ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: Ashok Belman-Uday H.K.Dubai
ಸಮಾಜ ಸೇವಕ ಜೋಸೆಫ್ ಮಥಿಯಸ್’ರಿಗೆ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಪ್ರದಾನ
ಶಾರ್ಜಾ: ‘ಶಾರ್ಜಾ ಕರ್ನಾಟಕ ಸಂಘದ ಆಶ್ರಯ’ದಲ್ಲಿ ನಡೆದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ ಮತ್ತು 14ನೇ ವಾರ್ಷಿಕೋತ್ಸವ ಹಾಗು ‘ಮಯೂರ ಪ್ರಶಸ್ತಿ’ ಪ್ರದಾನ ಸಮಾರಂಭಕ್ಕೆ ನೆರೆದಿದ್ದ ಸಾವಿರಾರು ಮಂದಿ ಕನ್ನಡಿಗರು ಸಾಕ್ಷಿಯಾದರು.
ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಯುಎಇಯ ಉದ್ಯಮಿ, ಸಮಾಜ ಸೇವಕ, ಗಾಯಕ, ಕನ್ನಡ ಭಾಷೆ, ಕಲೆ-ಸಂಸ್ಕೃತಿಗೆ ಕೊಡುಗೆ ನೀಡಿರುವ ಜೋಸೆಫ್ ಮಥಿಯಸ್’ರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ನೀಡಿ ಗೌರವಿಸಿದರು. ಈ ವೇಳೆ ಅವರ ಧರ್ಮ ಪತ್ನಿ, ಮಕ್ಕಳು ಕೂಡ ವೇದಿಕೆಯಲ್ಲಿದ್ದರು.
ಈ ವೇಳೆ ಮಾತನಾಡಿದ ಜೋಸೆಫ್ ಮಥಿಯಸ್, ನಾವು ಜಾತಿ-ಧರ್ಮದ ಎಲ್ಲೆಮೀರಿ ಕನ್ನಡ ಭಾಷೆಯನ್ನೂ ಉಳಿಸಿ-ಬೆಳೆಸಿದ್ದೇವೆ. ಜೊತೆ ಜೊತೆಯಾಗಿ ನಾವೆಲ್ಲಾ ಸೇರಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಜೋಸೆಫ್ ಮಥಿಯಸ್ ಅವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಗಣ್ಯರು ಕರೆತಂದರು.
ಪ್ರಶಸ್ತಿ ಪ್ರದಾನದ ವೇಳೆ ವೇದಿಕೆಯಲ್ಲಿ ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಖ್ಯಾತ ಗಾಯಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಫ್ರಾಂಕ್ ಫೆರ್ನಾಡೀಸ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವೊಕೇಟ್ ವೈ. ಎ.ರಹೀಮ್, ಮಾರ್ಕ್ ಡೆನ್ನಿಸ್ ಡಿಸೋಜ, ಮನೋಜ್ ಶೆಣೈ, ಹಾಜಿ ಅಬೂಬಕ್ಕರ್, ಎಂ.ಇ.ಮೂಳೂರು, ಪ್ರಭಾಕರ ಅಂಬಲತೆರೆ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್, ವಾಸ್ತು ತಜ್ಞ ಅಶೋಕ್ ಪುರೋಹಿತ್ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಕನ್ನಡ ಧ್ವಜವನ್ನು ಅರಳಿಸಿ ಚಾಲನೆ ನೀಡಿದರು. ನಂತರ ದೀಪ ಬೆಳಗಿಸಿ ಉದ್ಘಾಟಿಸಿದರು.ಇದಕ್ಕೂ ಮುನ್ನ ರಾಷ್ಟ್ರಗೀತೆ ಹಾಗು ನಾಡಗೀತೆ ಮತ್ತು ಯುಎಇಯ ರಾಷ್ಟ್ರಗೀತೆಯನ್ನು ಹಾಡಲಾಯಿತು.
