ರಾಷ್ಟ್ರೀಯ

ವಿಜ್ಞಾನಕ್ಕಿಂತ ಜ್ಯೋತಿಷ್ಯವೇ ಮೇಲು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ರಮೇಶ್ ಪೊಕ್ರಿಯಾಲ್

Pinterest LinkedIn Tumblr

Ramesh-Pokhriyal

ನವದೆಹಲಿ: ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಇದೀಗ ಬಿಜೆಪಿಯ ಸಂಸದರೊಬ್ಬರು ಸಂಸತ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಸಂಸತ್‌ನಲ್ಲಿ ಕಲಾಪ ನಡೆಯುತ್ತಿದ್ದಾಗ ವಿಜ್ಞಾನಕ್ಕಿಂತ ಜ್ಯೋತಿಷ್ಯವೇ ಮೇಲು ಎಂದು ಹೇಳುವ ಮೂಲಕ ಉತ್ತರಾಖಂಡದ ಮಾಜಿ ಸಿಎಂ, ಬಿಜೆಪಿ ಸಂಸದ ರಮೇಶ್ ಪೊಕ್ರಿಯಾಲ್ ನಿಶಾಂಕ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸ್ಕೂಲ್ ಆಫ್ ಪ್ಲಾನಿಂಗ್ ಆ್ಯಂಡ್ ಆರ್ಕಿಟೆಕ್ಚರ್‌ಗೆ ಹೆಚ್ಚಿನ ಅಧಿಕಾರ ನೀಡಬೇಕೆಂಬ ಮಸೂದೆಯ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ನಿಶಾಂಕ್, ಜ್ಯೋತಿಷ್ಯ ಶಾಸ್ತ್ರವು ಲಕ್ಷ ಲಕ್ಷ ವರ್ಷಗಳ ಹಿಂದೆಯೇ ಲೆಕ್ಕಾಚಾರಗಳನ್ನು ಸುಲಭವಾಗುವಂತೆ ಮಾಡಿತ್ತು. ಎಲ್ಲ ವಿಜ್ಞಾನದ ಶಾಖೆಗಳು ಈ ಜ್ಯೋತಿಷ್ಯದ ಮುಂದೆ ತೃಣ ಸಮಾನ. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚಿನ ಒತ್ತು ನೀಡಿ ಅದನ್ನು ಮುಂದೆ ತರಬೇಕಾಗಿದೆ. ಈ ವಿಷಯದ ಬಗ್ಗೆ ಚರ್ಚೆಯಾಗಬೇಕು ಎಂದಿದ್ದಾರೆ.

ಆದಾಗ್ಯೂ, ಲಕ್ಷ ಲಕ್ಷ ವರ್ಷಗಳ ಹಿಂದೆಯೇ ಋಷಿ ಕಣಾದ ಪರಮಾಣು ಪರೀಕ್ಷೆಗಳನ್ನು ಮಾಡಿದ್ದರು. ನಮ್ಮ ಜ್ಞಾನ ಮತ್ತು ವಿಜ್ಞಾನ ಯಾವುದರಲ್ಲೂ ಕಡಿಮೆಯಾಗಬಾರದು ಎಂದು ಹೇಳಿದ ಸಂಸದ ಮೋದಿಯವರ ಹೇಳಿಕೆಯನ್ನೂ ಇಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್ ಸರ್ಜರಿ ಮತ್ತು ಜೆನೆಟಿಕ್ ಸಯನ್ಸ್ ಬಗ್ಗೆ ಹೇಳುವಾಗ ಪುರಾಣದ ಗಣಪತಿ ಮತ್ತು ದಾನಶೂರ ಕರ್ಣ ಇದಕ್ಕೆ ಉದಾಹರಣೆ ಎಂದು ಹೇಳಿದ್ದರು. ಮೋದಿಯವರು ಪುರಾಣದಲ್ಲಿ ಗಣಪತಿಗೆ ಆನೆಯ ತಲೆ ಜೋಡಿಸಿರುವುದನ್ನು ಪ್ಲಾಸ್ಟಿಕ್ ಸರ್ಜರಿಗೆ ಹೋಲಿಸಿದ್ದರು. ಅದೇ ನಿಜವಾದ ಸರ್ಜರಿ ಆಗಿತ್ತು. ಆದ್ದರಿಂದ ನಮ್ಮಲ್ಲಿರುವ ವಿಜ್ಞಾನ ಜಗತ್ತಿನ ಯಾವ ಮೂಲೆಗೆ ಹೋದರೂ ಸಿಗಲ್ಲ ಎಂದು ನಿಶಾಂಕ್ ಅಭಿಪ್ರಾಯ ಪಟ್ಟಿದ್ದಾರೆ. ನಿಶಾಂಕ್ ಅವರ ಈ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.

Write A Comment