ಗಲ್ಫ್

ದುಬೈ ‘ವಿಶ್ವ ತುಳು ಸಮ್ಮೇಳನ’ಕ್ಕೆ ಡಾ.ವೀರೇಂದ್ರ ಹೆಗ್ಗಡೆಯವರಿಂದ ಅದ್ದೂರಿ ಚಾಲನೆ; ತುಳುನಾಡ ಕಲಾವೈಭವವನ್ನು ತೆರೆದಿಟ್ಟ ಸಾಂಸ್ಕೃತಿಕ ಕಾರ್ಯಕ್ರಮ

Pinterest LinkedIn Tumblr

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಲ್ಮನ್

ದುಬೈ: ಸಾಗರೋತ್ತರ ತುಳುವರು, ಅಖಿಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ನಡೆದ ಐತಿಹಾಸಿಕ ಅದ್ದೂರಿ ವಿಶ್ವ ತುಳು ಸಮ್ಮೇಳನಕ್ಕೆ ಶುಕ್ರವಾರ ಕನಸಿನ ನಗರಿ ದುಬೈ ಸಾಕ್ಷಿಯಾಯಿತು.

ತುಳುನಾಡಿನ ಇತಿಹಾಸದಲ್ಲೇ ಮೊತ್ತಮೊದಲ ವಿಶ್ವ ತುಳು ಸಮ್ಮೇಳನ ವಿದೇಶದ ನೆಲದಲ್ಲಿ ನಡೆಯುವುದರೊಂದಿಗೆ ವಿಶ್ವದ ವಿವಿಧ ಕಡೆ ಪಸರಿಸಿರುವ ತುಳುವರನ್ನು ಒಂದುಗೂಡಿಸುವ ಜೊತೆಗೆ ತುಳು ಮಣ್ಣಿನ ಕಮ್ಮನೆಯನ್ನು ಮರಳುಗಾಡಿನಲ್ಲಿ ಹರಡುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು.

ದುಬೈಯ ಅಲ್ ನಸ್ರ್ ಲೀಶರ್‌ಲ್ಯಾಂಡ್ ಐಸ್ ರಿಂಕ್ ಆ್ಯಂಡ್ ನಶ್ವನ್ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಎರಡು ದಿನಗಳ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದ ತುಳುವರ ಸಮ್ಮುಖದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಮ್ಮೇಳನದಲ್ಲಿ ಯುಎಇಯ ಸಚಿವ ಶೇಖ್ ನಹ್ಯಾನ್ ಮುಬಾರಕ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಮೂಲಕ ಸಮ್ಮೇಳನಕ್ಕೆ ಮೆರುಗು ತಂದುಕೊಟ್ಟರು.

ತುಳುವರ ಕಲೆ ಸಂಸ್ಕೃತಿ, ಆಚಾರ -ವಿಚಾರವನ್ನು ತೆರೆದಿಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಕೊಲ್ಲಿ ರಾಷ್ಟ್ರದಲ್ಲಿ ತುಳುವ ಕಂಪನ್ನು ಪಸರಿಸುವಂತೆ ಮಾಡಿತು.

ಸಮ್ಮೇಳನಕ್ಕೆ ಚಾಲನೆ ನೀಡಿ ಅತೀವ ಸಂತಸಪಟ್ಟ ಡಾ. ಡಿ. ವೀರೇಂದ್ರ ಹೆಗ್ಗಡೆ

ತುಳುವರು ಶಾಂತಿ ಪ್ರಿಯರು, ಕೆಲಸ ಕಾರ್ಯಗಳಲ್ಲಿ ಎಲ್ಲರಿಗಿಂತ ಒಂದೆಜ್ಜೆ ಮುಂದೆಯೇ ಇರುತ್ತಾರೆ. ಅದಕ್ಕೆ ಸಾಕ್ಷಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ತುಳುವರು. ಬಂಗಾರದಂಥ ದೇಶದಲ್ಲಿ ತುಳುವರಿಗೆ ದುಡಿಯಲು ಅವಕಾಶ ನೀಡಿದ ಇಲ್ಲಿದೆ ರಾಜರಿಗೆ ನಾವು ಆಬಾರಿಯಾಗಿದ್ದೇವೆ. ಗಲ್ಫ್ ರಾಷ್ಟ್ರದೊಂದಿಗೆ ಭಾರತದ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುವ ಜೊತೆಗೆ ನಮಗೆ ದುಡಿಯುವ ಅವಕಾಶ ಕೂಡ ಇಲ್ಲಿ ಹೆಚ್ಚು ಸಿಗುವಂತಾಗಲಿ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಹಾರೈಸಿದರು.

