ಉದಯಪುರ : ಕೃಷಿ ಸಾಲ ಮನ್ನಾ ಯೋಜನೆಗಳಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಸ್ಪಷ್ಟ ಶಬ್ದಗಳಲ್ಲಿ ಹೇಳಿದರು.
ಸರ್ಕಾರಗಳು ಘೋಷಿಸುವ ಇಂತಹ ಯೋಜನೆಗಳಿಂದ ರೈತರಿಗೆ ಅನುಕೂಲವಾಗುವ ಬದಲು ಸರಾಗ ಸಾಲದ ಲಭ್ಯತೆ ಕಡಿಮೆಯಾಗಿ ತೊಂದರೆಯಾಗುತ್ತಿದೆ ಎಂದು ಭಾರತೀಯ ಆರ್ಥಿಕ ಸಂಘಟನೆಯ ವಾರ್ಷಿಕ ಸಮಾವೇಶದಲ್ಲಿ ಶನಿವಾರ ಅಭಿಪ್ರಾಯಪಟ್ಟರು.
ಸರ್ಕಾರದ ನೀತಿಗಳ ಬಗ್ಗೆ ರಘುರಾಮ್ ರಾಜನ್ ಅಸಮಾಧಾನದ ಮಾತುಗಳನ್ನು ಆಡಿರುವುದು ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಸಲ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಭಾರತದಲ್ಲೇ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಕರೆಯು ದೇಶೀಯ ಮಾರುಕಟ್ಟೆಗೆ ಮಾರಕವಾಗಿ ಪರಿಣಮಿಸಬಹುದು ಎಂದು ಕೆಲವೇ ದಿನಗಳ ಹಿಂದೆ ಅವರು ಎಚ್ಚರಿಸಿದ್ದರು.
‘ಕೇಂದ್ರ, ರಾಜ್ಯಗಳು ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ಕೃಷಿ ಸಾಲ ಮನ್ನಾ ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಇದರಿಂದ ಯಾವ ಉಪಯೋಗವೂ ಆಗಿಲ್ಲ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ನಿಜ ಹೇಳಬೇಕೆಂದರೆ, ಇಂತಹ ಯೋಜನೆಗಳನ್ನು ಜಾರಿಗೊಳಿಸಿದ ನಂತರ ರೈತರಿಗೆ ಸೂಕ್ತ ಸಮಯದಲ್ಲಿ ಸಾಕಷ್ಟು ಸಾಲ ಸಿಗದಂತೆ ಆಗಿದೆ’ ಎಂದು ವಿವರಿಸಿದರು.
‘ಕೃಷಿ ವಲಯದಲ್ಲಿನ ವಿಪರೀತ ಸಾಲಭಾರವನ್ನು ನಿಭಾಯಿಸುವುದು ಹೇಗೆ ಎಂಬುದಕ್ಕೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ರೈತರ ಆತ್ಮಹತ್ಯೆ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ. ಬ್ಯಾಂಕ್ಗಳಲ್ಲಿ ಮಾಡುವ ಸಾಲವು ರೈತರ ಸಾವಿಗೆ ಎಷ್ಟರಮಟ್ಟಿಗೆ ಕಾರಣವಾಗುತ್ತಿದೆ? ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆ ಕೃಷಿಕರ ಋಣಭಾರ ಹೆಚ್ಚಲು ಎಷ್ಟು ಕಾರಣವಾಗುತ್ತಿದೆ? ಇವುಗಳ ಬಗ್ಗೆ ಪರಾಮರ್ಶಿಸುವುದು ಸೂಕ್ತ’ ಎಂದು ರಾಜನ್ ಪ್ರತಿಪಾದಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಕಳೆದ ವರ್ಷದ ಫೈಲಿನ್ ಚಂಡಮಾರುತದಿಂದ ಸಂತ್ರಸ್ತರಾದವರಿಗೆ ಸಾಲ ಮನ್ನಾ ಘೋಷಿಸಿವೆ. ತೆಲಂಗಾಣವು ಮನ್ನಾ ಮಾಡಿದ ಮೊತ್ತದ ಶೇ 25ರಷ್ಟು ಪಾಲನ್ನು ಬ್ಯಾಂಕುಗಳಿಗೆ ಈಗಾಗಲೇ ನೀಡಿದೆ. ಆದರೆ ಆಂಧ್ರಪ್ರದೇಶ ಸರ್ಕಾರವು ಇನ್ನೂ ಬ್ಯಾಂಕುಗಳಿಗೆ ಹಣ ಸಂದಾಯ ಮಾಡಿಲ್ಲ.
ಯುಪಿಎ ಸರ್ಕಾರವು 2008ರಲ್ಲಿ ಸುಮಾರು 4.3 ಕೋಟಿ ರೈತರ ರೂ. 52,516 ಕೋಟಿ ಸಾಲವನ್ನು ಮನ್ನಾ ಮಾಡಿತ್ತು. ಮಹಾಲೇಖಪಾಲರು ನಂತರ ಈ ಬಗ್ಗೆ ಆಕ್ಷೇಪಿಸಿದ್ದರು. ‘ನಿಜವಾದ ಅರ್ಹರು ಈ ಯೋಜನೆಯಡಿ ಸಾಲ ಮನ್ನಾ ಸವಲತ್ತಿನಿಂದ ವಂಚಿತರಾಗಿದ್ದಾರೆ’ ಎನ್ನುವ ಮೂಲಕ ಭಾರಿ ಅವ್ಯವಹಾರ ನಡೆದಿರುವ ಸಾಧ್ಯತೆಗಳ ಬಗ್ಗೆ ಅವರು ಸುಳಿವು ನೀಡಿದ್ದರು.
ಕಡಿಮೆ ಬಡ್ಡಿ ಸಾಲ ಒಳ್ಳೆಯದು
ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಸಬ್ಸಿಡಿಗಳಿಂದಾಗಿ ರೈತರಿಗೆ ನಿಜವಾಗಿಯೂ ಏನಾದರೂ ಉಪಯೋಗವಾಗಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಬೇಕು. ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದೇನೋ ಒಳ್ಳೆಯದೇ. ಆದರೆ ಅದು ಸರಿಯಾದ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಅಥವಾ ಅದರಿಂದ ರೈತರ ಸಾಲದ ಹೊರೆ ಇನ್ನಷ್ಟು ಹೆಚ್ಚಾಗುತ್ತಿದೆಯೇ ಇಲ್ಲವೆ ಅನರ್ಥದ ಹೂಡಿಕೆಗೆ ಇದು ಎಡೆಮಾಡಿಕೊಡುತ್ತಿದೆಯೇ ಎಂಬುದರ ಬಗ್ಗೆ ಅವಲೋಕನ ನಡೆಯಬೇಕಿದೆ
-ರಘುರಾಮ್ ರಾಜನ್, ಆರ್ಬಿಐ ಗವರ್ನರ್