆ ಶೇ. 3.35 – 3.49 ರವರೆಗೆ ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದು ಬದಲಾಗಬಹುದು. ಆದರೆ ಇತ್ತೀಚೆಗೆ ಡೆಬಿಟ್ ಕಾರ್ಡ್​ಗಳಂತೆಯೇ ಪ್ರತಿ ಕ್ರೆಡಿಟ್ ಕಾರ್ಡ್​ನಲ್ಲೂ ನಗದು ವಿತ್​ಡ್ರಾ ಮಾಡುವ ಅವಕಾಶವನ್ನು ಬ್ಯಾಂಕುಗಳು ಒದಗಿಸಿದೆ. ನಿರ್ದಿಷ್ಟ ಕಾರ್ಡ್​ಗೆ ನಗದು ವಿತ್​ಡ್ರಾ ಮಿತಿಯನ್ನು ವಿಧಿಸಲಾಗಿರುತ್ತದೆ. ಸಾಮಾನ್ಯವಾಗಿ ಈ ಮಿತಿ ಶೇ. 30ರಿಂದ 40ರವರೆಗೆ ಇರುತ್ತದೆ.

ಆದರೆ ಹೀಗೆ ಕ್ರೆಡಿಟ್ ಕಾರ್ಡ್ ನಲ್ಲಿ ಡ್ರಾ ಮಾಡುವ ಹಣಕ್ಕೆ ಬ್ಯಾಂಕುಗಳು ಹೆಚ್ಚುವರಿ ಬಡ್ಡಿಯನ್ನು ಹೇರುತ್ತವೆ. ಕಾರ್ಡ್​ಗಳಲ್ಲೇ ಇದು ಅತ್ಯಂತ ರಿಸ್ಕ್ ಇರುವ ಮತ್ತು ಹೆಚ್ಚು ಶುಲ್ಕವಿರುವ ಸೌಲಭ್ಯ. ಇದನ್ನು ನಗದು ಮುಂಗಡ ಎಂಬುದಾಗಿ ಪರಿಗಣಿಸಲಾಗುತ್ತದೆ. ಕೆಲವು ಬ್ಯಾಂಕ್​ಗಳು ಪ್ರತಿ ವಿತ್​ಡ್ರಾಗೆ ನಿಗದಿತ ಶುಲ್ಕವನ್ನು ವಿಧಿಸುತ್ತವಾದರೆ, ಇನ್ನು ಕೆಲವು ಬ್ಯಾಂಕ್​ಗಳು ನಗದು ಪಡೆದ ಮೊತ್ತವನ್ನು ಆಧರಿಸಿ ಶುಲ್ಕ ವಿಧಿಸುತ್ತವೆ. ಇದರ ಜತೆಗೇ ಕೆಲವು ಬ್ಯಾಂಕ್​ಗಳಲ್ಲಿ ಬಡ್ಡಿಯನ್ನೂ ವಿಧಿಸಲಾಗುತ್ತದೆ. ಹೀಗಾಗಿ ಕಾರ್ಡ್ ತೆಗೆದುಕೊಳ್ಳುವಾಗಲೇ ಅತಿ ಸಣ್ಣ ಅಕ್ಷರಗಳಲ್ಲಿ ಬರೆದ ಕಂಡೀಷನ್ಸ್ ಅಪ್ಲೈ ಅಡಿಯಲ್ಲಿರುವ ಮಾಹಿತಿಗಳನ್ನು ಓದಿಕೊಳ್ಳದಿದ್ದರೆ ಬಿಲ್ ಬಂದಾಗ ಗಾಬರಿಯಾದೀತು.

