ಭಾರತೀಯ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ಗುಟ್ಟಾಗಿ ಮತ್ತೆ ಭಾರತಕ್ಕೆ ತರುತ್ತಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಇದಕ್ಕೆ ಸರ್ಕಾರದ ಪರೋಕ್ಷ ಒಪ್ಪಿಗೆಯೂ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಅದನ್ನು ಬಹಿರಂಗವಾಗಿ ಹೇಳುವಂತಿಲ್ಲ. ಒಟ್ಟಾರೆ, ಭಾರತಕ್ಕೆ ಕಪ್ಪುಹಣವು ಯಾವ್ಯಾವ ರೂಪದಲ್ಲಿ ಬರುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಕಿಸಾನ್ ವಿಕಾಸ್ ಪತ್ರ(ಕೆವಿಪಿ)
8 ವರ್ಷ 4 ತಿಂಗಳಲ್ಲೇ ನಿಮ್ಮ ಹಣವನ್ನು ದುಪ್ಪಟ್ಟು ಮಾಡುವಂತಹ ಕಿಸಾನ್ ವಿಕಾಸ್ ಪತ್ರ(ಕೆವಿಪಿ)ವನ್ನು ಇತ್ತೀಚೆಗಷ್ಟೇ ಕೇಂದ್ರ ಸಚಿವ ಅರುಣ್ ಜೇಟ್ಲಿ ಮರುಜಾರಿ ಮಾಡಿದ್ದಾರೆ. ಒಮ್ಮೆ ನೀವು ಕೆವೈಸಿ(ನೋ ಯುವರ್ ಕಸ್ಟಮರ್) ದಾಖಲೆ ನೀಡಿದರೆ, ನಂತರ ಕಿಸಾನ್ ವಿಕಾಸ್ ಪತ್ರವನ್ನು ಯಾರಿಗೆ ಬೇಕಾದರೂ ವರ್ಗಾಯಿಸಬಹುದು.
ಮೆಚ್ಯೂರಿಟಿ ಅವಧಿಯ ಬಳಿಕ ಯಾವುದೇ ಅಂಚೆ ಕಚೇರಿಯಲ್ಲೂ ಅದನ್ನು ಮರು ಖರೀದಿ ಮಾಡಬಹುದು. ಇದಕ್ಕೆ ಪ್ಯಾನ್ ವಿವರ ಬೇಕಿಲ್ಲ. ತೆರಿಗೆ ಇಲಾಖೆಯು ಅಂಚೆ ಕಚೇರಿಗಳಿಂದ ಯಾವುದೇ ಮಾಹಿತಿ ಪಡೆಯಲಾಗುವುದಿಲ್ಲ.
ನೀವು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿ, ಕೆವಿಪಿಯಿಂದ ಬಂದ ಆದಾಯ ಎಂದು ಘೋಷಿಸಿದರೆ, ನಿಮ್ಮನ್ನು ಹಿಡಿಯಲು ತೆರಿಗೆ ಇಲಾಖೆಗೆ ಸಾಧ್ಯವಾಗದು. ಹೀಗಾಗಿ ಕೆವಿಪಿ ಎನ್ನುವುದು ಅಘೋಷಿತ ಹಣದ ಸಂಗ್ರಹಕ್ಕೆ, ವರ್ಗಾವಣೆಯ ಸಾಧನವಾಗಬಹುದು.
ಚಿನ್ನದ ಆಮದು
ಮೋದಿ ಸರ್ಕಾರ ಅಧಿಕಾರಕ್ಕೆ ಬರುವ 5 ದಿನಗಳ ಮುಂಚೆ ಚಿನ್ನದ ಆಮದು ನಿಯಮಗಳನ್ನು ಆರ್‌ಬಿಐ ಸಡಿಲಗೊಳಿಸಿತು. ದೊಡ್ಡ ಆಮದುದಾರರು, ರಫ್ತುದಾರರಿಗೆ 80:20ರಂತೆ ಚಿನ್ನ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು.
