ರಾಷ್ಟ್ರೀಯ

ಅವಧಿಪೂರ್ವ ಚುನಾವಣೆಗೆ ಜಯಾ ಸಿದ್ಧತೆ, 6 ತಿಂಗಳಲ್ಲೇ ತಮಿಳುನಾಡು ವಿಧಾನಸಭೆ ವಿಸರ್ಜನೆ ಸಾಧ್ಯತೆ

Pinterest LinkedIn Tumblr

jaya

ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಜೆ.ಜಯಲಲಿತಾ ಅವರು ಸದ್ಯದಲ್ಲೇ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಯಲಲಿತಾ ಅವರನ್ನು ಔಪಚಾರಿಕವಾಗಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವುದಕ್ಕಾಗಿ ಒಂದೇರಡು ದಿನದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆ ಇದೆ.

ಪಕ್ಷದ ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲಿ ನೂತನ ಸಚಿವ ಸಂಪುಟ ಸದಸ್ಯರೊಂದಿಗೆ ಜಯಲಲಿತಾ ಅವರು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರಿಗೂ ಚೆನ್ನೈಯಲ್ಲಿ ಇರುವಂತೆ ಸೂಚಿಸಲಾಗಿದೆ. ಅಲ್ಲದೆ ಅಮ್ಮಗೆ ಬೆಂಬಲ ಘೋಷಿಸಿದ ಡಿಎಂಡಿಕೆಯ ಬಂಡಾಯ ಶಾಸಕರಿಗೂ ಶಾಸಕಾಂಗ ಪಕ್ಷದ ಸಭೆ ಹಾಜರಾಗುವಂತೆ ಸೂಚಿಸಲಾಗಿದೆ.

‘ಇನ್ನು ಒಂದೇರಡು ದಿನದಲ್ಲಿ ಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅಮ್ಮ ಇನ್ನು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ’ ಎಂದು ಹಿರಿಯ ಸಚಿವರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಬೆಂಗಳೂರು ವಿಶೇಷ ಕೋರ್ಟ್‌ನ ತೀರ್ಪಿನಿಂದಾಗಿ ಜಯಲಲಿತಾ ಅವರ ಶಾಸಕತ್ವ ರದ್ದಾಗಿದ್ದು, ಈಗ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ, ಆರು ತಿಂಗಳೊಳಗಾಗಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಬೇಕು. ಹೀಗಾಗಿ ತಾವು ಒಬ್ಬರೇ ಚುನಾವಣೆಗೆ ಹೋಗಿ, ಒಂದೇ ವರ್ಷದಲ್ಲಿ ಎರಡು ಬಾರಿ ಚುನಾವಣೆ ಎದುರಿಸುವ ಬದಲು ಅವಧಿಗೆ ಮುನ್ನವೇ ವಿಧಾನಸಭೆಯನ್ನು ವಿಸರ್ಜಿಸಿ, ಹೊಸ ಜನಾದೇಶ ಪಡೆಯಲು ಜಯಲಲಿತಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡು ವಿಧಾನಸಭೆ ಅವಧಿ 2016ರ ಮೇನಲ್ಲಿ ಅಂತ್ಯಗೊಳ್ಳಲಿದೆ.

‘ಅವಧಿಪೂರ್ವ ಚುನಾವಣೆಯನ್ನು ನಾವು ತಳ್ಳಿಹಾಕುವಂತಿಲ್ಲ. ಆದರೆ ಅದಕ್ಕು ಮೊದಲು ಅಮ್ಮಾ ಅವರು ಚೆನ್ನೈ ಮೆಟ್ರೋ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ಶೀಘ್ರದಲ್ಲೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿ, ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ತಾನು ಅಪ್ಪಟ ಚಿನ್ನದಂತೆ ಹೊಳೆಯುತ್ತಿರುವುದಾಗಿ ಹೇಳಿಕೊಂಡಿರುವ ಜಯಲಲಿತಾ ಅವರು, ಚುನಾವಣೆಗೆ ಹೋಗಲು ಇದೆ ಸೂಕ್ತ ಕಾಲ ಎಂದು ಭಾವಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆಗೆ ಹೋದರೆ ಸಹಜವಾಗಿಯೇ ಜನರ ಅನುಕಂಪ ಗಿಟ್ಟಿಸಿಕೊಳ್ಳಬಹುದು ಎಂಬುದು ಸಹ ಅಮ್ಮನ ಲೆಕ್ಕಾಚಾರವಾಗಿದೆ ಎನ್ನಲಾಗುತ್ತಿದೆ.

Write A Comment