ನಮ್ಮ ನಾಡಿನ ದೈವಗಳ, ಕೃಷಿ ಬದುಕನ್ನು, ಕಲೆ-ಸಂಸ್ಕೃತಿಯನ್ನು ನೆನಪಿಸುವ ಜೊತೆಗೆ ಇಂದಿನ ಪೀಳಿಗೆ ಇದರ ಅರಿವು ಮೂಡಬೇಕೆನ್ನುವ ಉದ್ದೇಶದಿಂದ ಸಮ್ಮೇಲೆನವನ್ನು ದುಬೈಯಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನವನ್ನು ದುಬೈಯ ಮಣ್ಣಿನಲ್ಲಿ ಉದ್ಘಾಟಿಸುದಕ್ಕೆ ನನಗೆ ತುಂಬಾ ಸಂತೋಷ ಆಗುತ್ತಿದೆ ಎಂದ ಡಾ. ಡಿ. ವೀರೇಂದ್ರ ಹೆಗ್ಗಡೆ, ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಇನ್ನಷ್ಟು ಬಲಗೊಳ್ಳಲಿ ಎಂದು ಕರೆ ನೀಡಿದರು.

ತುಳುವರ ಬಗ್ಗೆ ಕೊಂಡಾಡಿದ ಯುಎಇಯ ಸಚಿವ

ತುಳುವಾರ ಬಗ್ಗೆ, ತುಳು ಭಾಷೆಯ ಬಗ್ಗೆ, ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ಯುಎಇಯ (ಸಹಿಷ್ಣು) ಸಚಿವ ಶೇಖ್ ನಹ್ಯಾನ್ ಮುಬಾರಕ್ ಅಲ್ ನಹ್ಯಾನ್ ಗುಣಗಾನ ಮಾಡಿದರು.

ತುಳುವರ ಜಾನಪದ ಕಲೆ ತನಗಿಷ್ಟ. ತುಳುವರು ಎಲ್ಲ ರೀತಿಯಿಂದಲೂ ಒಳ್ಳೆಯವರು. ಅವರೊಂದಿಗೆ ತಾನು ಸ್ನೇಹವನ್ನು ಇಟ್ಟುಕೊಂಡಿದ್ದು, ಇನ್ನಷ್ಟು ಸ್ನೇಹವನ್ನು ಬಯಸುತ್ತೇನೆ. ನಮ್ಮ ಮಧ್ಯೆಗಿನ ಸಂಬಂಧ ಗಟ್ಟಿಗೊಳ್ಳುವಂತಾಗಲಿ. ಜೊತೆಗೆ ಇಂಥ ಕಾರ್ಯಕ್ರಮ ಕೂಡ ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಅನಿವಾಸಿ ಭಾರತೀಯ ಖ್ಯಾತ ಉದ್ಯಮಿ ಡಾ. ಬಿ.ಆರ್ ಶೆಟ್ಟಿ ವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಜಯಮಾಲ, ಯು.ಟಿ. ಖಾದರ್‌, ಮಂಗಳೂರು ಬಿಷಪ್‌ ಪೀಟರ್‌ ಪೌಲ್‌ ಸಲ್ಡಾನಾ, ಬಳ್ಳಾರಿ ಬಿಷಪ್‌ ಹೆನ್ರಿ ಡಿಸೋಜ, ಪ್ರೊಟೆಸ್ಟಂಟ್‌ ಧರ್ಮಗುರು ಎಬಿನೇರ್‌ ಜತ್ತನ್ನ, ಮಾಧ್ಯಮ ಕಮ್ಯುನಿಕೇಶನ್‌ ನಿರ್ದೇಶಕ, ವಾರ್ತಾ ಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಲ್‌ ಸಲಾಂ ಪುತ್ತಿಗೆ, ಉದ್ಯಮಿ ರೊನಾಲ್ಡೊ ಕುಲಾಸೊ, ಶಾಸಕ ಉಮಾನಾಥ ಕೋಟ್ಯಾನ್‌, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಆಳ್ವಾಸ್‌ ಎಜುಕೇಶನ್‌ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್‌ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್‌, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ ಭಂಡಾರಿಉದ್ಯಮಿ ಸುಶಾಂತ್‌ ಶೆಟ್ಟಿ, ಬಸವ ಸಮಿತಿಯ ಅರವಿಂದ್‌ ಜತ್ತಿ ಭಾಗವಹಿಸಿ, ಸಮ್ಮೇಳನದ ಯಶಸ್ವಿಗೆ ಶುಭ ಹಾರೈಸಿದರು.

“ವಿಶ್ವ ತುಳು ಐಸಿರಿ” ಎಂಬ ಸ್ಮರಣ ಸಂಚಿಕೆ ಬಿಡುಗಡೆ

ಸಮ್ಮೇಳನದ ಸ್ಮರಣಾರ್ಥ ಲೇಖಕ ಗಣೇಶ್ ರೈ ಸಾರಥ್ಯದಲ್ಲಿ ಮೂಡಿಬಂದಿರುವ ” ವಿಶ್ವ ತುಳು ಐಸಿರಿ” ಎಂಬ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಅರವಿಂದ್‌ ಜತ್ತಿಯವರು ರಚಿಸಿರುವ, ಡಾ.ವಿವೇಕ್ ರೈ ತುಳು ಭಾಷೆಗೆ ಅನುವಾದಿರುವ ಬಸವಣ್ಣನ ವಚನಗಳ ಪುಸ್ತಕವನ್ನು ಅನಾವರಣಗೊಳಿಸಲಾಯಿತು.

