ಜನಪ್ರಿಯ ನಟ ,ನಿರ್ದೇಶಕ ,ನಿರ್ಮಾಪಕ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ವಿಶೇಷ ಆಕರ್ಷಣೆ
ಬಹರೈನ್; ಕಳೆದ ೩೯ ವರುಷಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡದ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಮುಂಚೂಣಿಯಲ್ಲಿರುವ ದ್ವೀಪದ ಕನ್ನಡಿಗರ ಮಾತೃ ಸಂಸ್ಥೆಯಾಗಿರುವ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಇದೀಗ ರಾಜ್ಯೋತ್ಸವದ ಅಂಗವಾಗಿ ಬ್ರಹತ್ ಕನ್ನಡ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕಾಗಿಯೇ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಹೊರಾಂಗಣ ಕ್ರೀಡಾಂಗಣದಲ್ಲಿ ಭವ್ಯವಾದ ವೇದಿಕೆ ಸಜ್ಜಾಗುತ್ತಿದೆ .
೩೯ ವರುಷಗಳ ಶ್ರೀಮಂತ ಇತಿಹಾಸವಿರುವ ಕನ್ನಡ ಸಂಘ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದ್ದು ನಾಡಿನ ಅದೆಷ್ಟೋ ಜನಪ್ರಿಯ ಕಲಾವಿದರುಗಳು ,ಸಾಧಕರು ,ಧಾರ್ಮಿಕ ಮುಖಂಡರುಗಳು ,ರಾಜಕೀಯ ಮುತ್ಸದ್ದಿಗಳು ಸಂಘಕ್ಕೆ ಭೇಟಿ ನೀಡಿ ,ಕಲಾ ಪ್ರದರ್ಶನ ನೀಡಿ ಗೌರವಿಸಲ್ಪಟ್ಟಿದ್ದಾರೆ . ಕನ್ನಡ ಕಲೆ ,ಭಾಷೆ ,ಸಂಸ್ಕ್ರತಿಗೆ ವಿಶೇಷ ಆದ್ಯತೆ ನೀಡುತ್ತಿರುವ ಸಂಘ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪ್ರಥಮವಾಗಿ ಸೀಮೋಲ್ಲಂಘನ ಮಾಡಿಸಿದ ಖ್ಯಾತಿಗೂ ಪಾತ್ರವಾಗಿದೆ . ಇದೀಗ ಜರುಗಲಿರುವ “ಕನ್ನಡ ವೈಭವ ” ಸಾಂಸ್ಕ್ರತಿಕ ಕಾರ್ಯಕ್ರಮವು ಸಂಘದ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲಾಗಲಿದ್ದು ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಾರಥ್ಯದಲ್ಲಿ ಇದಾಗಲೇ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದ್ದಾರೆ .
ಕನ್ನಡ ಚಿತ್ರರಂಗದ ಜೀವಂತ ದಂತಕಥೆಯಾಗಿರುವ “ಪ್ರೇಮಲೋಕ ” ಖ್ಯಾತಿಯ ನಟ ,ನಿರ್ದೇಶಕ ,ನಿರ್ಮಾಪಕ ವಿ .ರವಿಚಂದ್ರನ್ ರವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ . “ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ” ಯ ಉಪನಿರ್ದೇಶಕರಾದ ಹರಿಕುಮಾರ್ ನಾಯ್ಕ್,ಉದಯವಾಣಿ ದಿನಪತ್ರಿಕೆಯ ಮಂಗಳೂರು ಬ್ಯುರೋದ ಮುಖ್ಯಸ್ಥ ,ಹಿರಿಯ ಪತ್ರಕರ್ತ ,ನಿರೂಪಕ ,ಲೇಖಕ ಮನೋಹರ ಪ್ರಸಾದ್ ರವರು ವಿಶೇಷ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು . ಗುರು ವಿದ್ವಾನ್ ನಾಗಭೂಷಣ್ ರವರ ನೇತೃತ್ವದಲ್ಲಿ ಬೆಂಗಳೂರಿನ ಖ್ಯಾತ ನ್ರತ್ಯ ತಂಡ ” ಆರಾಧನಾ ಸ್ಕೂಲ್ ಒಫ್ ಡಾನ್ಸ್ ” ನ ೧೬ ಪ್ರತಿಭಾವಂತ ನ್ರತ್ಯಪಟುಗಳು ಕಾರ್ಯಕ್ರಮದಲ್ಲಿ ವೈವಿಧ್ಯಮವಾದ ನ್ರತ್ಯಗಳು ,ನ್ರತ್ಯರೂಪಕಗಳನ್ನು ಪ್ರದರ್ಶಸಿ ದ್ವೀಪದ ಕನ್ನಡಿಗರನ್ನು ರಂಜಿಸಲಿರುವರು . ಸಂಘದ ಸದಸ್ಯರಿಂದ ಹಾಗು ಪುಟಾಣಿಗಳಿಂದ ವಿವಿಧ ನ್ರತ್ಯ ಪ್ರದರ್ಶನಗಳು ಪ್ರದರ್ಶನಗೊಳ್ಳಲಿರುವುದು . ಕನ್ನಡ ಸಂಘದ ಸಾಧನೆ ಹಾಗು ಚಟುವಟಿಕೆಗಳ ಕೈಗನ್ನಡಿಯಾಗಿರುವ ವಾರ್ಷಿಕ ಸ್ಮರಣಿಕೆ ” ಕಾವೇರಿ ” ಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು .
ಕಾರ್ಯಕ್ರಮವು ಇದೆ ನವೆಂಬರ್ ತಿಂಗಳ 25ನೇ ತಾರೀಖಿನ ಶುಕ್ರವಾರ ಸಂಜೆ 5 ಘಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಲಿದ್ದು ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕನ್ನಡಿಗರಿಗೂ ಮುಕ್ತ ಪ್ರವೇಶವಿದೆ . ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರನ್ನು ದೂರವಾಣಿ ಸಂಖ್ಯೆ 39147114ಮುಖೇನ ಸಂಪರ್ಕಿಸಬಹುದು .
ವರದಿ-ಕಮಲಾಕ್ಷ ಅಮೀನ್