ರಾಷ್ಟ್ರೀಯ

ಗಂಡು ಮಗುಗಾಗಿ ಪ್ರಯತ್ನ…ಜನಿಸಿದ್ದು ಬರೋಬರಿ 14 ಹೆಣ್ಣು..!

Pinterest LinkedIn Tumblr

gandu

ಈಯಪ್ಪನಿಗೆ ಗಂಡು ಮಗು ಬೇಕೆ ಬೇಕಂತೆ..! ಅದಕ್ಕಾಗಿ ತನ್ನ ಪ್ರಯತ್ನ ಮಾತ್ರ ನಿಲ್ಲಿಸಲಿಲ್ಲ. ಇದರ ಪರಿಣಾಮವೇ 14 ಹೆಣ್ಣು ಮಕ್ಕಳಿಗೆ ತಂದೆಯಾಗಿದ್ದಾನೆ. ಇದು ನಡೆದಿರುವುದು ಗುಜರಾತ್‌ನಲ್ಲಿ..!! ಮೋದಿ ಅವರ ಬೇಟಿ ಬಚಾವೋ ಸೆಲ್ಫಿ ಬನಾವೋ ಮಂತ್ರಕ್ಕೆ ಈ ಮಹಾಶಯನೇ ಸ್ಫೂರ್ತಿಯಾಗಿರಬಹುದು..!!

ದಾಹೋದ್ ಜಿಲ್ಲೆಯ ಜಾರಿಬುಜ್ಜಿ ಗ್ರಾಮದ ರಾಮ್‌ಸಿಂಗ್ ಸಂಗೋಡ್ ಎಂಬ ರೈತನೇ 14 ಹೆಣ್ಣು ಮಕ್ಕಳಿಗೆ ಜನ್ಮದಾತನಾದ ಪುಣ್ಯಾತ್ಮ..! ಈತನಿಗೆ ಗಂಡು ಮಗು ಬೇಕೇ ಬೇಕಿತ್ತಂತೆ. ಅದಕ್ಕಾಗಿ ತನ್ನ ಪ್ರಯತ್ನ ಮಾತ್ರ ನಿಲ್ಲಿಸಿರಲಿಲ್ಲ. ಇದರ ಪರಿಣಾಮವೇ ಪ್ರತಿ ವರ್ಷಕ್ಕೊಂದು ಹೆಣ್ಣು ಮಗು ಜನಿಸಿದೆ. ಆದರೂ ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದ ಸಂಗೋಡ್‌ಗೆ ದೇವರು ಕೊನೆಗೂ ಕೃಪೆ ತೋರಿದನಂತೆ. ಹೀಗಾಗಿ ಎರಡು ವರ್ಷದ ಹಿಂದೆ ಗಂಡು ಮಗು ಜನಿಸಿದೆಯಂತೆ. ಆದರೂ ಈತನ ಪುತ್ರ ಪ್ರೇಮ ಮಾತ್ರ ಕಡಿಮೆಯೇ ಆಗಿಲ್ಲ . ಇನ್ನೊಂದು ಗಂಡು ಮಗು ಬೇಕು ಎಂಬ ಹಠಕ್ಕೆ ಆತನ ಪತ್ನಿ ಈಗ ಮತ್ತೆ ಗರ್ಭಿಣಿಯಾಗಿದ್ದಾರಂತೆ.

ನನ್ನ ಗಂಡನ ಪುತ್ರ ಪ್ರೇಮಕ್ಕೆ ನನ್ನ ದೇಹ ಸೊರಗಿ ಹೋಗಿದೆ. ಪ್ರತಿ ವರ್ಷ ಮಗು ಹೆತ್ತು ಹೆತ್ತು ಸತ್ತು ಹೋಗಬೇಕು ಎನಿಸುತ್ತಿದೆ. ಆದರೆ ಗಂಡನ ಭಯದಿಂದ ಆತ ಹೇಳಿದಂತೆ ಕೇಳುತ್ತಿದ್ದೇನೆ ಎಂದು ಅಲವತ್ತುಕೊಂಡಿದ್ದಾಳೆ ಸಂಗೋಡ್ ಪತ್ನಿ ಕನು. ತನ್ನ ಪತಿಯ ಪುತ್ರ ವ್ಯಾಮೋಹಕ್ಕೆ ದೇವರು ಕರುಣೆ ತೋರಿಸಿದ ಹಿನ್ನೆಲೆಯಲ್ಲಿ 2013ರಲ್ಲಿ ಗಂಡು ಮಗು ಜನಿಸಿತು.

