ಗಲ್ಫ್

“ವಿಶ್ವ ತುಳು ಸಮ್ಮೇಳನ”ಕ್ಕೆ ಇಂದು ದುಬೈಯಲ್ಲಿ ಚಾಲನೆ; ಅದ್ದೂರಿ ಸಮಾರಂಭಕ್ಕೆ ಕ್ಷಣಗಣನೆ ಆರಂಭ

Pinterest LinkedIn Tumblr

ದುಬೈ: ಸಾಗರೋತ್ತರ ತುಳುವರು, ಅಖಿಲ ಭಾರತ ತುಳು ಒಕ್ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಶುಕ್ರವಾರ(ನಾಳೆ) ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ “ವಿಶ್ವ ತುಳು ಸಮ್ಮೇಳನ” ನಡೆಯಲಿದೆ.

ಸಮ್ಮೇಳನದಲ್ಲಿ ಕೊಲ್ಲಿ ರಾಷ್ಟ್ರದ ಸಮಸ್ತ ತುಳುವರನ್ನು ಒಗ್ಗೂಡಿಸಲಾಗುವುದು. ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ನೆನಪಿಸುವ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ನಡೆಯಲಿದೆ. ವಿದೇಶದ ನಾನಾ ತುಳು ಸಂಘಟನೆಗಳಿಗೆ ಸಾಂಸ್ಕೃತಿಕ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಮಂಥನ ಯಕ್ಷಗಾನ, ನಾಟಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಪಂಚದಾದ್ಯಂತ ಇರುವ ನಾನಾ ತುಳು ಸಂಘಟನೆಗಳನ್ನು ಒಂದೇ ಸೂರಿನಡಿ ಸೇರಿಸಿ ಸಮ್ಮೇಳನ ನಡೆಸಲಾಗುತ್ತಿದೆ.

ಈಗಾಗಲೇ ದುಬೈಗೆ ಆಗಮಿಸಿರುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ಎರಡು ದಿನಗಳ ಸಮ್ಮೇಳನಕ್ಕೆ ನಾಳೆ ಚಾಲನೆ ನೀಡಲಿದ್ದಾರೆ. ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ.ಆರ್ ಶೆಟ್ಟಿ ಘನಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಈ ವಿಶ್ವ ತುಳು ಸಮ್ಮೇಳನದ ಎರಡು ದಿನಗಳಲ್ಲಿ ವಿಶ್ವದಾದ್ಯಂತದ ತುಳುವರು ಭಾಗವಹಿಸುವರು. ಸಮ್ಮೇಳನದಲ್ಲಿ ತುಳು ರಂಗಭೂಮಿ ಚಲನಚಿತ್ರ ಗೋಷ್ಠಿ, ತುಳು ಸಾಹಿತ್ಯ, ಮಾಧ್ಯಮ, ಕವಿ ಹಾಸ್ಯ ಗೋಷ್ಠಿಗಳು ನಡೆಯಲಿವೆ.

