ಭಾರತೀಯ ಸಾಮಾಜಿಕ ವೇದಿಕೆ -ಕರ್ನಾಟಕ ವಿಭಾಗದ ವತಿಯಿಂದ ಕರ್ನಾಟಕದ ರಾಜ್ಯೋತ್ಸವ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ತಮ್ಮ ನಾಡಿನಿಂದ ದೂರವಿರುವ ಕನ್ನಡಿಗರೆಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕರ್ನಾಟಕ ಉತ್ಸವವನ್ನು ಇಲ್ಲಿನ ಅಲ್ ಫಲಾಜ್ ಸಭಾಂಗಣದಲ್ಲಿ ಆಚರಿಸುವುದೆಂದು ನಿರ್ಧರಿಸಲಾಗಿದೆ. ಅದಲ್ಲದೆ ಕರ್ನಾಟಕದ ಹೆಸರಾಂತ ವ್ಯಕ್ತಿಯೋರ್ವರನ್ನು ಮಸ್ಕತ್ ಕರ್ನಾಟಕದ ಸಂಘದ ಪರವಾಗಿ ಸನ್ಮಾನಿಸುವ ಹೆಗ್ಗಳಿಕೆಯೂ ಕೂಡ ಕರ್ನಾಟಕದ ಸಂಘದ ಪಾಲಾಗಲಿದೆ
ಕನ್ನಡ ರಾಜ್ಯೋತ್ಸವ ಎಲ್ಲ ಕನ್ನಡಿಗರಿಗೂ ಒಂದು ಸಂತಸದ ಸಂದರ್ಭ. ತಮ್ಮ ದೇಶ ಹಾಗೂ ರಾಜ್ಯದಿಂದ ದೂರದಲ್ಲಿರುವ ಕನ್ನಡಿಗರೆಲ್ಲರಿಗೂ ಇದು ತಮ್ಮ ನಾಡು ಕರ್ನಾಟಕ ರಾಜ್ಯ ರೂಪುಗೊಂಡ ಸಂತಸ ಹಾಗೂ ತಮ್ಮ ಮಕ್ಕಳಿಗೆ ನಮ್ಮ ನಾಡಿನ ಹಿರಿಮೆಯನ್ನು ತಿಳಿಸುವ ಸದವಕಾಶ.
“ಎಲ್ಲಾದರೂ ಇರು ಎಂತಾದರೂ ಎಂತಾದರೂ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ” ಎನ್ನುವ ಕವಿವಾಣಿಯಂತೆ ಮಸ್ಕಿತ್ತಿನಲ್ಲಿದ್ದೂ ಇಲ್ಲಿನ ಕನ್ನಡಿಗರಿಗೆ ಕನ್ನಡಮಯ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮಸ್ಕತ್ ಕರ್ನಾಟಕ ಸಂಘವು 61ನೆಯ ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ‘ಕರ್ನಾಟಕ ಉತ್ಸವ – 2017’ ಕಾರ್ಯಕ್ರಮವನ್ನು ಇದೇ ನವೆಂಬರ್ ತಿಂಗಳ 24ರಂದು ಮಸ್ಕತ್ತಿನ ಅಲ್ ಫಲಾಜ್ ಸಭಾಂಗಣದಲ್ಲಿ ಮಸ್ಕತ್ ಕನ್ನಡಿಗರಿಗಾಗಿ ಆಯೋಜಿಸಿದೆ.
ನಾಡಿನ ಹೆಸರಾಂತ ಬಹುಮುಖ ಪ್ರತಿಭೆಯ ಹಾಸ್ಯ ಕಲಾವಿದ, ಶ್ರೀ ಕೃಷ್ಣೇಗೌಡ, ಶ್ರೀ ನಾಗರಾಜ ಕೋಟೆ, ಸುಗಮ ಸಂಗೀತ ಸಾಮ್ರಾಜ್ನಿ ಎನಿಸಿದ ಶ್ರೀಮತಿ ರತ್ನಮಾಲ ಪ್ರಕಾಶ, ತಮ್ಮ ಇಂಪಾದ ಗಾಯನದಿಂದ ದೇಶ ವಿದೇಶಗಳ ಕನ್ನಡಿಗರ ಮನಗೆದ್ದ ಸೀಮಾ ರಾಯ್ಕರ್ ಹಾಗೂ ಶ್ರೀ ಪಂಚಮ ಹಳಿಬಂಡಿ, ಕೀ ಬೋರ್ಡ್ ವಾದಕ ಶ್ರೀ ಕೃಷ್ಣ ಉಡುಪ, ತಬಲಾ ವಾದಕ ಮಧುಸೂದನ್ ಮತ್ತು ಪ್ರದ್ಯುಮ್ನ ಸೊರಬ- ಇವರೆಲ್ಲ ಕರ್ನಾಟಕ ಉತ್ಸವವನ್ನು ಆಚರಿಸಲು ಮಸ್ಕತ್ತಿಗೆ ಕರ್ನಾಟಕದಿಂದ ಆಗಮಿಸುವ ಕಲಾವಿದರು.
ಹಾಸ್ಯದ ಮತ್ತು ಸಂಗೀತದ ರಸದೌತಣ ಮಸ್ಕತ್ ಕನ್ನಡಿಗರಿಗಾಗಿ ಕಾಯುತ್ತಿದೆ. ಈ ಕಾರ್ಯಕ್ರಮದ ಮುಖಾಂತರ ಕನ್ನಡ ರಾಜ್ಯೋತ್ಸವ ವನ್ನು ಅದ್ದೂರಿಯಾಗಿ ಆಚರಿಸಿ ಮಸ್ಕತ್ತಿನಲ್ಲಿ ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆಯಲು ಮಸ್ಕತ್ ಕರ್ನಾಟಕ ಸಂಘ ಯಾವಾಗಲೂ ಶ್ರಮಿಸಲಿದೆ ಎನ್ನುವುದು ಇಲ್ಲಿನ ಎಲ್ಲ ಕನ್ನಡಿಗರ ಆಶಯ.