ರಾಷ್ಟ್ರೀಯ

ಪ್ರಬಲ ಸಾಕ್ಷಿಯ ಹೊರತು ಖಾತೆದಾರರ ಮಾಹಿತಿ ನೀಡಲ್ಲ: ಸ್ವೀಸ್

Pinterest LinkedIn Tumblr

switzerland-modi

ನವದೆಹಲಿ: ಕಪ್ಪು ಹಣ ಕುರಿತಂತೆ ಪ್ರಬಲ ಸಾಕ್ಷಿ ಇರದ ಹೊರತು ಮಾಹಿತಿ ಕೇಳಿಕೊಂಡು ಬರಬೇಡಿ ಎಂದು ಸ್ವಿಟ್ಜರ್ಲೆಂಡ್ ಹೇಳಿದೆ.

ಕಪ್ಪುಹಣ ಕುರಿತಂತೆ ಎಲ್ಲ ಭಾರತೀಯರ ಮಾಹಿತಿ ನೀಡುವಂತೆ ಭಾರತದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ಉಲ್ಟಾ ಹೊಡೆದಿರುವ ಸ್ವಿಟ್ಜರ್ಲೆಂಡ್ ಸರ್ಕಾರ ಆದಾಯ ತೆರಿಗೆ ಅಕ್ರಮದಲ್ಲಿ ಖಾತೆದಾರ ಪಾಲ್ಗೊಂಡಿರುವ ಕುರಿತು ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಭಾರತಕ್ಕೆ ಮಾಹಿತಿ ನೀಡುತ್ತೇವೆ. ಇಲ್ಲವಾದರೆ ಈ ಬಗ್ಗೆ ಮಾತನಾಡಲು ಬರಬೇಡಿ ಎಂದು ಸ್ವಿಸ್ ಸರ್ಕಾರ ಹೇಳಿದೆ.

ಸ್ವಿಸ್ ಸರ್ಕಾರ ರಾಯಭಾರಿ ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಅವರು, ಗತಕಾಲದ ವಿಚಾರಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನಾವು ನೀಡಿದ ಭರವಸೆಯಂತೆ ಸಾಕ್ಷ್ಯಾಧಾರಗಳನ್ನು ನೀಡಿದರೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಈ ಹಿಂದೆ ಸ್ವಿಸ್‌ನಲ್ಲಿ ಖಾತೆ ತೆರೆದಿರುವ ಎಲ್ಲ ಖಾತೆದಾರರೂ ತೆರಿಗೆ ವಂಚಕರು ಎಂದು ಹೇಳಲು ಸಾಧ್ಯವಿಲ್ಲ. ಖಾತೆದಾರರ ಖಾತೆಯ ವಿವರಗಳನ್ನು ಗೌಪ್ಯವಾಗಿಡುವುದು ನಮ್ಮ ಕರ್ತವ್ಯ. ಹೀಗಾಗಿಯೇ ನಾವು ಪ್ರಬಲ ಸಾಕ್ಷ್ಯ ನೀಡದ ಹೊರತು ಖಾತೆ ವಿವರಗಳನ್ನು ನೀಡುವುದಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ನೇರವಾಗಿ ಹೇಳಿದ್ದಾರೆ.

ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ನಾವು ಅಭಿನಂದಿಸುತ್ತೇವೆ. ಭಾರತ ಸರ್ಕಾರದೊಂದಿಗೆ ನಾವು ಅತ್ಯುತ್ತಮವಾದ ಸಂಪರ್ಕ ಹೊಂದಿದ್ದೇವೆ. ಅಂತೆಯೇ ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಭಾರತ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಗತಕಾಲದ ವಿಚಾರಗಳನ್ನು ನಾವು ಮತ್ತೆ ಪುನರ್ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಹೇಳಿದರು.

ಒಟ್ಟಾರೆ ಕಪ್ಪು ಹಣವನ್ನು ಭಾರತಕ್ಕೆ ತರುವ ಕೇಂದ್ರಸರ್ಕಾರ ಹೋರಾಟಕ್ಕೆ ಸ್ವಿಸ್ ಸರ್ಕಾರದ ಈಗಿನ ನಿರ್ಧಾರ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಕಾದುನೋಡಬೇಕಿದೆ.

Write A Comment