ರಾಷ್ಟ್ರೀಯ

ಬಾಲಾರೋಪ ವಿಚಾರಣೆ ಹದಿನಾರು ವಯಸ್ಸಿನ ಮಿತಿ

Pinterest LinkedIn Tumblr

adults-in-heinous-crimes-Lok-Sabha-passes-Juvenile-Amendment-Bill

ನವದೆಹಲಿ: ಘೋರ ಅಪರಾಧಗಳನ್ನು ಎಸಗಿದ 16ರಿಂದ 18 ವಯಸ್ಸಿನೊಳಗಿನ ಮಕ್ಕಳನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆಗೊಳಪಡಿಸುವ ಮಹತ್ವದ ವಿಧೇಯಕಕ್ಕೆ ಲೋಕಸಭೆಯ ಒಪ್ಪಿಗೆ ಸಿಕ್ಕಿದೆ.

ಈ ಮೂಲಕ ನಿರ್ಭಯಾ ಬಾಲಾಪರಾಧಿಯನ್ನು ವಯಸ್ಕನಂತೆ ಪರಿಗಣಿಸಿ ಶಿಕ್ಷೆ ವಿಧಿಸುವ ಆಗ್ರಹಗಳಿಗೆ ಮನ್ನಣೆ ಸಿಗುವ ಸಂಭವವಿದೆ. ಬಾಲ ನ್ಯಾಯ(ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ ತಿದ್ದುಪಡಿ ವಿಧೇಯಕ ಗುರುವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಇದೇ ಸಂದರ್ಭದಲ್ಲಿ ಸರ್ಕಾರವು, ಅಮಾಯಕ ಮಕ್ಕಳಿಗೆ ಅನ್ಯಾಯವಾಗದಂತೆ `ಉತ್ತಮ ಸಮತೋಲನ’ ಕಾಪಾಡಿಕೊಳ್ಳಲು ಬದ್ಧವಾಗಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದೆ.

ವಿಧೇಯಕದ 7ನೇ ಕಲಂ ಅನ್ನು ತೆಗೆದುಹಾಕಲು ಸರ್ಕಾರ ಒಪ್ಪಿದ ಬಳಿಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು. `21 ವರ್ಷವಾದ ಬಳಿಕ ಬಂಧಿತನಾದ ವ್ಯಕ್ತಿಯು 16ರಿಂದ 18 ವರ್ಷದೊಳಗೆ ಏನಾದರೂ ಅಪರಾಧ ಮಾಡಿದ್ದರೆ ಆತನನ್ನು ಇದೇ ಕಾಯ್ದೆಯ ನಿಬಂಧನೆಯನುಸಾರ ವಯಸ್ಕನಂತೆ ಪರಿಗಣಿಸಿ ವಿಚಾರಣೆ ನಡೆಸುವ ಅವಕಾಶ’ವನ್ನು 7ನೇ ಕಲಂ ನೀಡಿತ್ತು. ಇದೇ ವೇಳೆ, ಹೊಸ ಕಾನೂನಿನಿಂದಾಗಿ ಮಕ್ಕಳ ಹಕ್ಕುಗಳ ದುರ್ಬಳಕೆ ಹಾಗೂ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದ ಪ್ರತಿಪಕ್ಷಗಳು, ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ವಿರೋಧಿಸಿದರು. ಆದರೆ, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ, ಸಂತ್ರಸ್ತರಿಗೆ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಡುವೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಎಂದರು.

ಬಾಲ ನ್ಯಾಯ ವಿಧೇಯಕದಲ್ಲೇನಿದೆ?

ಬಾಲ ನ್ಯಾಯ ಕಾಯ್ದೆ, 2000ದ ಜಾಗವನ್ನು ಈ ವಿಧೇಯಕ ಆಕ್ರಮಿಸಿಕೊಳ್ಳಲಿದೆ. ಇದು `ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಮಕ್ಕಳು’ ಮತ್ತು `ಕಾಳಜಿ ಮತ್ತು ರಕ್ಷಣೆಯ

ಅಗತ್ಯವಿರುವ ಮಕ್ಕಳ’ ಬಗ್ಗೆ ಮಾತಾಡುತ್ತದೆ ಘೋರ ಅಪರಾಧ ಮಾಡಿದರೆ 16 ರಿಂದ 18ರೊಳಗಿನವರನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ನೀಡುತ್ತದೆ.