ಬ್ಯಾಂಕುಗಳಿಗೆ ಅಸ್ತ್ರವಾಗಿ ಪರಿಣಮಿಸಿರುವ ಫೈನಾನ್ಸ್ ಚಾರ್ಜ್

ಫೈನಾನ್ಸ್ ಚಾರ್ಜ್ ಇದು ಬ್ಯಾಂಕುಗಳ ಹೊಸ ಅಸ್ತ್ರವಾಗಿ ಪರಿಣಮಿಸಿದ್ದು, ಸಾಮಾನ್ಯವಾಗಿ ಪ್ರತಿ ಬಿಲ್ ಬಂದಾಗಲೂ ಕನಿಷ್ಠ ಪಾವತಿ ಮೊತ್ತ ಎಂಬ ಉಲ್ಲೇಖವಿರುತ್ತದೆ. ಒಟ್ಟು ಬಿಲ್ ಮೊತ್ತ 5000 ರು. ಆಗಿದೆ ಎಂದಿಟ್ಟುಕೊಳ್ಳಿ. ಆಗ 500 ರೂ. ಕನಿಷ್ಠ ಪಾವತಿ ಮೊತ್ತ ಎಂದು ಬಿಲ್​ನಲ್ಲಿ ನಮೂದಾಗಿರುತ್ತದೆ. ಹೀಗಾಗಿ ಕೇವಲ 500 ರೂ. ತುಂಬಿದರೆ ಲೇಟ್ ಫೀ ಕಟ್ಟುವ ಅಗತ್ಯವಿಲ್ಲ ಎಂದು ನೀವು ನಿರಾಳವಾದರೆ ಮುಂದಿನ ಬಾರಿ ಬಿಲ್ ನಲ್ಲಿ ನಿಮಗೆ ಆಘಾತ ಕಾದಿರುತ್ತದೆ. ಯಾಕೆಂದರೆ ಈ ಬಿಲ್​ನಲ್ಲಿ ನೀವು ಪಾವತಿ ಮಾಡದೇ ಉಳಿದ 4500 ರೂ.ಗೆ ಫೈನಾನ್ಸ್ ಚಾರ್ಜ್ ಹಾಕಲಾಗುತ್ತದೆ. ಅಷ್ಟೇ ಅಲ್ಲ, ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಕೊಂಡ ನಂತರದಲ್ಲಿ ಪ್ರತಿ ಬಿಲ್ ಅವಧಿಯಲ್ಲಿ ಗ್ರೇಸ್ ಅವಧಿನೀಡಲಾಗುತ್ತದೆ. ಉದಾಹರಣೆಗೆ ಮಾರ್ಚ್ 5ರಿಂದ ಏಪ್ರಿಲ್ 5ರವರೆಗಿನ್ ಬಿಲ್ ಪಾವತಿ ಮಾಡಲು ನಂತರದ 25 ದಿನಗಳ ಅವಕಾಶ ನೀಡಲಾಗುತ್ತದೆ. ಏಪ್ರಿಲ್ 30ಕ್ಕೆ ನೀವು ಬಿಲ್ ಪಾವತಿ ಮಾಡಿದರೆ ಸಾಕು. ಈ 25 ದಿನಗಳ ಅವಧಿಯಲ್ಲಿ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ. ಒಂದು ವೇಳೆ ನೀವು ಈ ಅವಧಿಯಲ್ಲಿ ಒಟ್ಟು ಮೊತ್ತ ಪಾವತಿ ಮಾಡದಿದ್ದರೆ ಮುಂದೆ ಗ್ರೇಸ್ ಅವಧಿ ನೀಡುವುದಿಲ್ಲ. ಅದರಂತೆ ವಾರ್ಷಿಕ ಶೇ.24 ರಿಂದ 25ರಷ್ಟು ಬಡ್ಡಿಯೂ ಹೆಚ್ಚಾಗುತ್ತಾ ಬೆಳೆಯುತ್ತದೆ.

ವಿವಿಧ ಆಫರ್ ಗಳಿಗೆ ಮಾರುಹೋಗದಿರಿ

ಇನ್ನು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ವಿವಿಧ ಬ್ಯಾಂಕುಗಳು ಮತ್ತು ವಿವಿಧ ಸಂಸ್ಥೆಗಳು ಹಲವು ಆಫರ್ ಗಳನ್ನು ನೀಡುವ ಮೂಲಕ ಅಥವಾ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತದೆ. ಆದರೆ ಈ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆಯಿಂದಿದ್ದು, ರಿಯಾಯಿತಿ ಮತ್ತು ಅಫರ್ ಗಳ ಸಾದಕಭಾದಕಗಳನ್ನು ಅವಲೋಕಿಸಿ ಮುನ್ನಡೆಯುವುದು ಒಳ್ಳೆಯದು. ಪ್ರಮುಖವಾಗಿ ಸೇವಾಶುಲ್ಕಗಳ ಕುರಿತು ನೇರವಾಗಿ ಸಂಬಂಧಪಟ್ಟ ಬ್ಯಾಂಕುಗಳಿಂದಲೇ ಮಾಹಿತಿ ಪಡೆಯುವುದು ಉತ್ತಮ.

ಕಾರ್ಡ್ ಬಳಕೆ ಹೇಗಿರಬೇಕು..?

ವಿವಿಧ ಬ್ಯಾಂಕುಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಆಫರ್ ಗಳನ್ನು ನೀಡುತ್ತವೆ. ಆದರೆ ಈ ಆಫರ್ ಗಳಿಗೆ ಮಾರುಹೋಗಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದರೆ, ನಿಮ್ಮ ಖರ್ಚು ವೆಚ್ಚದ ಮೇಲೆ ನಿಗಾ ತಪ್ಪಿ ಅದು ದುಂದುವೆಚ್ಚಕ್ಕೆ ಕಾರಣವಾಗಬಹುದು. ವಿವಿಧ ಆಫರ್ ಗಳಿಗೆ ಕಾರಣವಾಗುವ ಕ್ರೆಡಿಟ್ ಕಾರ್ಡ್ ಮೇಲಿನ ರಿವಾರ್ಡ್ ಪಾಯಿಂಟ್ಸ್ ಆಸೆಯಲ್ಲಿ ನಾವು ಅನಗತ್ಯ ಖರ್ಚು ಮಾಡುವ ಸಂಭವವಿರುತ್ತದೆ. ಹೀಗಾಗಿ ನಿಯಮಿತವಾಗಿ ಅಗತ್ಯಬಿದ್ದಲ್ಲಿ ಅಥವಾ ಅನಿವಾರ್ಯ ಎಂಬಲ್ಲಿ ಮಾತ್ರ ಕಾರ್ಡ್ ಬಳಕೆ ಮಾಡಿದರೆ ಉತ್ತಮ. ಸುಮ್ಮನೆ ರಿವಾರ್ಡ್ ಪಾಯಿಂಟ್ಸ್ ದೊರೆಯುತ್ತದೆ ಎಂದು ಖರೀದಿ ಮಾಡುವುದು ಅಪಾಯಕಾರಿ ಬೆಳವಣಿಗೆ. ಅಲ್ಲದೆ ದೊರೆತ ರಿವಾರ್ಡ್ ಪಾಯಿಂಟ್ಸ್ ಗಳನ್ನು ನಿಗದಿತ ಅವಧಿಯಲ್ಲಿ ಬಳಸಿಕೊಳ್ಳಬೇಕು ಎಂಬ ಕಾರಣಕ್ಕೆ ಸುಖಾಸುಮ್ಮನೆ ಮತ್ತಷ್ಟು ಖರೀದಿಗೆ ಇಳಿಯುವುದು ಆರ್ಥಿಕ ದುಸ್ಥಿತಿಗೆ ತಳ್ಳಬಹುದು.

