ಚೆನ್ನೈ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಶಿಕ್ಷೆಗೊಳಗಾಗಿದ್ದ ಆರೋಪಿ ಇದೀಗ ಪ್ರಾಪ್ತ ವಯಸ್ಕಳಾಗಿರುವ ಆಕೆಯ ಜೊತೆ ವಿವಾಹವಾಗಲು ಮುಂದಾಗಿರುವ ಕಾರಣ ಜಾಮೀನು ನೀಡಲಾಗಿದೆ.
ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದ್ದು, ಆರೋಪಿ ಮೋಹನ್ ಎಂಬಾತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾರಣ ಶಿಕ್ಷೆಗೊಳಗಾಗಿದ್ದ. ಈ ಮಧ್ಯೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳಲ್ಲದೇ ಆಕೆಯ ತಂದೆ, ತಾಯಿಯೂ ಸಾವನ್ನಪ್ಪಿದ ಕಾರಣ ನೋಡಿಕೊಳ್ಳುವವರಿಲ್ಲದೇ ಆನಾಥಳಾಗಿದ್ದಳು.
ಬಾಲಕಿಯೂ ಪ್ರಾಪ್ತ ವಯಸ್ಸು ತಲುಪಿದ್ದ ಹಿನ್ನೆಲೆಯಲ್ಲಿ ಅತ್ಯಾಚಾರ ಆರೋಪಿ ಕಡೆಯವರು ಯುವತಿಯೊಂದಿಗೆ ಮಾತನಾಡಿ ವಿವಾಹಕ್ಕೆ ಮನವೊಲಿಸಿದ್ದರೆಂದು ಹೇಳಲಾಗಿದೆ. ಶಿಕ್ಷೆಗೊಳಗಾಗಿದ್ದ ಮೋಹನ್ ಸಹ ಇದಕ್ಕೆ ಸಮ್ಮತಿಸಿದ್ದು, ಇದೀಗ ನ್ಯಾಯಾಲಯ ಆತನ ಅರ್ಜಿಯನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ.
