ರಾಷ್ಟ್ರೀಯ

ಸಿಡ್ನಿಯಲ್ಲಿ ಉಗ್ರರ ಅಟ್ಟಹಾಸ : ಪ್ರಧಾನಿ ಮೋದಿ ತೀವ್ರ ಖಂಡನೆ

Pinterest LinkedIn Tumblr

sydney

ಸಿಡ್ನಿ,ಡಿ.15: ಪ್ರಖ್ಯಾತ ಪ್ರವಾಸಿ ತಾಣವಾಗಿರುವ ಸಿಡ್ನಿಯ ಮಾರ್ಟಿನ್ ಪ್ಲೇಸ್‌ನಲ್ಲಿರುವ ಸ್ಟಾರ್ ಹೋಟೆಲ್‌ವೊಂದರಲ್ಲಿ ಹಲವು ಜನ ನಾಗರಿಕರನ್ನು ಒತ್ತೆಯಾಗಿಟ್ಟುಕೊಂಡಿರುವ ಶಸ್ತ್ರಧಾರಿ ಉಗ್ರರು ಹೋಟೆಲ್‌ನ ಕಿಟಕಿಯಲ್ಲಿ ಅರಬೀ ಭಾಷೆಯ ಬರಹವನ್ನೊಳಗೊಂಡ ಧ್ವಜವೊಂದನ್ನು ಹಾರಿಸಿದ್ದಾರೆ. ಉಗ್ರರ ಈ ಅಟ್ಟಹಾಸದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ.

ನಗರದ ಪ್ರತಿಷ್ಠಿತ ಹೋಟೆಲ್ ಆಗಿರುವ ಲಿಂಡ್ಟ್ ಚಾಕೊಲೆಟ್ ಕೆಫೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷರಾದ ಅಪರಿಚಿತ ಉಗ್ರರು (ಎಷ್ಟು ಉಗ್ರರಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ) ಹೋಟೆಲ್‌ನಲ್ಲಿದ್ದ ಹಲವು ಮಂದಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಉಗ್ರರ ಕೃತ್ಯದಿಂದ ಆತಂಕಕ್ಕೊಳಗಾಗಿರುವ ಜಿಲ್ಲಾಡಳಿತ ಹೋಟೆಲ್ ಸಮೀಪದ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಿ, ಕಟ್ಟಡಗಳಲ್ಲಿರುವ ನಿವಾಸಿಗಳನ್ನು ಬೇರಡೆಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದೆ. ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಮಾರ್ಟಿನ್ ಪ್ಲೇಸ್ ಜಿಲ್ಲೆ ರಾಜಧಾನಿ ಸಿಡ್ನಿಯ ಹೃದಯ ಭಾಗದಲ್ಲಿದ್ದು ಸದಾ ವಾಹನ, ಜನದಟ್ಟಣೆಯಿಂದ ಕೂಡಿರುತ್ತದೆ. ಸಂಸತ್ತಿಗೂ ಸಮೀಪವಾಗಿಯೇ ಇದ್ದು, ಅನೇಕ ಅಧಿಕೃತ ಕಚೇರಿಗಳನ್ನು ಹೊಂದಿದೆ. ಹೋಟೆಲ್ ಒಳಗಿರುವ ಉಗ್ರರು ಕಿಟಕಿಗಳಿಗೆ ತಮ್ಮ ಕೈಗಳನ್ನಿಟ್ಟುಕೊಂಡು ‘ಶಹದಾಹ್’ ಎಂದು ಹೇಳಲಾಗುವ ಶ್ಲೋಕವಿರುವ ಕಪ್ಪು ಧ್ವಜ ಪ್ರದರ್ಶಿಸುತ್ತಾ ನಿಂತಿದ್ದಾರೆ. ಆದರೆ ಆ ಧ್ವಜ ನಿರ್ದಿಷ್ಟವಾದ ಯಾವುದೇ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ್ದೆಂದು ಗೊತ್ತಾಗುತ್ತಿಲ್ಲ. ಈ ಚಿತ್ರಗಳು ಮಾತ್ರ ಸಿಸಿ ಕ್ಯಾಮೆರಾದಲ್ಲಿ ಕಂಡುಬರುತ್ತಿವೆ. ಲಿಂಡ್ಟ್ ಕೆಫೆಯಲ್ಲಿ ಸುಮಾರು 10 ಜನ ಸಿಬ್ಬಂದಿ ಹಾಗೂ 30 ಮಂದಿ ಗ್ರಾಹಕರು ಇದ್ದಾರೆ.

