ರಾಷ್ಟ್ರೀಯ

ವಿವಾಹ ಬಂಧಕ್ಕೊಳಗಾಗಲು ಮುಂದಾದ ‘ಗೆಳತಿಯರು’

Pinterest LinkedIn Tumblr

Same-Sex-Marriage-d

ಕಾಸ್‌ಗಂಜ್(ಉತ್ತರಪ್ರದೇಶ),ಏ.20- ಗೆಳತಿಯರಿಬ್ಬರು ಪರಸ್ಪರ ವಿವಾಹ ಬಂಧಕ್ಕೊಳಗಾಗಲು ನಿರ್ಧರಿಸಿದ್ದು, ಇದುವರೆಗೆ ಪ್ರಶಾಂತವಾಗಿದ್ದ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ ಸೊರೋನ್ ಎಂಬ ಪುಟ್ಟ ಪಟ್ಟಣದಲ್ಲಿ ಕುತೂಹಲದ ಅಲೆ ಸೃಷ್ಟಿಸಿದೆ.  ಗೆಳತಿಯರು ತಾವು  ಒಬ್ಬರನ್ನೊಬ್ಬರು ಮನಸಾರೇ ಪ್ರೀತಿಸಿ ಮದುವೆಯಾಗುತ್ತಿರುವುದಾಗಿ ನೋಟರಿಯಿಂದ ಪ್ರಮಾಣಪತ್ರ ಸಿದ್ಧಪಡಿಸಿಕೊಂಡಿದ್ದು, ತಾವಿಬ್ಬರೂ ಒಟ್ಟಿಗೆ ವಾಸಿಸುವುದರಿಂದ ನಮಗೆ ಯಾವುದೇ ರೀತಿಯ ತೊಂದರೆಗಳೂ ಆಗದಂತೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ದೇಶದ ಇತರ ಊರುಗಳಂತೆಯೇ ಸಂಪ್ರದಾಯದ ಕಟ್ಟಳೆಯಲ್ಲಿರುವ ಸೋರೋನ್‌ನಲ್ಲೀಗ ಸಂಚಲನ ಮೂಡಿದೆ.  ಇಬ್ಬರೂ ವಯಸ್ಕರಾಗಿದ್ದು, ವಿವಾಹದ ನಿರ್ಧಾರ ತೆಗೆದುಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ತಾವಿಬ್ಬರೂ ಪರಸ್ಪರ ಭೇಟಿಯಾಗಿದ್ದು, ಇಬ್ಬರೂ ಪ್ರೀತಿಸಿದ್ದೇವೆ. ಈಗ ಮದುವೆಗೆ ಸಿದ್ಧರಾಗಿದ್ದೇವೆ ಎಂದು ಯುವತಿಯರು ಹೇಳಿದ್ದಾರೆ.

2014ರ ಏಪ್ರಿಲ್ 14ರಂದೇ ಗೆಳತಿಯರಿಬ್ಬರೂ ನೋಟರಿ ದೃಢೀಕರಣ ಪತ್ರ ತಯಾರಿಸಿದ್ದು, ಎರಡೂ ಕುಟುಂಬಗಳವರೂ ಆಘಾತಕ್ಕೊಳಗಾಗಿದ್ದಾರಂತೆ. ಆದರೆ ಯಾವುದೇ ಕಾರಣಕ್ಕೂ ಈ ಹುಡುಗಿಯರು ಒಬ್ಬರನ್ನು ಬಿಟ್ಟು ಒಬ್ಬರು ದೂರವಾಗುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.  ಈಗ ಸೊರೋನ್ ಎಂಬ ಪುಟ್ಟ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಈ ಗೆಳತಿಯರಿಬ್ಬರ ಮದುವೆ ವಿಷಯವೇ ಚರ್ಚಿತವಾಗುತ್ತಿದೆ. ಇಬ್ಬರೂ ವಯಸ್ಕರಾಗಿರುವುದರಿಂದ  ಅವರಿಗೆ ಕಾನೂನಿನ ಭಯವಿಲ್ಲ. ಪೊಲೀಸರು ಕೂಡ ರಕ್ಷಣೆ ನೀಡಿದ್ದಾರೆ.  ಯುವತಿಯರಿಬ್ಬರೂ ವಯಸ್ಕರಾಗಿರುವುದರಿಂದ ಅವರಿಗೆ ಅವರಿಷ್ಟದಂತೆ ಬದುಕಲು ಅವಕಾಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Write A Comment