ರಾಷ್ಟ್ರೀಯ

ತಿರುವನಂತಪುರದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ: ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮುಂಗಾರು

Pinterest LinkedIn Tumblr

pvec5ju15rjMAP

ನವದೆಹಲಿ (ಪಿಟಿಐ):  ನೈರುತ್ಯ ಮುಂಗಾರು ಮುಂದಿನ 48 ಗಂಟೆಗಳಲ್ಲಿ ಕೇರಳವನ್ನು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ.

ಮೇ 30 ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಈ ಮೊದಲು ಇಲಾಖೆ ಮುನ್ಸೂಚನೆ ನೀಡಿತ್ತು.  ಆದರೆ, ಮಂದ ಮಾರುತದ ಕಾರಣ ಮುಂಗಾರು ಪ್ರವೇಶವು ನಾಲ್ಕು ದಿನ ತಡವಾಗಿದೆ.

ಮುಂಗಾರು ಮಾರುತ ಕೇರಳ ಪ್ರವೇಶಿಸಿದ 24 ಗಂಟೆಗಳ ಬಳಿಕ  ದಕ್ಷಿಣ ಕನ್ನಡದ ಕರಾವಳಿಯ ಮೂಲಕ ಕರ್ನಾಟಕವನ್ನು ಪ್ರವೇಶಿಸಲಿದೆ. ‘ಅರಬ್ಬಿ ಸಮುದ್ರದ ಆಗ್ನೇಯ ಭಾಗದ ಮೇಲೆ ಬೀಸುತ್ತಿರುವ ಮಾರುತಗಳು ಮುಂಗಾರು ಪ್ರವೇಶಕ್ಕೆ  ಪೂರಕವಾಗಿವೆ’ ಎಂದು ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ಮಳೆ ಚುರುಕಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ಕೂಡ ಹೇಳಿದೆ.

ಈ ಬಾರಿ ವಾಡಿಕೆಗಿಂತ ಶೇ12ರಷ್ಟು ಕಡಿಮೆ ಮಳೆ ಬೀಳಲಿದೆ ಎಂದು ‘ಐಎಂಡಿ’ ಹೇಳಿತ್ತು. ಮುಂಗಾರು ಕೃಷಿಯ ಜೀವನಾಡಿ. ಕಳೆದ ಬಾರಿಯೂ ವಾಡಿಕೆಗಿಂತ ಕಡಿಮೆ ಮಳೆ ಬಿದ್ದ ಕಾರಣ ಆಹಾರ ಧಾನ್ಯಗಳ ಉತ್ಪಾದನೆಗೆ ಹೊಡೆತ ಬಿದ್ದಿದೆ.  ಮಳೆ ಕೊರತೆಯ ಕಾರಣ 2014–15ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ಶೇ 0.2ಕ್ಕೆ ನಿಂತಿತ್ತು.

ತಿರುವನಂತಪುರ ವರದಿ: ಕೇರಳದ ಕೆಲವು ಕಡೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಇದು ಮುಂಗಾರು ಪೂರ್ವ ಮಳೆ. ತಿರುವನಂತಪುರದಲ್ಲಿ ಬುಧವಾರ ರಾತ್ರಿ ಗುಡುಗಿನಿಂದ ಕೂಡಿದ ಭಾರಿ ಮಳೆ ಬಿದ್ದಿದೆ.

ಮಳೆ ಕೊರತೆಯ ಭಯ ಬೇಡ– ಜೇಟ್ಲಿ: ಈ ಬಾರಿ ಮುಂಗಾರು ಕೊರತೆಯಿಂದಾಗಿ ಆಹಾರಧಾನ್ಯ ಉತ್ಪಾದನೆ ಕುಸಿಯಲಿದೆ  ಹಾಗೂ ಬೆಲೆ ಏರಿಕೆಯಾಗಲಿದೆ ಎಂಬ ಭಯವನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಳ್ಳಿಹಾಕಿದ್ದಾರೆ.

‘ಮುಂಗಾರು ಮಳೆಯಲ್ಲಿ ಕೊರತೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದಾಗಿನಿಂದ ಬೆಲೆ ಏರಿಕೆ, ಆಹಾರ ಧಾನ್ಯ ಉತ್ಪಾದನೆ ಕುರಿತು ಉತ್ಪ್ರೇಕ್ಷಿತ ವರದಿಗಳು ಹೊರಬೀಳುತ್ತಿವೆ.

‘ವಾಯವ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂಬ ಮುನ್ಸೂಚನೆಯಿಂದ ಆತಂಕ ಪಡಬೇಕಿಲ್ಲ. ಆ ಭಾಗದಲ್ಲಿ ಸಾಕಷ್ಟು ನೀರಾವರಿ ಇದೆ. ದಕ್ಷಿಣ, ಕೇಂದ್ರ, ಉತ್ತರ ಮತ್ತು ಪೂರ್ವ ವಲಯಗಳಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

ಹವಾಮಾನ ಇಲಾಖೆ ವರದಿ ಚರ್ಚಿಸಲು ಜೇಟ್ಲಿ ಅವರು ಬುಧವಾರ ಹಿರಿಯ ಹವಾಮಾನ ವಿಜ್ಞಾನಿಗಳ ಸಭೆ ಕರೆದಿದ್ದರು. ಭತ್ತ ಸೇರಿ ಇತರ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಕುರಿತು ಚಿಂತಿಸಲಾಗುತ್ತಿದೆ. ಆಹಾರಐಧಾನ್ಯಗಳ ಬೆಲೆ ಏರಿಕೆ ತಡೆಗಟ್ಟಲು ಪೂರೈಕೆ ಹೆಚ್ಚಿಸಲಾಗುತ್ತಿದೆ ಎಂದೂ ಜೇಟ್ಲಿ ತಿಳಿಸಿದರು.

ಕರಾವಳಿಯಲ್ಲೂ ಮಳೆ ಅಬ್ಬರ
ರಾಜ್ಯದ ಕರಾವಳಿಯಲ್ಲೂ ಗುರುವಾರ ಮುಂಗಾರು ಪೂರ್ವ ಮಳೆ ಅಬ್ಬರ ಕಾಣಿಸಿಕೊಂಡಿದೆ.  ಕೇರಳದ ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸಂಜೆಯವರೆಗೂ ಮಳೆ ಸುರಿದರೆ, ಉಡುಪಿ ಜಿಲ್ಲೆಯಲ್ಲಿ 3 ಗಂಟೆ ಕಾಲ ತುಂತುರು ಮಳೆ ಸುರಿಯಿತು.ಚಿಕ್ಕಮಗಳೂರು ಭಾಗದಲ್ಲಿ ಸಂಜೆಯ ವೇಳೆ ತುಂತುರು ಮಳೆಯಾಯಿತು.
****
ಮುಂಗಾರು ಕೊರತೆ ಸಮಸ್ಯೆ ಅಲ್ಲ. ದೇಶದಲ್ಲಿ ಕನಿಷ್ಠ ಒಂದು ವರ್ಷಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ. ಜನ ಉಪವಾಸ ಬೀಳುವ ಪರಿಸ್ಥಿತಿ ಬರುವುದಿಲ್ಲ
–ರಾಮ್‌ವಿಲಾಸ್‌ ಪಾಸ್ವಾನ್, ಕೇಂದ್ರ ಆಹಾರ ಸಚಿವ

Write A Comment