ಪರಶುರಾಮನ ಸೃಷ್ಠಿಯ ತುಳುನಾಡು ಹೆಸರಾಂತ ತವರೂರ ಕರಾವಳಿಯ ವಿವಿಧ ಕಲಾ ತಂಡಗಳ ಸುಮಾರು 200ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡು ಸಾಂಸ್ಕೃತಿಕ ತುಳು ವೈವಭವನ್ನು ನಡೆಸಲಿವೆ. ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಅತ್ತಾವರ `ತುಳುನಾಡ ಪರ್ಬೊಲು’ ನೃತ್ಯ ರೂಪಕ, ಯು‌ಎ‌ಇ ತುಳುವ ಬಳಗವು `ಪಿಲಿನಲಿಕೆ’, ಯು‌ಎ‌ಇ ತುಳುವ ಇದರ ಯಕ್ಷಮಿತ್ರ ಮಂಡಳಿ `ತುಳು ಯಕ್ಷಗಾನ’, ಪಟ್ಲ ಸತೀಶ್ ಶೆಟ್ಟಿ ಬಳಗವು `ಯಕ್ಷನಾಟ್ಯ-ಗಾನ ವೈಭವ’, ಮಂಗಳೂರು ತಂಡವು ತಾಳಮದ್ದಳೆ, ಸನಾತನ ನಾಟ್ಯಾಲಯವು `ಸತ್ಯನಾಪುರತ ಸಿರಿ’ ತುಳು ನೃತ್ಯ ರೂಪಕ, ನಾಟ್ಯನಿಕೇತನ ಉಳ್ಳಾಲ ತಂಡವು `ಏಳ್ವೆರ್ ದೈವೆರ್’ ತುಳುನಾಟ್ಯ ರೂಪಕ, ಗಮ್ಮತ್ ಕಲಾವಿದರು ದುಬೈ ತಂಡವು `ತುಳು ಹಾಸ್ಯ ಪ್ರಹಸನ’, ಡಾ| ರಾಜೇಶ್ ಆಳ್ವ ಬದಿಯಡ್ಕ ತಂಡವು `ಪಾಡ್ದನೆ ಮೇಳ ಬೊಕ್ಕ ಮಾಂಕಾಳಿ ನಲಿಕೆ’, ಪ್ರಶಂಸಾ ಕಾಪು ಬಳಗವು `ಬಲೆ ತೆಲಿಪಾಲೆ’, ಉಮೇಶ್ ಮಿಜಾರ್ ತಂಡವು `ಬಲೆ ತೆಲಿಪಾಲೆ’, ಯು‌ಎ‌ಇ ತುಳುವೆರ್ ತಂಡ `ತುಳು ರಸಮಂಜರಿ’ ಸೇರಿದಂತೆ ತಾಳಮದ್ದಲೆ, ಯಕ್ಷನಾಟ್ಯ ವೈಭವ, ಭೂತರಾಧನೆ, ತುಳು, ರಸಮಂಜರಿ, ಇತ್ಯಾದಿ ತುಳುನಾಡ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

ಅಬುಧಾಬಿ ಶಾರ್ಜಾ, ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿನ ವಿವಿಧ ಘಟಕಗಳು ತುಳು ಜಾನಪದ ನೃತ್ಯ ಮತ್ತು ತುಳು ಸಾಂಸ್ಕೃತಿಕ ವಸ್ತು ಪ್ರದರ್ಶಿಸಲಿದ್ದು ಇದು ಸಮ್ಮೇಳನದ ಕೇಂದ್ರ ಬಿಂದುವಾಗಲಿದೆ. ದೈವಾರಾಧನೆ, ಭೂತಾರಾಧನೆ, ಯಕ್ಷಗಾನ, ಹಾಸ್ಯ, ಚುಟುಕು, ಕವನ, ತುಳುರಂಗ ಭೂಮಿ, ತುಳು ಚಲನಚಿತ್ರ, ಆನಿವಾಸಿ ತುಳುವರು, ಪರದೇಶದ ತುಳುವರ ಗೋಷ್ಠಿಗಳೂ ನಡೆಯಲಿವೆ. ದುಬಾಯಿಯಲ್ಲಿನ ದೇವೇಶ್ ಆಳ್ವ ಇವರ ನೇತೃತ್ವದಲ್ಲಿ ಬಗೆಬಗೆಯ ತಿಂಡಿ ತಿಸಿಸುಗಳನ್ನು ಉಣಬಡಿಸಲಿದ್ದಾರೆ.

ತುಳುನಾಡು, ತುಳುವರ ಸಂಸ್ಕೃತಿ, ಸಮೃದ್ಧಿಯ ಸಂಕೇತ. ತುಳುವರು‌ಎಲ್ಲೇ ನೆಲೆಯಾದರೂ ತುಳುನಾಡ ಮಣ್ಣಿನ ಸುವಾಸನೆ, ಬಾಂಧವ್ಯವನ್ನು ಬಿಟ್ಟಿರಲಾರರು. ಅಂದರೆ ಈ ತೌಳವ ನೆಲದ ವೈಶಿಷ್ಟ್ಯವೇ ಅಂತಹದ್ದು. ಈ ಸಮ್ಮೇಳನದಲ್ಲಿ ಸುಮಾರು 4000 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ತಿಳಿಸಿದ್ದಾರೆ.

Comments are closed.