ಗಲ್ಫ್

ಮುತ್ತುಗಳ ದ್ವೀಪದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ “ಕನ್ನಡ ವೈಭವ” ಕ್ಕೆ ವೇದಿಕೆ ಸಜ್ಜು: ಅನಾವರಣಗೊಳ್ಳಲಿರುವ ಕನ್ನಡ ಸಾಂಸ್ಕ್ರತಿಕ ಲೋಕ; ಕನ್ನಡ ಚಲನಚಿತ್ರ ರಂಗದ ಜನಪ್ರಿಯ ಕಲಾವಿದರುಗಳ ತಾರಾಕರ್ಷಣೆ

Pinterest LinkedIn Tumblr

ಬಹರೈನ್: ಕಳೆದ 42  ವರುಷಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡದ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಮುಂಚೂಣಿಯಲ್ಲಿರುವ ದ್ವೀಪದ ಕನ್ನಡಿಗರ  ಮಾತೃ ಸಂಸ್ಥೆಯಾಗಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಇದೀಗ ರಾಜ್ಯೋತ್ಸವದ ಅಂಗವಾಗಿ ಬ್ರಹತ್ ಕನ್ನಡ ಸಾಂಸ್ಕ್ರತಿಕ ಕಾರ್ಯಕ್ರಮ”ಕನ್ನಡ ವೈಭವ ” ವನ್ನು ಹಮ್ಮಿಕೊಂಡಿದ್ದು ಇದಕ್ಕಾಗಿಯೇ ಮನಾಮದಲಿರುವ  ಅಲ್ ರಾಜಾ ಸ್ಕೂಲಿನ ಸಾಂಸ್ಕೃತಿಕ ಸಭಾಂಗಣದಲ್ಲಿ  ಭವ್ಯವಾದ ಅಂಬರೀಷ್ ವೇದಿಕೆ ಸಜ್ಜಾಗುತ್ತಿದೆ .

ನಾಲ್ಕು ವರುಷಗಳ ಶ್ರೀಮಂತ ಇತಿಹಾಸವಿರುವ ಕನ್ನಡ ಸಂಘ ತನ್ನ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದ್ದು ನಾಡಿನ ಅದೆಷ್ಟೋ ಜನಪ್ರಿಯ ಕಲಾವಿದರುಗಳು ,ಸಾಧಕರು ,ಧಾರ್ಮಿಕ ಮುಖಂಡರುಗಳು ,ರಾಜಕೀಯ ಮುತ್ಸದ್ದಿಗಳು ಸಂಘಕ್ಕೆ ಭೇಟಿ ನೀಡಿ ,ಕಲಾ ಪ್ರದರ್ಶನ ನೀಡಿ ಗೌರವಿಸಲ್ಪಟ್ಟಿದ್ದಾರೆ . ಕನ್ನಡ ಕಲೆ ,ಭಾಷೆ ,ಸಂಸ್ಕ್ರತಿಗೆ ವಿಶೇಷ ಆದ್ಯತೆ ನೀಡುತ್ತಿರುವ ಸಂಘ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪ್ರಥಮವಾಗಿ ಸೀಮೋಲ್ಲಂಘನ ಮಾಡಿಸಿದ ಖ್ಯಾತಿಗೂ ಪಾತ್ರವಾಗಿದೆ . ಇತ್ತೀಚೆಗಷ್ಟೇ ಕರ್ನಾಟಕ ಸಾಹಿತ ಪರಿಷತ್ತಿನ ಸಹಯೋಗದೊಂದಿಗೆ ಪ್ರಪ್ರಥಮ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು ಇದೀಗ ಜರುಗಲಿರುವ “ಕನ್ನಡ ವೈಭವ ” ಸಾಂಸ್ಕ್ರತಿಕ ಕಾರ್ಯಕ್ರಮವು ಸಂಘದ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲಾಗಲಿದ್ದು ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಾರಥ್ಯದಲ್ಲಿ ಇದಾಗಲೇ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದ್ದಾರೆ .

