ಮಸ್ಕತ್: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳನ್ನು ಏಕಾಂಗಿಯಾಗಿಸುವ ಯತ್ನಗಳಿಗೆ ಪರಸ್ಪರ ಕೈಜೋಡಿಸಲು ಭಾರತ ಮತ್ತು ಒಮಾನ್ ನಿರ್ಧರಿಸಿವೆ.
ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವು ಭಯೋತ್ಪಾದಕ ಗುಂಪು ಮತ್ತು ಸರ್ಕಾರಗಳಿಗೆ ಕಡಿವಾಣ ಹಾಕಲು ಒಗ್ಗೂಡಿ ಹೋರಾಟ ನಡೆಸಲು ಉಭಯ ರಾಷ್ಟ್ರಗಳು ಪಣ ತೊಟ್ಟಿವೆ.
ಭಯೋತ್ಪಾದನೆ ವಿರುದ್ಧ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಹೋರಾಟ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಒಮಾನ್ ಸುಲ್ತಾನ ಖಾಬೂಸ್ ಬಿನ್ ಸಯಿದ್ ಅಲ್ ಸಯಿದ್ ಒಪ್ಪಿಗೆ ಸೂಚಿಸಿದರು. ಪ್ರಾದೇಶಿಕ ಸ್ಥಿರತೆ, ಭದ್ರತೆ, ಶಾಂತಿ ಕಾಪಾಡಲು ಇದು ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ–ಒಮಾನ್ 8 ಒಪ್ಪಂದ
ಬಂಡವಾಳ ಹೂಡಿಕೆ, ಪ್ರವಾಸೋದ್ಯಮ, ಆರೋಗ್ಯ ಮತ್ತು ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಒಮಾನ್ ಸೋಮವಾರ ಒಟ್ಟು ಎಂಟು ಒಪ್ಪಂದಗಳಿಗೆ ಸಹಿ ಹಾಕಿವೆ.
ವಾಣಿಜ್ಯ ವಹಿವಾಟು, ಇಂಧನ, ಭದ್ರತೆ, ಆಹಾರ ಸುರಕ್ಷತೆ ಮತ್ತು ಪ್ರಾದೇಶಿಕ ವಿಷಯ ಈ ಒಪ್ಪಂದದಲ್ಲಿ ಸೇರಿವೆ.
ದುಬೈನಿಂದ ಮಸ್ಕತ್ಗೆ ಬಂದಿಳಿದ ಮೋದಿ, ಒಮಾನ್ ಸುಲ್ತಾನ ಖಾಬೂಸ್ ಬಿನ್ ಸಯಿದ್ ಅಲ್ ಸಯಿದ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ರಾಜತಾಂತ್ರಿಕ ಅಧಿಕಾರಿಗಳು, ವಿಶೇಷ ಸೇವೆಯ ಮೇಲೆ ನಿಯೋಜಿತರಾದ ಅಧಿಕಾರಿಗಳಿಗೆ ವೀಸಾ ವಿನಾಯಿತಿ, ನಾಗರಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರಸ್ಪರ ಕಾನೂನು ಸಹಕಾರ ಕುರಿತ ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಲಾಯಿತು.
ಭಾರತ–ಒಮಾನ್ ವಾಣಿಜ್ಯ ಸಭೆಯಲ್ಲಿ ಕೊಲ್ಲಿ ರಾಷ್ಟ್ರ ಮತ್ತು ಪಶ್ಚಿಮ ಏಷ್ಯಾದ ಉದ್ಯಮಿಗಳ ಜತೆ ಸಂವಾದ ನಡೆಸಿದ ಪ್ರಧಾನಿ, ಭಾರತದಲ್ಲಿ ಹೂಡಿಕೆಗೆ ಆಹ್ವಾನ ನೀಡಿದರು.
*
ಒಮಾನ್ ಬೆಳವಣಿಗೆಯಲ್ಲಿ ಭಾರತೀಯರ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ಕೊಡುಗೆ ಇದೆ.
-ಖಾಬೂಸ್, ಒಮಾನ್ ಸುಲ್ತಾನ
*
ರಾಜಕೀಯ ಸ್ಥಿತ್ಯಂತರಗಳ ನಡುವೆಯೂ ಕೊಲ್ಲಿ ರಾಷ್ಟ್ರಗಳ ಜತೆ ಭಾರತದ ಸ್ನೇಹದಲ್ಲಿ ಬದಲಾವಣೆಯಾಗಿಲ್ಲ. ಆ ರಾಷ್ಟ್ರಗಳ ಜತೆ ಬಾಂಧವ್ಯ ಗಟ್ಟಿಗೊಳ್ಳುತ್ತಿದೆ .
-ನರೇಂದ್ರ ಮೋದಿ, ಪ್ರಧಾನಿ