ಒಂದು ವೇಳೆ ನೀವು ಆನ್ ಲೈನ್ ನಲ್ಲಿ ಕಾರ್ಡ್ ಬಳಕೆ ಮಾಡುತ್ತಿದ್ದರೆ, ಸುರಕ್ಷತಾ ಕ್ರಮಗಳನ್ನು ಅನುಸರಿಸಲೇ ಬೇಕು. ಯಾವ ಯಾವ ಸಂದರ್ಭಗಳಲ್ಲಿ ಕೋಡ್ ಬಳಸಬೇಕು ಎಂಬ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿರಬೇಕು. ಈ ಬಗ್ಗೆ ಬ್ಯಾಂಕುಗಳಿಂದ ಅಥವಾ ಸಂಬಂಧಿಸಿದ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬೇಕು. ಇನ್ನು ಕಾರ್ಡ್ ಅನ್ನು ಸಿಕ್ಕಸಿಕ್ಕ ಕಡೆಗಳಲ್ಲಿ ಹೇಗೆಂದರೆ ಹಾಗೆ ಬಳಕೆ ಮಾಡಬಾರದು. ಐಷಾರಮಿ ವಸ್ತುಗಳನ್ನು ಕೊಳ್ಳಲು ಅಥವಾ ಶಾಪಿಂಗ್ ಹುಚ್ಚಿಗಾಗಿ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳಬಾರದು. ಅಗತ್ಯಬಿದ್ದಲ್ಲಿ ಅಥವಾ ಅನಿವಾರ್ಯ ಎಂಬಲ್ಲಿ ಮಾತ್ರ ಕಾರ್ಡ್ ಬಳಕೆ ಉತ್ತಮ. ಬಿಲ್ ಪಾವತಿಯಂಥ ಸಂದರ್ಭಗಳಲ್ಲಿ ಇದನ್ನು ಬಳಸಿಕೊಳ್ಳುವುದು ಒಳಿತು.

ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ತುಂಬಿದರೆ ಸಾಕು ಎಂದು ಅಷ್ಟಕ್ಕೇ ಸುಮ್ಮನಾದರೆ ಅಥವಾ ವಿಳಂಬ ಬಿಲ್ ಪಾವತಿ ಮಾಡಿದರೆ ಸುಮ್ಮನೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು. ಇದಲ್ಲದೆ ಈಗಾಗಲೇ ಬಳಕೆ ಮಾಡಿ ಕಂತುಗಳನ್ನು ಕಟ್ಟಿದ ಹಳೆಯ ಖಾತೆಗಳನ್ನು ಮುಚ್ಚುವುದು ಮರೆಯಬಾರದು. ಕಾರ್ಡ್ ಬಳಕೆ ಮಾಡುವ ಸಾಕಷ್ಟು ಮಂದಿ ತಮ್ಮ ಹಳೆಯ ಸಾವದ ಕಂತುಗಳನ್ನು ಪಾವತಿ ಮಾಡಿ ಹಾಗೆಯೇ ಅವುಗಳನ್ನು ಬಿಟ್ಟುಬಿಟ್ಟಿರುತಾರೆ. ಇದರಿಂದ ಕಾರ್ಡ್ ಬಳಕೆ ಮೇಲೆ ದೊರೆಯುವ ರಿವಾರ್ಡ್ ಪಾಯಿಂಟ್ಸ್ ಗಳ ಪರಿಣಾಮ ಬೀರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಹಳೆಯ ಖಾತೆಗಳನ್ನು ಆಗ್ಗಿಂದಾಗ್ಗೆ ಕ್ಲೋಸ್ ಮಾಡುವುದು ಉತ್ತಮ. ಅಲ್ಲದೇ ಅನಗತ್ಯ ತಲೆನೋವು ತಪ್ಪುತ್ತದೆ.

– ಶ್ರೀನಿವಾಸ ಮೂರ್ತಿ ವಿಎನ್

Write A Comment