ಆತನಿಗೆ ವಿಜಯ್ ಎಂದು ನಾಮಕರಣ ಮಾಡಿದ್ದೇವೆ. ಇದಕ್ಕೂ ನನ್ನ ಪತಿ ತೃಪ್ತಿಗೊಂಡಿಲ್ಲ. ಮತ್ತೊಂದು ಗಂಡು ಮಗು ಬೇಕಂತೆ. ಅದನ್ನು ಹೆತ್ತು ಕೊಡುವುದೇ ನನ್ನ ಕಾಯಕವಾಗಿದೆ ಎಂದು ಕನು ತಿಳಿಸಿದ್ದಾರೆ. ದಾಹೋದ್ ಜಿಲ್ಲೆಯಲ್ಲಿ ಇನ್ನೂ ಗಂಡು ಮಕ್ಕಳ ವ್ಯಾಮೋಹಕ್ಕೆ ಅಂತ್ಯ ಬಿದ್ದಿಲ್ಲವೆಂಬುದಕ್ಕೆ ಈ ಮೇಲಿನ ಕುಟುಂಬ ಸ್ಪಷ್ಟ ನಿದರ್ಶನವಾಗಿದೆ.

2001ರ ಜನಗಣತಿಯಲ್ಲಿ 1 ಸಾವಿರ ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳಿದ್ದರು. 2011ರ ಜನಗಣತಿಯಲ್ಲೂ ಹೆಣ್ಣು ಮಕ್ಕಳ ಪ್ರಮಾಣ ಕ್ಷೀಣಿಸಿದ್ದು 1 ಸಾವಿರ ಗಂಡು ಮಕ್ಕಳಿಗೆ 948 ಹೆಣ್ಣುಮಕ್ಕಳಿದ್ದಾರೆ ಎನ್ನುವುದು ಅಂಕಿ ಅಂಶಗಳಿಗೆ ಬೆಳಕಿಗೆ ಬಂದಿದೆ. ಸಂ ಗೋಡ್ ನೆಲೆಸಿರುವ ಜಾರಿಬುಜ್ಜಿ ಗ್ರಾಮದಲ್ಲಿ 100 ಮನೆಗಳಿವೆ. ಇಲ್ಲಿನ ಪ್ರತಿ ಕುಟುಂಬದಲ್ಲೂ ಒಂಭತ್ತು , ಒಂಭತ್ತು ಮಕ್ಕಳಿರುವುದು ವಿಶೇಷ.

ನಮ್ಮ ಸಂಪ್ರದಾಯದಂತೆ ಹೆಣ್ಣು ಮಕ್ಕಳ ವಿವಾಹದ ಸಂದರ್ಭದಲ್ಲಿ ಗಂಡು ಮಕ್ಕಳು ಹೆಚ್ಚಿನ ಹೊಣೆ ಹೊರಬೇಕಾಗಿದೆ, ಸಹೋದರರಿಯರ ಮಕ್ಕಳ ವಿದ್ಯಾಭ್ಯಾಸಕ್ಕೂ ಸೋದರ ಮಾವನೇ ಸಹಾಯ ಮಾಡಬೇಕು, ನನಗೆ ಇರುವುದು 14 ಹೆಣ್ಣು ಮಕ್ಕಳು ಇಷ್ಟು ಮಕ್ಕಳ ವಿವಾಹದ ಹೊಣೆಯನ್ನು ಒಬ್ಬನೇ ಸಹೋದರ ಹೊರಲು ಸಾಧ್ಯವೇ? ಹೀಗಾಗಿಯೇ ನನಗೆ ಇನ್ನೊಂದು ಗಂಡು ಮಗು ಬೇಕಾಗಿದೆ ಎನ್ನುತ್ತಾನೆ ಸಂಗೋಡ್.

ಕುಟುಂಬ ದೊಡ್ಡದಾಗುತ್ತಿದ್ದಂತೆ ಜೀವನ ಸಾಗಿಸುವುದು ದುಸ್ತರವಾಗಿದೆ. ಇದಕ್ಕಾಗಿ ತನ್ನ ಮೊದಲ ಪುತ್ರಿಯನ್ನು ಗಾರೆ ಕೆಲಸಕ್ಕೆ ಕಳುಹಿಸುತ್ತಿದ್ದಾನೆ ಸಂಗೋಡ್. ಜೀವನ ದುಸ್ತರವಾದರೂ ಆತನ ಗಂಡು ಮಗು ವ್ಯಾಮೋಹ ಕಡಿಮೆಯಾಗದಿರುವುದು ಈ ನಾಡಿನ ದೌರ್ಭಾಗ್ಯ..!

Write A Comment