ಪ್ರತಿ ಜಿಲ್ಲೆಯಲ್ಲೂ ಬಾಲ ನ್ಯಾಯ ಮಂಡಳಿ(ಜೆಜೆಬಿ) ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಗಳ(ಸಿಡಬ್ಲ್ಯುಸಿ) ರಚನೆ. ಬಾಲ ಆರೋಪಿಯ ಪ್ರಾಥಮಿಕ ತನಿಖೆ ನಡೆಸುವ ಜೆಜೆಬಿ, ಆ ಆರೋಪಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೋ, ವಯಸ್ಕನಂತೆ ವಿಚಾರಣೆಗೊಳಪಡಿಸಬೇಕೋ ಎಂಬುದನ್ನು ನಿರ್ಧರಿಸುತ್ತದೆ. ಸಿಡಬ್ಲ್ಯುಸಿ ಕಾಳಜಿ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳ ಸಾಂಸ್ಥಿಕ ಕ್ಷೇಮಾಭಿವೃದ್ಧಿಯ ಕೆಲಸ ಮಾಡುತ್ತದೆ. ದತ್ತು ತೆಗೆದುಕೊಳ್ಳುವ ಹೆತ್ತವರ ಅರ್ಹತೆ ಮತ್ತು ದತ್ತು ಪ್ರಕ್ರಿಯೆಯನ್ನು ಕೂಡ ವಿಧೇಯಕದಲ್ಲಿ ಸೇರಿಸಲಾಗಿದೆ ಮಗುವಿನ ಮೇಲೆ ಕ್ರೌರ್ಯ, ಮಕ್ಕಳಿಗೆ ಮಾದಕ ದ್ರವ್ಯ ನೀಡುವುದು ಮತ್ತು ಮಕ್ಕಳ ಅಪಹರಣ ಅಥವಾ ಮಾರಾಟಕ್ಕೆ ದಂಡ ವಿಧಿಸುವ ಬಗ್ಗೆಯೂ ವಿಧೇಯಕದಲ್ಲಿದೆ.

ಬದಲಾವಣೆಗೆ ಮುನ್ನುಡಿ ಬರೆದ ನಿರ್ಭಯಾ

2012ರ ಡಿ.16ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವೇ ಇಂತಹುದೊಂದು ಮಹತ್ವದ ನಿರ್ಧಾರಕ್ಕೆ ಮುನ್ನುಡಿ ಬರೆಯಿತು. ಅಂದು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದವರಲ್ಲಿ ಒಬ್ಬ ಬಾಲಕನೂ ಸೇರಿದ್ದ. ಆಕೆಯ ಯೋನಿಯೊಳಗೆ ಕೈಹಾಕಿ ಕರುಳನ್ನು ಎಳೆದವನೂ ಇವನೇ ಆಗಿದ್ದ. ಆದರೆ ಪ್ರಕರಣದ ಎಲ್ಲ ಆರೋಪಿಗಳಿಗೂ ಗಲ್ಲುಶಿಕ್ಷೆಯಾದರೆ, ಈ ಬಾಲರಾಕ್ಷಸನನ್ನು ಮಾತ್ರ 18 ವರ್ಷ ತುಂಬಿಲ್ಲ ಎಂಬ ಕಾರಣಕ್ಕಾಗಿ 3 ವರ್ಷ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು. ಇದು ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಯಿತು. ಘೋರ ಅಪರಾಧವೆಸಗುವ ಹದಿವಯಸ್ಕರನ್ನೂ ವಯಸ್ಕರಂತೆ ಪರಿಗಣಿಸಿ ವಿಚಾರಣೆ ನಡೆಸಿ ಎಂಬ ಕೂಗು ಮೊಳಗಿತು.

Write A Comment