ರಾಷ್ಟ್ರೀಯ

ಮ್ಯಾಗಿ ನೂಡಲ್ಸ್‌ನಲ್ಲಿ ಅಪಾಯಕಾರಿ ಸೀಸದ ಅಂಶ: ವಾಪಸಿಗೆ ಆದೇಶ

Pinterest LinkedIn Tumblr

maggi

ನವದೆಹಲಿ: ನೆಸ್ಟಲ್ ಇಂಡಿಯಾದ ಕಂಪನಿ ತಯಾರಿಸುವ ಮ್ಯಾಗಿ ನೂಡಲ್ಸ್‌ ಸೀಸದ ಅಪಾಯಕಾರಿ ಮಟ್ಟವನ್ನು ಹೊಂದಿರುವುದನ್ನು ಆಹಾರ ತಪಾಸಕರು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೆಲವು ಮ್ಯಾಗಿ ನೂಡಲ್ಸ್ ಬ್ಯಾಚ್‌ಗಳನ್ನು ಅಂಗಡಿಯಿಂದ ವಾಪಸು ಕಳಿಸುವಂತೆ ಆಹಾರ ತಪಾಸಕರು ಆದೇಶಿಸಿದ್ದಾರೆ. ಉತ್ತರಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತವು ದಿಢೀರ್ ನೂಡಲ್‌ಗಳ ಸುಮಾರು 2 ಡಜನ್ ಪೊಟ್ಟಣಗಳ ವಾಡಿಕೆಯ ಪರೀಕ್ಷೆಗಳನ್ನು ನಡೆಸಿದಾಗ ಅಧಿಕ ಸೀಸದ ಅಂಶವಿರುವುದು ಪತ್ತೆಯಾಯಿತೆಂದು ತಿಳಿಸಿದೆ.

ಮ್ಯಾಗಿ ನೂಡಲ್ಸ್ ಅನ್ನು ಹೆಚ್ಚಾಗಿ ಮಕ್ಕಳು ಇಷ್ಟಪಡುತ್ತಾರೆ. ಆದರೆ ಇವುಗಳಲ್ಲಿ ಸೀಸದ ಪ್ರಮಾಣ ಹೆಚ್ಚಾಗಿರುವುದರಿಂದ ಇವುಗಳ ಸೇವನೆಯಿಂದ  ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದಲ್ಲದೇ ನರಮಂಡಲದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿದೆ.

ಇನ್‌ಸ್ಟಾಂಟ್ ನೂಡಲ್ಸ್‌ನ ಎಲ್ಲಾ ಪ್ಯಾಕೆಟ್‌ಗಳನ್ನು ಪ್ರಯೋಗಾಲದಲ್ಲಿ ಪರೀಕ್ಷೆ ಮಾಡಿದಾಗ ಕಲುಷಿತವಾಗಿರುವುದು ಪತ್ತೆಯಾಯಿತು.   ಪ್ರತಿ ದಶಲಕ್ಷಕ್ಕೆ 17.2 ಭಾಗ ಸೀಸದ ಸಾಂದ್ರತೆ ಹೊಂದಿರುವುದು ಪತ್ತೆಯಾಗಿರುವುದಾಗಿ ಇಬ್ಬರು ಎಫ್‌ಡಿಎ ಅಧಿಕಾರಿಗಳು ತಿಳಿಸಿದರು. ಇದು ಅಂಗೀಕಾರ್ಹ ಮಿತಿಗಿಂತ ಹೆಚ್ಚಾಗಿತ್ತು.  ಸೀಸದ ಅಂಗೀಕಾರ್ಹ ಮಿತಿಯು 0.01 ಪಿಪಿಎಂನಿಂದ 2.5 ಪಿಪಿಎಂವರೆಗೆ ಇರುತ್ತದೆ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ನೂಡಲ್‌ಗಳಲ್ಲಿ ರುಚಿಯನ್ನು ವರ್ಧಿಸುವ ಅಧಿಕ ಮಟ್ಟದ ಮೊನೋಸೋಡಿಯಂ ಗ್ಲುಟಾಮೇಟ್ ಕೂಡ ಪತ್ತೆಯಾಗಿದ್ದಾಗಿ ವಿಜ್ಞಾನಿಗಳು ಹೇಳಿದ್ದಾರೆ.  ಮ್ಯಾಗಿ ಇನ್‌ಸ್ಟಾಂಟ್ ನೂಡಲ್ಸ್ ಸೀಸ ಮತ್ತು ಎಂಎಸ್‌ಜಿಯ ಅಪಾಯಕಾರಿ ಮಟ್ಟವನ್ನು ಹೊಂದಿದೆ. ಈ ಕಂಪನಿಯ ವಿರುದ್ಧ ನಾವು ತಕ್ಷಣವೇ ಆದೇಶ ನೀಡಬೇಕಾಗಿದೆ ಎಂದು ಲಕ್ನೋದಲ್ಲಿ ಎಫ್‌ಡಿಎನ ಉಪ ಇನ್ಸ್‌ಪೆಕ್ಟರ್ ಜನರಲ್ ಡಿ.ಜಿ. ಶ್ರೀವಾಸ್ತವ ತಿಳಿಸಿದರು.

ಸ್ವಿಸ್ ಮೂಲದ ಸಹಾಯಕ ಸಂಸ್ಥೆ ನೆಸ್ಟಲ್ ಇಂಡಿಯಾ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ತಾವು ಕಠಿಣ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣಗಳನ್ನು ಮ್ಯಾಗಿ ನೂಡಲ್ಸ್ ತಯಾರಿಸುವ ಎಲ್ಲಾ ಕಚ್ಚಾಪದಾರ್ಥಗಳಲ್ಲಿ ಹೇರಿದ್ದೇವೆ ಎಂದು ಹೇಳಿದೆ. ನಾವು ಮ್ಯಾಗಿಗೆ ಎಂಎಸ್‌ಜಿ ಸೇರಿಸುವುದಿಲ್ಲ. ಮ್ಯಾಗಿಯಲ್ಲಿ ಗ್ಲುಟಾಮೇಟ್ ನೈಸರ್ಗಿಕ ಮೂಲಗಳಿಂದ ಬಂದಿರಬಹುದು. ನಾವು ಮಾದರಿಯಲ್ಲಿ ಪತ್ತೆಯಾದ ಸೀಸದ ಅಂಶದ  ಬಗ್ಗೆ ಚಕಿತರಾಗಿದ್ದೇವೆ ಎಂದು ಹೇಳಿದ್ದಾರೆ.

Write A Comment