ಗಲ್ಫ್

‘ಬಾಂಬೆ ಗ್ರೂಪ್ ರಕ್ತ’ ದಾನ ಮಾಡಲು ಕತಾರ್‍‍ನಿಂದ ಕುವೈತ್‍ಗೆ ಪ್ರಯಾಣ ಮಾಡಿ ಗರ್ಭಿಣಿಯ ಪ್ರಾಣ ಉಳಿಸಿದ ಯುವಕ

Pinterest LinkedIn Tumblr

ದೋಹಾ: ಕತಾರ್ ನಿಂದ ಕುವೈತ್‍ಗೆ ಭಾರತೀಯನೊಬ್ಬ ಪ್ರಯಾಣ ಮಾಡಿ ಉಡುಪಿ ಮೂಲದ ಗರ್ಭಿಣಿಯೊಬ್ಬರಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಕತಾರ್ ನಲ್ಲಿ ಒಂದು ಹೈಪರ್ ಮಾರ್ಕೆಟ್‍ನಲ್ಲಿ ಕೆಲಸ ಮಾಡುತ್ತಿದ್ದ ನಿಧೀಶ್ ರಘುನಾಥ್ ಈ ವಿಶೇಷ ಸಾಧನೆ ಮಾಡಿದ ವ್ಯಕ್ತಿ. ಇವರು ಗರ್ಭಿಣಿಯೊಬ್ಬರ ಚಿಕಿತ್ಸೆಗಾಗಿ ಕತಾರ್ ನಿಂದ ಕುವೈತ್‍ಗೆ ಆಗಮಿಸಿ ರಕ್ತ ನೀಡಿ ತಾಯಿ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

ಏನಿದು ಘಟನೆ?
ಗರ್ಭಿಣಿ ವಿನೀತಾ ಕುವೈತ್‍ನ ಅದಾನ್ ಆಸ್ಪತ್ರೆ ದಾಖಲಾಗಿದ್ದರು. ಬಾಂಬೆ ಗ್ರೂಪ್ ರಕ್ತ ಹೊಂದಿದ್ದ ಅವರಿಗೆ ಸಿಸೇರಿಯನ್ ಆಪರೇಷನ್ ಮಾಡಬೇಕಾಗಿತ್ತು. ಭಾರತದಲ್ಲಿ 7,600 ಜನರಲ್ಲಿ ಒಬ್ಬರಲ್ಲಿ ಮಾತ್ರ ಈ ರಕ್ತ ಇರುವ ಕಾರಣ ಬಾಂಬೆ ಗ್ರೂಪ್ ರಕ್ತಕ್ಕೆ ಹುಡುಕಾಟ ಆರಂಭವಾಯಿತು.

ಕುವೈತ್‍ನಲ್ಲಿ ಈ ಗುಂಪಿನ ರಕ್ತದ ದಾನಿಗಳಿಗಾಗಿ ಹುಡುಕಾಟ ಆರಂಭವಾಗಿ ಆದರೆ ಎಷ್ಟು ಹುಡುಕಿದರೂ ದಾನಿಗಳು ಸಿಗಲಿಲ್ಲ. ನಂತರ ಕೂಡಲೇ ಕೇರಳ ಮೂಲದ ‘ಬ್ಲಡ್ ಡೋನರ್ಸ್ ಫೋರಮ್, ಕೇರಳ-ಕುವೈತ್ ಚಾಪ್ಟರ್’ ಎಂಬ ರಕ್ತದಾನಿಗಳ ಸಂಸ್ಥೆಯಲ್ಲಿ ಆನ್‍ಲೈನ್ ಮೂಲಕ ಹುಡುಕಾಟ ಆರಂಭಿಸಲಾಯಿತು.

ತುರ್ತು ರಕ್ತ ಬೇಕಾಗಿರುವ ವಿಚಾರವನ್ನು ಸಾಮಾಜಿಕ ತಾಣದಲ್ಲಿಯೂ ಶೇರ್ ಮಾಡಲಾಯಿತು. ಈ ವಿಚಾರ ಕತಾರ್ ನಲ್ಲಿದ್ದ ಕೇರಳ ಮೂಲದ ನಿಧೀಶ್ ರಘುನಾಥ್ ಅವರಿಗೂ ತಲುಪಿತು. ನನ್ನದು ಅದೇ ಗುಂಪಿನ ರಕ್ತ ಎಂದು ತಿಳಿದಿದ್ದ ನಿಧೀಶ್, ಕೂಡಲೇ ರಕ್ತ ನೀಡಲು ಮುಂದಾಗಿ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಕುವೈತ್‍ಗೆ ತೆರಳಲು ಅನುಮತಿ ಪಡೆದರು. ಅಷ್ಟೇ ಅಲ್ಲದೇ ತುರ್ತಾಗಿ ಕುವೈತ್‍ಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಹೀಗಾಗಿ ವೀಸಾ ಪ್ರಕ್ರಿಯೆ ಮುಗಿದು ಶುಕ್ರವಾರ ನಿಧೀಶ್ ಕುವೈತ್ ತಲುಪಿದರು.

ನಿಧೀಶ್ ರಕ್ತ ಪರೀಕ್ಷೆ ಮಾಡಿ ನಂತರ ಜಾಬಿರಿಯಾ ರಕ್ತ ನಿಧಿಯಲ್ಲಿ ರಕ್ತದಾನ ಮಾಡಲಾಯಿತು. ಅಮ್ಮ ಮತ್ತು ಮಗುವಿನ ಪ್ರಾಣ ರಕ್ಷಿಸಿದ ನಿಧೀಶ್‍ಗೆ ಕುವೈತ್‍ನಲ್ಲಿರುವ ಅನಿವಾಸಿ ಭಾರತೀಯರು ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕುವೈತ್‍ನ ಆರೋಗ್ಯ ವಿಭಾಗವೂ ಅವರನ್ನು ಸನ್ಮಾನಿಸಿದೆ.

ಏನಿದು ‘ಬಾಂಬೆ ಗ್ರೂಪ್’ ರಕ್ತ?
ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಟಿಜನ್, ಬಿ ಗುಂಪಿನಲ್ಲಿ ಬಿ-ಆ್ಯಂಟಿಜನ್, ಎಬಿಯಲ್ಲಿ ಎಬಿ-ಆ್ಯಂಟಿಜನ್ ಮತ್ತು ಒ ಗುಂಪಿನಲ್ಲಿ ಎಚ್ ಆ್ಯಂಟಿಜನ್ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್-ಆ್ಯಂಟಿಜನ್ ಅಂಶ ಇರುವುದಿಲ್ಲವೋ ಅಂತಹವರನ್ನು ಬಾಂಬೆ ಗುಂಪಿನ ರಕ್ತದವರು ಎಂದು ಗುರುತಿಸಲಾಗುತ್ತದೆ.

ಈ ರಕ್ತದ ಮಾದರಿ ಮೊದಲು ಮುಂಬೈನಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮುಂಬಯಿನ ಹಳೆಯ ಹೆಸರಾದ ಬಾಂಬೆ ಹೆಸರಿನೊಂದಿಗೆ ‘ಬಾಂಬೆ ಬ್ಲಡ್’ ಎಂದು ಕರೆಯಲಾಗುತ್ತದೆ.

Comments are closed.