ರಾಷ್ಟ್ರೀಯ

ಸಂಸದರಿಗೆ ಅನ್ನಭಾಗ್ಯ: ರೋಟಿ 1 ರೂ., ಮಸಾಲೆ ದೋಸೆ 6 ರೂ.

Pinterest LinkedIn Tumblr

annabhagya

ಹೊಸದಿಲ್ಲಿ: ಒಂದು ಪಕ್ಷ ಬಡತನ ರೇಖೆಗಿಂತ ಕೆಳಗಿನವರಿಗೆ ಅತ್ಯಂತ ಕಡಿಮೆ ದರದಲ್ಲಿ ಅಕ್ಕಿ ನೀಡಿದರೆ, ಮತ್ತೊಂದು ಪಕ್ಷ ಆ ಯೋಜನೆಯನ್ನು ಟೀಕಿಸುತ್ತದೆ. ಆದರೆ, ಸಂಸತ್ತಿನ ಕ್ಯಾಂಟೀನ್‌ನಲ್ಲಿ, ಮಾಸಿಕ 1.4 ಲಕ್ಷ ರೂ. ವೇತನ ಪಡೆಯುವ ಸರ್ವ ಪಕ್ಷಗಳ ಸಂಸದರು, ಬಡವರಿಗಿಂತಲೂ ಅಗ್ಗದ ದರದಲ್ಲಿ ಆಹಾರ ಪಡೆಯುತ್ತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಸಂಸದರ ಊಟಕ್ಕೆ ನೀಡಿದ ರಿಯಾಯತಿ ಹಣ ಒಟ್ಟು 60.7 ಕೋಟಿ ರೂ. ಎಂದು ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಬೇಯಿಸಿದ ತರಕಾರಿಗೆ ಸಾಮಾನ್ಯವಾಗಿ 41.25 ರೂ. ಆದರೆ, ಅದು ನಮ್ಮ ಸಂಸದರಿಗೆ ಶೇ.90ರಷ್ಟು ರಿಯಾಯತಿ ದರದಲ್ಲಿ, ಅಂದರೆ ಕೇವಲ 4 ರೂ.ಗೆ ಸಿಗುತ್ತದೆ. ಮಸಾಲೆ ದೋಸೆ ಕೇವಲ 6 ರೂ.ಗೆ ಸಿಗುತ್ತೆ. ಸ್ವಾದಭರಿತ ಫಿಶ್ ಫ್ರೈ ಮತ್ತು ಚಿಪ್ಸ್‌ಗೆ ಕೇವಲ 25 ರೂ. ನೀಡಿ, ಶೇ.63ರಷ್ಟು ರಿಯಾಯತಿ ಪಡೆಯುತ್ತಾರೆ.

ಆರ್‌ಟಿಐ ಕಾರ್ಯಕರ್ತ ಸುಭಾಶ್ ಅಗರ್‌ವಾಲ್ ಪಡೆದ ಮಾಹಿತಿಯಲ್ಲಿ, ಮಾಂಸಾಹಾರಿ ಊಟ ತಯಾರಿಕೆಗೆ 99.05 ರೂ.ಖರ್ಚಾದರೆ, ಅದನ್ನು ಶೇ.60ರಷ್ಟು ರಿಯಾಯತಿಯೊಂದಿಗೆ ಕೇವಲ 33 ರೂ.ಗೆ ನೀಡಲಾಗುತ್ತದೆ.

ಸಂಸದರು ರೋಟಿಯೊಂದಕ್ಕೆ ಮಾತ್ರ ತುಸು ಹೆಚ್ಚಿನ ಹಣ ನೀಡುತ್ತಿದ್ದಾರೆ. ರೋಟಿ ತಯಾರಿಕೆಗೆ ಸುಮಾರು 77 ಪೈಸೆ ಖರ್ಚು ತಗುಲಿದರೆ, ಸಂಸದರು ಅದನ್ನು 1 ರು.ಗೆ ಕೊಳ್ಳುತ್ತಾರಂತೆ.

ಸಂಸತ್ತಿನ ಕ್ಯಾಂಟೀನ್‌ನಲ್ಲಿ ಬೇಯಿಸಿದ ಮೊಟ್ಟೆಯಿಂದ ಹಿಡಿದು, ಕೋಳಿ-ಕುರಿ ಮಾಂಸದ ಖಾದ್ಯಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ಸುಮಾರು 76 ನಾನಾ ಬಗೆಯ ಆಹಾರ ಪದಾರ್ಥಗಳು ಲಭ್ಯವಿರುತ್ತದೆ. ಇದಕ್ಕೆ ಶೇ.150ರಿಂದ ಶೇ.63ರಷ್ಟು ರಿಯಾಯತಿಯೂ ಸಿಗುತ್ತದೆ.

ಉತ್ತರ ರೇಲ್ವೆ ವಿಭಾಗ ನಡೆಸುತ್ತಿರುವ ಕ್ಯಾಂಟೀನ್‌ಗೆ, ಸರಕಾರಿ ಏಜೆನ್ಸಿಗಳಾದ ಕೇಂದ್ರೀಯ ಭಂಡಾರ, ಮದರ್ ಡೈರಿ ಹಾಗೂ ಡಿಎಂಎಸ್‌ನಿಂದ ಕಚ್ಚಾ ಪದಾರ್ಥಗಳನ್ನು ತರಿಸಿಕೊಳ್ಳಲಾಗುತ್ತದೆ.

2009-10ರಲ್ಲಿ 10.4 ಕೋಟಿ ರೂ., 2010-11ರಲ್ಲಿ 11.7 ಕೋಟಿ ರೂ., 2012-13ರಲ್ಲಿ 12.5 ಕೋಟಿ ರೂ., ಮತ್ತು 2013-14ರಲ್ಲಿ 14 ಕೋಟ ರೂ. ರಿಯಾಯಿತಿಯನ್ನು ಸಂಸತ್ತಿನ ಕ್ಯಾಂಟೀನ್‌ನಲ್ಲಿ ನೀಡಲಾಗಿದೆ ಎಂದು ಪಡೆದುಕೊಂಡ ಮಾಹಿತಿ ತಿಳಿಸಿದೆ.

ಬಜೆಟ್‌ನಲ್ಲಿ ನೀಡುವ ಲೋಕಸಭಾ ನಿಧಿಯಿಂದ ಕ್ಯಾಂಟೀನ್‌ಗೆ ಹಣ ಪಡೆಯಲಾಗುತ್ತದೆ. ಆಹಾರ ನಿರ್ವಹಣೆಗೆ ಇರುವ ಜಂಟಿ ಸಮಿತಿ ಸಂಸತ್ ಭವನದೊಳಗಿರುವ ನಾಲ್ಕು ಕ್ಯಾಂಟೀನ್‌ಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.

Write A Comment