ಆದರೆ ಉಗ್ರರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ ಎಂದು ಹೋಟೆಲ್ ಆಡಳಿತ ಮಾಹಿತಿ ನೀಡಿದೆ. ಇದೇ ವೇಳೆ ಕೆಫೆಯಲ್ಲಿ ಒಬ್ಬನೇ ಬಂದೂಕುಧಾರಿ ಇರಬಹುದೆಂದು ಹಿರಿಯ ಪೊಲೀಸ್ ಅಧಿಕಾರಿ ಆಂಡ್ರ್ಯೂಸಿಪಿಯೋನ್ ಶಂಕಿಸಿದ್ದಾರೆ. ಇಷ್ಟಾದರೂ ಇದುವರೆಗೂ ಒಳಗಿರುವ ಉಗ್ರರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಕೆಫೆಯ ಬಳಿಯಿದ್ದ ಸಿಡ್ನಿ ಒಪೇರಾ ಹೌಸ್, ಸರ್ಕಾರಿ ಗ್ರಂಥಾಲಯ, ನ್ಯಾಯಾಲಯ ಸಮುಚ್ಚಯ ಸೇರಿದಂತೆ ಎಲ್ಲವನ್ನೂ ತೆರವುಗೊಳಿಸಲಾಗಿದೆ.

ಪ್ರಧಾನಿ ತುರ್ತು ಸಭೆ: ಉಗ್ರರ ಅಟ್ಟಹಾಸದಿಂದ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಪ್ರಧಾನಿ ಟೋನಿ ಅಬೋಟ್, ಸಚಿವರು, ಅಧಿಕಾರಿಗಳು ಹಾಗೂ ಭದ್ರತಾ ವಿಭಾಗದ ಅಧಿಕಾರಿಗಳೊಂದಿಗೆ ಸಂಸತ್ತಿನಲ್ಲಿ ಸಭೆ ಕರೆದಿದ್ದಾರೆ.

ಉಗ್ರರ ಈ ಕೃತ್ಯಗಳಿಗೆ ಯಾರೂ ಭಯಪಡುವ ಅಗತ್ಯವಿಲ್ಲ. ನಮ್ಮ ಭದ್ರತಾ ಸಿಬ್ಬಂದಿ ಇದನ್ನು ಸೂಕ್ತವಾಗಿ ನಿರ್ವಹಿಸುತ್ತಾರೆ. ದೇಶದಲ್ಲಿ ರಕ್ಷಣಾ ವ್ಯವಸ್ಥೆ ಬಿಗಿಯಾಗಿದೆ. ಸರ್ಕಾರ ಇದನ್ನು ನಿರಾಂತಕವಾಗಿ ನಿಭಾಯಿಸಲಿದೆ ಎಂದು ಪ್ರಧಾನಿ ಅಬೋಟ್ ಜನತೆಗೆ ಭರವಸೆ ನೀಡಿ, ಧೈರ್ಯ ಹೇಳಿದ್ದಾರೆ. ಉಗ್ರರ ಉದ್ದೇಶವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಆದರೂ ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಖಂಡನೆ: ಉಗ್ರರ ಈ ಕೃತ್ಯ ಅಮಾನವೀಯವಾದುದು ಎಂದು ಕಟುವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲರ ಸುರಕ್ಷತೆಗೆ ತಾವು ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಸಿಡ್ನಿಯ ಈ ಘಟನೆ ನೆಮ್ಮದಿ ಹಾಳು ಮಾಡುವ ಕೃತ್ಯ. ಇಂಥ ಕೃತ್ಯಗಳು ಅಮಾನವೀಯತೆಯಿಂದ ಕೂಡಿದವು. ಎಲ್ಲರ ರಕ್ಷಣೆಗೆ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

Write A Comment