ವಿಶ್ವ ತುಳು ಸಮ್ಮೇಳನದ ಮುಖ್ಯ ಸಂಚಾಲಕ, ಯುಎಇ ತುಳುವಾಸ್ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ವ್ಯವಸ್ಥಾಪಕ ಶೋಧನ್ ಪ್ರಸಾದ್ ಹಾಜರಿದ್ದರು.

ತುಳುನಾಡಿನ ವೈಭವವನ್ನು ತೆರೆದಿಟ್ಟ ಸಾಂಸ್ಕೃತಿಕ ಕಾರ್ಯಕ್ರಮ

ಸಮ್ಮೇಳನದ ಉದ್ಘಾಟನೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವಂತೂ ದುಬೈಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

ಒಂದಾ ಎರಡಾ …ಬಗೆ ಬಗೆಯ ನೃತ್ಯ ರೂಪಕ, ತುಳು ಮಣ್ಣಿನ ಕಂಪನ್ನು ಬಿತ್ತುವ ಜಾನಪದ ನೃತ್ಯ, ಹುಲಿ ವೇಷ, ಕಂಗೀಲು ನೃತ್ಯ, ಸರ್ವ ಧರ್ಮಗಳ ಸಮನ್ವಯತೆಯನ್ನು ಸಾರುವ ರೂಪಕಗಳು ನೆರೆದವರ ಮನ ತಣಿಸುವಂತೆ ಮಾಡಿತು. ನೋಡುಗರು ಶಿಳ್ಳೆ, ಚಪಾಳೆಯ ಮೂಲಕ ಕಲಾವಿದರನ್ನು ಹುರಿದುಂಬಿಸಿದರು.

ತುಳುನಾಡ ಪಿಲಿನಲಿಕೆ ತುಳುವರನ್ನು ಹೆಜ್ಜೆ ಹಾಕುವಂತೆ ಮಾಡಿದರೆ, ಬಲೇ ತೆಲಿಪಾಲೆ ಕಾರ್ಯಕ್ರಮದ ಪ್ರಶಂಸಾ ಹಾಗು ಉಮೇಶ್ ಮಿಜಾರು ತಂಡದವರ ಕಾಮಿಡಿ ಷೋ ಜನರನ್ನು ಸಮ್ಮೇಲೇನ ಬಿಟ್ಟು ಕದಡದಂತೆ ಮಾಡಿತು.

ಗಲ್ಫ್‌ ರಾಷ್ಟ್ರದ 6 ತಂಡಗಳಿಂದ ಗುಂಪು ಜನಪದ ನಲಿಕೆ ಪಂಥ(ಸ್ಪರ್ಧೆ) ನಡೆಯಿತು. ತುಳುನಾಡ ಪರ್ಬೊಲು ನೃತ್ಯರೂಪಕ, ಯಕ್ಷ ಮಿತ್ರರು ದುಬೈ ತಂಡದ ತುಳು ಯಕ್ಷ ಗಾನ ‘ಜಾಂಬವತಿ ಕಲ್ಯಾಣ’, ಸತೀಶ್‌ ಶೆಟ್ಟಿ ಪಟ್ಲ ಮತ್ತು ತಂಡದಿಂದ ಯಕ್ಷ ಗಾನ ನಾಟ್ಯ ವೈಭವ ಮನಮುಟ್ಟುವಂತಿತ್ತು. ಡಾ.ಬಿ.ಎ. ವಿವೇಕ್‌ ರೈ ಅಧ್ಯಕ್ಷ ತೆಯಲ್ಲಿ ತುಳು ಜಾನಪದ ಆಚರಣೆ ಗೋಷ್ಠಿ ನಡೆಯಿತು.

ಮೊದಲ ದಿನದ ಸಮ್ಮೇಳನದಲ್ಲಿ ಪುರುಷರು ಬಿಳಿ ಪಂಚೆ ಮತ್ತು ಬಿಳಿ ಶರ್ಟ್‌ ಧರಿಸಿದರೆ, ಮಹಿಳೆಯರು ಜರಿ ಸೀರೆಯಲ್ಲಿ ಮಿಂಚಿದರು. ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಮುಟ್ಟಾಳೆ ತೊಡಿಸಿ ಸ್ವಾಗತಿಸಲಾಯಿತು. ಸಮ್ಮೇಳನದಲ್ಲಿ ತುಳುವರ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಭಾಸ್ಕರ್ ರೈ ಕುಕ್ಕವಳ್ಳಿ, ಕದ್ರಿ ನವನೀತ್ ಶೆಟ್ಟಿ, ಆರ್‌ಜೆ ಸಾಯಿಹೀಲ್ ರೈ, ಆರ್‌ಜೆ ಪ್ರಿಯಾ ಹರೀಶ್ ಶೆಟ್ಟಿ, ನವೀನ್ ಶೆಟ್ಟಿ ಯೆಡ್ಮಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Comments are closed.