ಅಂದರೆ ಆಮದು ಮಾಡಲಾದ ಪ್ರತಿ 100 ಯುನಿಟ್ ಚಿನ್ನಕ್ಕೆ, ಅವರು 20 ಯುನಿಟ್‌ಗಳನ್ನು ಬೇರೆ ರೂಪದಲ್ಲಿ(ಚಿನ್ನಾಭರಣ) ಮರುರಫ್ತು ಮಾಡಬೇಕು. ಸೆಪ್ಟೆಂಬರ್‌ನಲ್ಲಿ ಆಮದಾದ ಚಿನ್ನದಲ್ಲಿ ಶೇ.40ರಷ್ಟು ಕೇವಲ 6 ಟ್ರೇಡಿಂಗ್ ಹೌಸ್‌ಗಳು ಆಮದು ಮಾಡಿಕೊಂಡಿವೆ ಎನ್ನಲಾಗಿದೆ.
ಹಾಗಾದರೆ ಅಷ್ಟೊಂದು ಚಿನ್ನವನ್ನು ಖರೀದಿಸಿದವರಾರು ಎಂಬ ಪ್ರಶ್ನೆ ಮೂಡದೇ ಇರದು. ರಿಯಲ್ ಎಸ್ಟೇಟ್ ಹೊರತುಪಡಿಸಿದರೆ ಕಪ್ಪುಹಣವನ್ನು ಯಾರಿಗೂ ಗೊತ್ತಗದಂತೆ ದೇಶಕ್ಕೆ ತರಲು ಇರುವ ಸುಲಭ ಮಾರ್ಗ ಚಿನ್ನ.
ಅನಾಮಧೇಯ ಹೂಡಿಕೆದಾರ
ಅಕ್ಟೋಬರ್‌ನಲ್ಲಿ ಹಣಕಾಸು ಪತ್ರ(ಪಾರ್ಟಿಸಿಪೇಟರಿ ನೋಟ್ಸ್)ದ ಹೂಡಿಕೆ 7 ವರ್ಷಗಳಲ್ಲೇ ಅಧಿಕ(ರೂ. 2,65,675 ಕೋಟಿ)ವಾಗಿತ್ತು. ಪಿ-ನೋಟ್‌ಗಳು ಭಾರತದ ಷೇರುಗಳಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡ ಬಯಸುವವರಿಗೆಂದೆ ಇರುವಂಥದ್ದು.
ಸಂಪೂರ್ಣ ವಹಿವಾಟು ಸಾಗರೋತ್ತರದಲ್ಲೇ ನಡೆಯುವಂಥದ್ದು. ತಮ್ಮ ಗುರುತನ್ನು ಬಹಿರಂಗಪಡಿಸದೆ ಭಾರತದಲ್ಲೇ ಖರೀದಿ ಮತ್ತು ಮಾರಾಟ ಮಾಡಲು ಬಯಸುವವರು ಪಿ-ನೋಟ್‌ಗಳನ್ನು ಬಳಸುತ್ತಾರೆ. ಈಗ ಇದರಲ್ಲಿ ಹೂಡಿಕೆ ಹೆಚ್ಚಾಗಿದೆಯೆಂದರೆ ಕಪ್ಪುಹಣವೂ ಹೂಡಿಕೆಯಾಗುತ್ತಿದೆ ಎಂದರ್ಥ.
ರಿಯಲ್ ಎಸ್ಟೇಟ್
ದೇಶದಲ್ಲಿ ಕಪ್ಪುಹಣವನ್ನು ಅತಿಹೆಚ್ಚು ತೊಡಗಿಸಿಕೊಳ್ಳುವ ಕ್ಷೇತ್ರ ರಿಯಲ್ ಎಸ್ಟೇಟ್. ಇತ್ತೀಚಿನ ದಿನಗಳಲ್ಲಿ ಪ್ರತಿ ವಾರವೂ ಕೆಲವರು ಈ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ, ಕಳೆದ ತಿಂಗಳು ಕೇಂದ್ರ ಸರ್ಕಾರವು ರಿಯಲ್ ಎಸ್ಟೇಟ್ ಮತ್ತು ಗೃಹ ಕ್ಷೇತ್ರಕ್ಕೆ ವಿದೇಶಿ ಹೂಡಿಕೆ ನಿಯಮವನ್ನೂ ಸಡಿಲಗೊಳಿಸಿದೆ. ಈ ಮೂಲಕ ಇನ್ನಷ್ಟು ವಿದೇಶಿ ಹಣ ಭಾರತಕ್ಕೆ ಬರಲು ಅನುವು ಮಾಡಿಕೊಡಲಾಗಿದೆ.