‘ಕನ್ನಡಿಗವರ್ಲ್ಡ್’ ಪ್ರಾಯೋಜಕತ್ವದ ‘ಮಯೂರ ರಾಜ’ ಪ್ರಶಸ್ತಿ ಶಾಹಿದ್ ಶಹಬಾಜ್, ‘ಮಯೂರ ರಾಣಿ’ ಪ್ರಶಸ್ತಿ ಮಧುರ ವಿಶ್ವನಾಥ್ , ‘ಮಯೂರ ಕುಮಾರಿ’ ಪ್ರಶಸ್ತಿ ಸನ್ನಿಧಿ ವಿಶ್ವನಾಥ್ ಶೆಟ್ಟಿ ಮುಡಿಗೆ
ಕಾರ್ಯಕ್ರಮದಲ್ಲಿ ‘ಕನ್ನಡಿಗವರ್ಲ್ಡ್.ಕಾಮ್’ ಪ್ರಾಯೋಜಕತ್ವದಲ್ಲಿ ಯುಎಇ ಮಟ್ಟದ ಕನ್ನಡ ಚಲನಚಿತ್ರ ಗೀತಾ ಗಾಯನ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆ ನಡೆಯಿತು. ಪುರುಷರ ವಿಭಾಗದ “ಮಯೂರ ರಾಜ” ಪ್ರಶಸ್ತಿ ಶಾಹಿದ್ ಶಹಬಾಜ್ ಮಡಿಲಿಗೆ ಹೋದರೆ, ಮಹಿಳೆಯರ ವಿಭಾಗದ “ಮಯೂರ ರಾಣಿ” ಪ್ರಶಸ್ತಿ ಮಧುರ ವಿಶ್ವನಾಥ್ ಪಾಲಾಯಿತು. ‘ಮಯೂರ ಕುಮಾರಿ’ ಕಿರೀಟ ಪುಟ್ಟ ಬಾಲೆ ಸನ್ನಿಧಿ ವಿಶ್ವನಾಥ್ ಶೆಟ್ಟಿ ಮುಡಿಗೇರಿಸಿಕೊಂಡರು.
ಗೀತಾ ಗಾಯನ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆ, ಕಿರೀಟ-ಪೇಟವನ್ನು ತೊಡಿಸುವ ಮೂಲಕ ಅವರನ್ನು ಅಭಿನಂದಿಸಲಾಯಿತು. ಮೂರು ವಿಭಾಗದಲ್ಲಿ ಸಂಗೀತ ಸ್ಪರ್ಧೆ ನಡೆದಿದ್ದು, ಅಂತಿಮ ಹಂತದಲ್ಲಿ ತಲಾ ಮೂವರು ಸ್ಪರ್ಧಿಗಳು ತಮ್ಮ ಹಾಡುಗಾರಿಕೆಯನ್ನು ಪ್ರದರ್ಶಿಸಿದರು. ಸ್ಪರ್ಧಿಗಳ ಹಾಡಿಗೆ ಕರಾವಳಿ ಕರ್ನಾಟಕದ ಖ್ಯಾತ ಸಂಗೀತ ನಿರ್ದೇಶಕ ರಾಜ್ ಗೋಪಾಲ್ ಹಾಗು ಅವರ ತಂಡದವರು ಸಂಗೀತ ನೀಡಿದರು.
ಮಕ್ಕಳ ವಿಭಾಗದ-‘ಮಯೂರ ರಾಜ’- ‘ಮಯೂರ ಕುಮಾರಿ’
ಸನ್ನಿಧಿ ವಿಶ್ವನಾಥ್ ಶೆಟ್ಟಿ(ಪ್ರಥಮ)
ಸಿಂಧೂ ಸತೀಶ್ ಕಾಮತ್(ದ್ವಿತೀಯ)
ಅಮೋಘವರ್ಷ ಭಟ್(ತೃತೀಯ)
“ಮಯೂರ ರಾಣಿ” ಪ್ರಶಸ್ತಿಯ ಸ್ಪರ್ಧೆಯಲ್ಲಿ (16 ವಯಸ್ಸು ಮೆಲ್ಪಟ್ಟಿರುವ ಗಾಯಕಿಯರಿಗಾಗಿ)
ಮಧುರ ವಿಶ್ವನಾಥ್ (ಪ್ರಥಮ)
ಅಕ್ಷತಾ ರಾವ್ (ದ್ವಿತೀಯ)
ವೈಷ್ಣವಿ ಶೆಟ್ಟಿ(ತೃತೀಯ)
“ಮಯೂರ ರಾಜ”(16 ವಯಸ್ಸು ಮೆಲ್ಪಟ್ಟಿರುವ ಗಾಯಕರಿಗಾಗಿ)
ಶಾಹಿದ್ ಶಹಬಾಜ್(ಪ್ರಥಮ)
ಕೃಷ್ಣ ಪ್ರಸಾದ್(ದ್ವಿತೀಯ)
ರಾಘವೇಂದ್ರ ಪ್ರಭಾಕರ್(ತೃತೀಯ)
ಗೀತಾ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ವಿದುಷಿ ಸುಮಾ ನಾರಾಯಣ್, ಖ್ಯಾತ ಗಾಯಕಿಯರಾದ ಅನಿತಾ ಡಿಸೋಜ, ಮಾನಸ ಹೊಳ್ಳ ಹಾಗು ರಾಜ್ ಗೋಪಾಲ್ ಭಾಗವಹಿಸಿದ್ದರು.
