ರಾಷ್ಟ್ರೀಯ

ಬಾಬಾ ರಾಮ್‌ಪಾಲ್ ಕೊಠಡಿಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಕಿಟ್

Pinterest LinkedIn Tumblr

Rampal

ಹಿಸಾರ್: ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್ ಅವರ ಸತ್‌ಲೋಕ ಆಶ್ರಮದಲ್ಲಿನ ಅವರ ಖಾಸಗಿ ಕೊಠಡಿಯಲ್ಲಿ ಗರ್ಭ ಪರೀಕ್ಷೆ ಕಿಟ್, ಪೆಟ್ರೋಲ್ ಬಾಂಬ್, ಆ್ಯಸಿಡ್ ಸಿರೆಂಜ್‌ಗಳು ಪತ್ತೆಯಾಗಿವೆ.

ಆಶ್ರಮದಲ್ಲಿ ಶುಕ್ರವಾರ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ವಿವರ ನೀಡಿರುವ ಹರಿಯಾಣಾ ಪೊಲೀಸರ ವಿಶೇಷ ತನಿಖಾ ತಂಡ, ಆಶ್ರಮದ ಆವರಣದಲ್ಲಿ ಅವಿತಿದ್ದ ಜನರನ್ನು ವಶಕ್ಕೆ ತೆಗೆದುಕೊಂಡಿದೆ. ವಿಚಾರಣೆಗಾಗಿ ಮಹಿಳೆ ಸೇರಿದಂತೆ ನಾಲ್ವರು ಅನುಯಾಯಿಗಳನ್ನು ಬಂಧಿಸಲಾಗಿದೆ.

”ಬಾಬಾ ಅವರ ಖಾಸಗಿ ಕೊಠಡಿಯಲ್ಲಿ 32 ಬೋರ್ ರಿವಾಲ್ವರ್‌ಗಳು, ಎರಡು ’19 ಏರ್ ಗನ್’ಗಳು, ಎರಡು ’12 ಬೋರ್ ರೈಫಲ್ಸ್’, ಎರಡು ‘315 ಬೋರ್ ರೈಫಲ್ಸ್’, ಚಿಲ್ಲಿ ಗ್ರೇನೇಡ್ಸ್ ಹಾಗೂ ಸಿಡಿಮದ್ದುಗಳು ಪತ್ತೆಯಾಗಿವೆ,” ಎಂದು ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

20 ಜತೆ ಕಪ್ಪು ಉಡುಪು ಹಾಗೂ 800 ಲೀಟರ್ ಡೀಸೆಲ್ ತುಂಬಿದ್ದ ಎರಡು ಟ್ಯಾಂಕ್‌ಗಳು ಆಶ್ರಮದಲ್ಲಿ ಪತ್ತೆಯಾಗಿವೆ. ಬಂದ್ ಆಗಿದ್ದ ಸ್ನಾನಗೃಹದ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

”ಬಾಬಾ ತಮ್ಮ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಆಸನದ ಕೆಳಗೆ ಸುರಂಗ ಮಾರ್ಗದ ರೀತಿಯಲ್ಲಿದ್ದ ಕೊಠಡಿಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಪತ್ತೆಯಾಗಿವೆ. ತಪಾಸಣೆ ನಡೆಸುವ ಉದ್ದೇಶದಿಂದ ಆಶ್ರಮದಲ್ಲಿರುವ ಎರಡು ಬೃಹತ್ ನೀರಿನ ಟ್ಯಾಂಕ್‌ಗಳನ್ನು ಬರಿದುಮಾಡಲಾಗುವುದು ,” ಎಂದು ಐಜಿಪಿ ಹೇಳಿದ್ದಾರೆ.

ಪಂಜಾಬ್ ಹಾಗೂ ಹರಿಯಾಣಾ ಹೈಕೋರ್ಟ್ ಆದೇಶದ ಮೇರೆಗೆ, ದಾಳಿ ವೇಳೆ ಆಶ್ರಮದಲ್ಲಿ ವಶಪಡಿಸಿಕೊಂಡಿದ್ದ ಅಪಾರ ಪ್ರಮಾಣದ ಆಹಾರ ಪದಾರ್ಥಗಳನ್ನು ಆಹಾರ ಮತ್ತು ಸರಬರಾಜು ಇಲಾಖೆ ವಿಲೇವಾರಿ ಮಾಡಿದೆ.

ನಕ್ಸಲ್ ನಂಟು :
”ಛತ್ತೀಸ್‌ಗಢ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಸುಮಾರು 865 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಯಾರಾದರೂ ನಕ್ಸಲ್‌ಗಳಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಕಚ್ಚಾ ಬಾಂಬ್ ತಯಾರಿಕೆ ತರಬೇತಿ ಪಡೆದವರ ವಿವರ ನೀಡುವಂತೆ ಛತ್ತೀಸ್‌ಗಢದ ಪೊಲೀಸರನ್ನು ಕೋರಲಾಗಿದೆ,” ಎಂದು ಅವರು ತಿಳಿಸಿದರು.

ಕಾಣೆಯಾಗಿದೆ ಹಾರ್ಡ್ ಡಿಸ್ಕ್ :
”ಆಶ್ರಮದಲ್ಲಿ ಅಳವಡಿಸಿದ್ದ ಕಾಣ್ಗಾವಲು ಕ್ಯಾಮರಾದ ಚಿತ್ರಗಳನ್ನು ಒಳಗೊಂಡಿದ್ದ ಹಾರ್ಡ್ ಡಿಸ್ಕ್ ಕಾಣೆಯಾಗಿದ್ದು, ಅದರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದರಿಂದ ರಾಮ್‌ಪಾಲ್ ಹಾಗೂ ಆತನ ಸಹಾಯಕರ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಬಹುದು,” ಎಂದು ರಾವ್ ಹೇಳಿದ್ದಾರೆ.

Write A Comment