ಕನ್ನಡ ಚಿತ್ರರಂಗದ ಪ್ರತಿಭಾವಂತ ರಾಷ್ಟ್ರಪ್ರಶಸ್ತಿ ವಿಜೇತ ಜನಪ್ರಿಯ ನಟಿ ಶ್ರೀಮತಿ ತಾರಾ ವೇಣುಗೋಪಾಲ್ ,ಖ್ಯಾತ ಛಾಯಾಗ್ರಾಹಕ ಶ್ರೀ ಎಚ್ .ಸಿ .ವೇಣುಗೋಪಾಲ್ ,ಕನ್ನಡಪ್ರಭ ದಿನಪತ್ರಿಕೆ ಹಾಗು ಸುವರ್ಣ ವಾಹಿನಿಯ ನ್ಯೂಸ್ ವಿಭಾಗದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗ್ಡೆ ,ಕನ್ನಡ ಚಲನಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ,ಗಾಯಕ,ನಟ ಕಡಲತೀರದ ಸಂಗೀತ ಸುಂದರ ಗುರುಕಿರಣ್,ಕನ್ನಡ ಚಲನ ಚಿತ್ರರಂಗದ ಖ್ಯಾತ ಹಾಸ್ಯ ನಟ,ಚಿತ್ರ ನಿರ್ದೇಶಕ ಹಾಗು ಸಂಗೀತ ನಿರ್ದೇಶಕರೂ ಆಗಿರುವ ಶ್ರೀ ಸಾಧು ಕೋಕಿಲ ಇವರುಗಳು ನಾಡಿನಿಂದ ದ್ವೀಪಕ್ಕೆ ಆಗಮಿಸಿ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಕೊಲ್ಲಿಯ ಈ ಮಣ್ಣಿನಲ್ಲಿ ಕನ್ನಡ ತೇರನ್ನು ಎಳೆಯುವ ಸಂಘದ ಕಾಯಕದಲ್ಲಿ ಕೈಜೋಡಿಸಿ ಕನ್ನಡಿಗರಲ್ಲಿ ನೂರ್ಮಡಿ ಚೈತನ್ಯ ಮೂಡಿಸಲಿರುವರು ಮಾತ್ರವಲ್ಲದೆ ತಮ್ಮ ಕಲಾಪ್ರದರ್ಶನದಿಂದ ದ್ವೀಪದ ಕನ್ನಡಿಗರನ್ನು ರಂಜಿಸಲಿರುವರು .

ಅಮೆರಿಕಾದ ಜನಪ್ರಿಯ ಶಾಸ್ತ್ರೀಯ ನ್ರತ್ಯ ತಂಡ “ತ್ರೀ ಅಕ್ಷ ಡಾನ್ಸ್ ಟ್ರೂಪ್” ಕಾರ್ಯಕ್ರಮದಲ್ಲಿ ನ್ರತ್ಯಗಳು ,ನ್ರತ್ಯರೂಪಕಗಳನ್ನು ಪ್ರದರ್ಶಸಿ ನಾಡಿನ ಶ್ರೀಮಂತ ಕಲೆ,ಸಂಸ್ಕ್ರತಿಯ ಪರಿಚಯ ನೀಡಲಿರುವರು . ಅಮೇರಿಕಾದಲ್ಲಿ ನೆಲೆಸಿರುವ ಕನ್ನಡತಿ ಶ್ರೀಮತಿ ವಿಜಿ ರಾವ್ ರವರ ನೇತೃತ್ವದ ಈ ತಂಡ ಇದಾಗಲೇ ಇಂಗ್ಲೆಂಡ್ ,ಭಾರತ,ಅಮೆರಿಕ ಸೇರಿದಂತೆ ಪ್ರಪಂಚದ ಹಲವೆಡೆಗಳಲ್ಲಿ ನೂರಾರು ಯಶಸ್ವೀ ಪ್ರದರ್ಶನಗಳನ್ನು ನೀಡಿದೆ . ಸಂಘದ ಸುಮಾರು ೫೦ಕ್ಕೂ ಹೆಚ್ಚಿನ ಪ್ರತಿಭಾವಂತ ಕಲಾವಿದರುಗಳಿಂದ ನಾಡಿನ ಹಿರಿಮೆ ಗರಿಮೆಯನ್ನು ಸಾರುವ ವೈವಿಧ್ಯಮಯ ನ್ರತ್ಯ ಪ್ರಕಾರಗಳು ರಂಗದಲ್ಲಿ ಮೂಡಿಬರಲಿರುವುದು . ಕನ್ನಡಚಲನಚಿತ್ರ ರಂಗಕ್ಕೆ ಅನನ್ಯ ಕೊಡುಗೆ ನೀಡಿ, ಕನ್ನಡ ಚಲನಚಿತ್ರ ರಂಗದ ಹಿರಿಯಣ್ಣನಂತೆ ಇದ್ದು ಇತ್ತೀಚೆಗೆ ನಿಧನರಾದ ಜನಪ್ರಿಯ ನಟ ಶ್ರೀ ಅಂಬರೀಶ್ ರವರಿಗೆ ಗೌರವ ಸೂಚ್ಯವಾಗಿ ವೇದಿಕೆಯನ್ನು ಅಂಬರೀಷ್ ವೇದಿಕೆ ಎಂದು ಹೆಸರಿಸಲಾಗಿದ್ದು ,ಈ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ರಂಗಕರ್ಮಿ,ಕಲಾ ನಿರ್ದೇಶಕ ,ನಟ ಶ್ರೀ ಅರುಣ್ ಸಾಗರ್ ರವರು ನಿರೂಪಿಸಲಿದ್ದಾರೆ .

