ಗಲ್ಫ್

ದುಬೈ ಐತಿಹಾಸಿಕ ವಿಶ್ವ ತುಳು ಸಮ್ಮೇಳನಕ್ಕೆ ತೆರೆ; ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಒಕ್ಕೊರಲ ನಿರ್ಣಯ

Pinterest LinkedIn Tumblr

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಲ್ಮಣ್

ದುಬೈ: ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟ ಸಹಕಾರದಲ್ಲಿ ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್‌ರಿಂಕ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಐತಿಹಾಸಿಕ ವಿಶ್ವ ತುಳು ಸಮ್ಮೇಳನಕ್ಕೆ ಶನಿವಾರ ತೆರೆ ಬಿದ್ದಿದೆ.

ವಿದೇಶದ ಮಣ್ಣಿನಲ್ಲಿ ಮೊತ್ತಮೊದಲ ಬಾರಿಗೆ ನಡೆದ ಎರಡು ದಿನಗಳ ವಿಶ್ವ ತುಳು ಸಮ್ಮೇಳನದಲ್ಲಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಲು ಒಕ್ಕೊರಲ ಏಕಮಾತ್ರ ನಿರ್ಣಯ ಕೈಗೊಳ್ಳಲಾಯಿತು.

ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಮೃದ್ಧ ಸಾಹಿತ್ಯ ಹೊಂದಿರುವ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು ಸಮ್ಮೇಳನದ ಅಧ್ಯಕ್ಷ, ಅನಿವಾಸಿ ಭಾರತೀಯ ಖ್ಯಾತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಅವರಿಗೆ ನಿರ್ಣಯದ ಪ್ರತಿಯನ್ನು ನೀಡಿ, ಕೇಂದ್ರ ಸರಕಾರವನ್ನು ಒತ್ತಾಯಿಸುವಂತೆ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು ಆಗ್ರಹಿಸಿದರು.

ತುಳು ಭಾಷೆಯನ್ನು ಕೊಂಡಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ

ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ತುಳು ಭಾಷೆ, ಪರಂಪರೆ, ಆಚಾರ-ವಿಚಾರಗಳನ್ನು ಮೆಲುಕು ಹಾಕಿ, ತುಳು ಭಾಷೆಯ ಬಗ್ಗೆ ತಮಗಿರುವ ಅಪಾರ ಪ್ರೀತಿಯನ್ನು ಕೊಂಡಾಡಿದರು.

ತುಳುವರು ಶಾಂತಿ ಪ್ರಿಯರು. ಎಲ್ಲಿಗೆ ಹೋದರು ಅವರು ಕಷ್ಟಪಟ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತುಳುವರೇ ಸಾಕ್ಷಿ ಎಂದರು.

ನಾನು ತುಳು ಸಿನೆಮಾದಲ್ಲಿ ನಟಿಸಬೇಕೆಂಬ ಆಸೆ ಇದೆ. ಆದರೆ ಅದಕ್ಕೂ ಒಂದು ಷರತ್ತು ಇದೆ. ನಾನು ತುಳು ಸಿನೆಮಾದಲ್ಲಿ ನಟಿಸಿದರೆ ಆ ಸಿನೆಮಾದಿಂದ ಸಿಗವ ಹಣವನ್ನೆಲ್ಲ ತುಳು ಮಣ್ಣಿನ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೀಡಬೇಕು. ಇದನ್ನು ಒಪ್ಪಿದರೆ ನಾನು ನಟಿಸುತ್ತೇನೆ ಎಂದು ಸವಾಲು ಹಾಕಿದರು.

ತಂದೆ ಅನಾರಾಗ್ಯಕ್ಕೀಡಾಗಿದ್ದ ಕಾರಣ ತಾನು ಕಳೆದ ನಾಲ್ಕೂವರೆ ವರ್ಷಗಳಿಂದ ಸಿನೆಮಾದಲ್ಲಿ ನಟಿಸಿಲ್ಲ. ಈಗ ಹಲವಿ ಸಿನೆಮಾಕ್ಕೆ ತಾನು ಸೈಹಾಕಿದ್ದೇನೆ. ಜೊತೆಗೆ ಫೆಬ್ರವರಿಯಲ್ಲಿ ತನ್ನ ಮಗ ಕೂಡ ಬಾಲಿವುಡ್’ಗೆ ಎಂಟ್ರಿ ನೀಡುತ್ತಿದ್ದಾನೆ. ಇದೆಲ್ಲ ತುಳು ಮಣ್ಣಿನ ಕರಾಮತ್ತು ಎಂದು ಸುನಿಲ್ ಶೆಟ್ಟಿ ತುಳುನಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುಕಿರಣ್ ಹಾಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು

ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ಹಾಡುತ್ತಿದ್ದಂತೆ ನೆರೆದ ಜನ ಸಭಾಂಗಣದ ಮುಂದೆ ಹುಚ್ಚೆದ್ದು ಕುಣಿದರು. ಕೆಲವು ಯುವಕ-ಯುವತಿಯರು ವೇದಿಕೆ ಹತ್ತಿ ಹೆಜ್ಜೆ ಹಾಕಿದರು. ಇದೆ ವೇಳೆ ತುಳು ಸಿನೆಮಾ ನಟ ಭೋಜರಾಜ್ ವಾಮಂಜೂರು ಕೂಡ ತಮ್ಮ ಕಂಠ ಸಿರಿಯಾ ಮೂಲಕ ತುಳು ಹಾಡೊಂದನ್ನು ಹಾಡಿ ರಂಜಿಸಿದರು. ಇವರೊಂದಿಗೆ ಸ್ಥಳೀಯ ಗಾಯಕರಾದ ಪ್ರಮೋದ್ ಹಾಗು ಅವರ ತಂಡವರು ತಮ್ಮ ಸುಮಧುರ ಕಂಠದ ಮೂಲಕ ಹಾಡಿದರು. ಜೊತೆಗೆ ಹಲವು ತಂಡಗಳಿಂದ ನೃತ್ಯ ರೂಪಕ, ಮನೋರಂಜನಾ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭವನ್ನು ಉಡುಪಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕ್ರೈಸ್ತ ಧರ್ಮಗುರು ವಂ.ಎಬ್ನೆಝರ್ ಜತ್ತನ್ನ, ‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಎ.ಸಿ.ಭಂಡಾರಿ, ಸಮ್ಮೇಲೇನಾದ ರೂವಾರಿ ಸರ್ವೋತ್ತಮ ಶೆಟ್ಟಿ, ಶೋಧನ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಡೆದ ತಾಳಮದ್ದಳೆಯಲ್ಲಿ ಸತೀಶ್ ಶೆಟ್ಟಿ ಪಾಟೀಲ, ಜಬ್ಬಾರ್ ಸಮೋ, ಕಾದ್ರೆ ನವನೀತ್ ಶೆಟ್ಟಿ, ತೋನ್ಸೆ ಪುಷ್ಕಳ್ ಕುಮಾರ್, ದಯಾನಂದ್ ಕತ್ತಲ್ಸರ್ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದರು.

ಆನಂತರ ನಡೆದ ಕವಿಕೂಟದಲ್ಲಿ ಡಾ.ವೈ.ಏನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ರಾವ್ ಪಯ್ಯಾರ್, ಇರ್ಷಾದ್ ಮೂಡಬಿದ್ರೆ, ಗೋಪಿನಾಥ್ ರಾವ್, ಎಂ.ಈ.ಮೂಳೂರು, ಅವಿನಾಶ್ ಭಟ್, ನಾಗಭೂಷಣ್ ರಾವ್ ಹಾಗು ಉಷಾ ಕೋಲ್ಪೆ ಕವಿಕೂಟದಲ್ಲಿ ಭಾಗವಹಿಸಿದ್ದರು.

ಭಾಸ್ಕರ್ ರೈ ಕುಕ್ಕವಳ್ಳಿ, ಕದ್ರಿ ನವನೀತ್ ಶೆಟ್ಟಿ, ಆರ್‌ಜೆ ಸಾಯಿಹೀಲ್ ರೈ, ಆರ್‌ಜೆ ಪ್ರಿಯಾ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಯೆಡ್ಮಾರ್ ಕಾರ್ಯಕ್ರಮ ನಿರೂಪಿಸಿದರು.

 

 

Comments are closed.