ರಾಷ್ಟ್ರೀಯ

ಗುಜರಾತ್ ಗಲಭೆ ಬಗ್ಗೆ ವಾಜಪೇಯಿಗೆ ಅಸಮಾಧಾನವಿತ್ತು….ಅದು ”ನಾವು ಮಾಡಿರುವ ತಪ್ಪು” ಎಂದು ಹೇಳಿದ್ದರು: ‘ರಾ’ದ ಮಾಜಿ ಮುಖ್ಯಸ್ಥ ಎ.ಎಸ್. ದುಲತ್

Pinterest LinkedIn Tumblr

vajpee

ನವದೆಹಲಿ: 2002ರ ನಡೆದ ಗುಜರಾತ್ ದಂಗೆಯ ಕುರಿತು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಸಮಾಧಾನವಿತ್ತು ಮತ್ತು ಅದು ”ನಾವು ಮಾಡಿರುವ ತಪ್ಪು” ಎಂದು ರಾ(research and analysis wing) ದ ಮಾಜಿ ಮುಖ್ಯಸ್ಥ ಎ.ಎಸ್. ದುಲತ್ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಅವರು ಬಹಿರಂಗಪಡಿಸಿದ್ದು, ವಾಜಪೇಯಿ ಅವರೊಂದಿಗೆ ನಡೆಸಿದ ಮಾತುಕತೆಯನ್ನು ಅವರು ಮೆಲುಕು ಹಾಕಿದ್ದಾರೆ.

ತಾವು ವಾಜಪೇಯಿ ಅವರೊಂದಿಗೆ ನಡೆಸಿದ ಕೊನೆಯ ಮಾತುಕತೆ ಸಂದರ್ಭದಲ್ಲಿ ಅವರು ಗುಜರಾತ್ ಗಲಭೆ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ನಮ್ಮ ಕಡೆಯಿಂದ ತಪ್ಪಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು ಎಂದು ದುಲತ್ ಹೇಳಿದ್ದಾರೆ.

ದುಲತ್, ವಾಜಪೇಯಿ ಅವರ ವಿಶೇಷ ಸಲಹೆಗಾರರಾಗಿ ನೇಮಕಗೊಳ್ಳುವ ಮೊದಲು 2000 ಇಸವಿಯವರೆಗೆ ಭಾರತೀಯ ವಿದೇಶೀ ಪತ್ತೇದಾರಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು.ಗೋಧ್ರಾ ಹತ್ಯಾಕಾಂಡದ ನಂತರದ ಘಟನೆ ತಪ್ಪಿನಿಂದ ಸಂಭವಿಸಿದ್ದು ಎಂದು ವಾಜಪೇಯಿಯವರಿಗೆ ಮನವರಿಕೆಯಾಗಿತ್ತು ಮತ್ತು ಆ ಬೇಸರ ಅವರ ಮುಖದಲ್ಲಿ ಕಾಣುತ್ತಿತ್ತು ಎಂದು ಸಂದರ್ಶನದಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಗಲಭೆ ನಡೆದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೂ ಮುನ್ನ ದುಲತ್, 1999ರಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ವಾಯುಪಡೆ ವಿಮಾನದ ಬಿಡುಗಡೆಗೆ ಪ್ರತಿಯಾಗಿ ಮೂವರು ಪ್ರಮುಖ ಉಗ್ರಗಾಮಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದಕ್ಕೆ ಜಮ್ಮು-ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಒಂದು ಹಂತದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಸಹ ದುಲತ್ ಸಂದರ್ಶನದ ವೇಳೆ ಬಹಿರಂಗಪಡಿಸಿದ್ದಾರೆ.

Write A Comment