ಕಾರ್ಯಕ್ರಮದ ಮುಖ್ಯ ಅತಿಥಿಯ ಸ್ಥಾನವನ್ನು ಇಲ್ಲಿನ ಭಾರತೀಯ ರಾಯಭಾರಿ ಶ್ರೀ ಅಲೋಕ್ ಸಿನ್ಹಾ ರವರು ಅಲಂಕರಿಸಲಿದ್ದಾರೆ.

ಸಂಘದ ಚುಕ್ಕಾಣಿಯನ್ನು ಹಿಡಿದಿರುವ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ಇತ್ತೀಚೆಗೆ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ” ಈ ಕಾರ್ಯಕ್ರಮ ದ್ವೀಪದ ಕನ್ನಡಗರಿಗೆ ನಮ್ಮ ನಾಡಿನ ಕಲೆ ,ಭಾಷೆ,ಸಂಸ್ಕ್ರತಿಗೆ ಸಾಕ್ಷಿಯಾಗುವಂತಹ ಒಂದು ಸುವರ್ಣಾವಕಾಶವನ್ನು ಕಲ್ಪಿಸಿಕೊಡುತ್ತಿದೆ . ನಾವು ಈ ಕಾರ್ಯಕ್ರಮದ ಮುಖೇನ ನಮ್ಮ ನಾಡಿನ ಶ್ರೀಮಂತ ಕಲೆ,ಸಂಸ್ಕ್ರತಿಯನ್ನು ಅನಾವರಣಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ದ್ವೀಪದ ಕನ್ನಡಿಗರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ” ಎಂದರು .

ಈ ಕಾರ್ಯಕ್ರಮದ ಶೀರ್ಷಿಕಾ ಪ್ರಾಯೋಜಕರಾಗಿ ಬಿ ಎಮ್ ಎಮ್ ಐ ಸಂಸ್ಥೆಯು ಸಹಕರಿಸುತ್ತಿದ್ದರೆ , ಇತರ ಪ್ರಾಯೋಜಕರುಗಳಾಗಿ ರಾಮೀ ಗ್ರಾಂಡ್ ಹೋಟೆಲ್ ಆಂಡ್ ಸ್ಪಾ ,ಪ್ರೆಸಿಡೆಂಟ್ ಗ್ರೂಪ್,ಪ್ಯಾಪಿಲಾನ್ ರೆಸ್ಟೋರೆಂಟ್ ,ಅಲ್ ಸಫೀರ್ ಹೋಟೆಲ್ ,ಪ್ರುಡೆನ್ಷಿಯಲ್ ಮ್ಯಾನ್ ಪವರ್ ,ಎಕ್ಸಲನ್ ,,ಅವ್ಮಾ (auma) ಸಂಸ್ಥೆ ,ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಸಹಕರಿಸುತ್ತಿದೆ .

ಕಾರ್ಯಕ್ರಮವು ಇದೆ ನವೆಂಬರ್ ತಿಂಗಳ 30ನೇ ತಾರೀಖಿನ ಶುಕ್ರವಾರ ಸಂಜೆ 5 ಘಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಲಿದ್ದು ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದೆ ಅಲ್ಲದೆ ಕಾರ್ಯಕ್ರಮದ ನಂತರ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ . ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರನ್ನು ದೂರವಾಣಿ ಸಂಖ್ಯೆ 39147114ಮುಖೇನ ಸಂಪರ್ಕಿಸಬಹುದು .

ವರದಿ-ಕಮಲಾಕ್ಷ ಅಮೀನ್

Comments are closed.