ಮನಸಿಗೆ ಮುದ ನೀಡಿದ ಖ್ಯಾತ ಹಾಡುಗಾರರ ರಸಮಂಜರಿ
ಸುಮಧುರ ಗೀತೆಗಳ ಸಂಗೀತ ರಸಮಂಜರಿಯಲ್ಲಿ ಉದ್ಯಮದೊಂದಿಗೆ ಹಾಡುಗಾರಿಕೆಯನ್ನು ಮೈಗೂಡಿಸಿಕೊಂಡು, ಯು.ಎ.ಇ. ಸೇರಿದಂತೆ ಗಲ್ಫ್ ಹಾಗು ಕರಾವಳಿ ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ಗಾಯಕ, ಯುಎಇಯಲ್ಲಿ ಕಳೆದ ಎರಡು ಮೂರು ದಶಕಗಳಿಂದ “ಧೂಮ್ ದಮಾಕ” ಸಂಗೀತ-ಮನರಂಜನಾ ಕಾರ್ಯಕ್ರಮದ ನೀಡುತ್ತಿರುವ ಹರೀಶ್ ಶೇರಿಗಾರ್, ವಿಶ್ವದ ಹಲವು ದೇಶಗಳಲ್ಲಿ ತಮ್ಮ ಕಂಠಸಿರಿಯ ಮೂಲಕ ಪ್ರಸಿದ್ದಿಯನ್ನು ಗಳಿಸಿ, ಒಂಬತ್ತು ಭಾಷೆಗಳಲ್ಲಿ ಸುಶ್ರಾವ್ಯವಾಗಿ ಹಾಡುವ ಗಾಯಕಿ ಮಂಗಳೂರಿನ ಅನಿತಾ ಡಿಸೋಜಾ ಹಾಗೂ ಪ್ರಖ್ಯಾತ ಗಾಯಕಿ ಮಾನಸ ಹೊಳ್ಳ, ಹಿಂದಿ ಸಿನೆಮಾದ ಹಳೆಯ ಮೆಲೋಡಿ ಹಾಡನ್ನು ತನ್ನ ಇಂಪಾದ ಕಂಠದ ಮೂಲಕ ಹಾಡುವ ಗಾಯಕಿ ವಿಜಯ ಭಟ್, ಸಾಯಿ ಮಲ್ಲಿಕಾ, ರವಿ ಸಂತೋಷ್ ಅವರು ಹಾಡಿ ಪ್ರೇಕ್ಷಕರನ್ನು ಉಲ್ಲಾಸಭರಿತರನ್ನಾಗಿಸಿದರು. ಜೊತೆಗೆ ಮಂಗಳೂರಿನಿಂದ ಆಗಮಿಸಿದ ರಾಜ್ ಗೋಪಾಲ್ ಮತ್ತು ತಂಡದವರ ಸಂಗೀತ ಹಾಡುಗಳನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿತು.
ಕಾರ್ಯಕ್ರಮದ ಮಧ್ಯೆ ಮಕ್ಕಳಿಂದ ಸಿನೆಮಾ ನೃತ್ಯ, ಶಾಸ್ತ್ರೀಯ ನೃತ್ಯ, ಶಿವ ತಾಂಡವ ನೃತ್ಯ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು.
“ಮಾರ್ಚ್ 22” ಕನ್ನಡ ಸಿನೆಮಾದ ಕುರಿತು ಒಂದಿಷ್ಟು …
ಕಾರ್ಯಕ್ರಮದ ಮಧ್ಯೆ ACME ಮೂವೀಸ್ ಇಂಟರ್ನ್ಯಾಶನಲ್ ಲಾಂಛಾನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ದುಬೈಯ ಖ್ಯಾತ ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದ ಚೊಚ್ಚಲ ಕಾಣಿಕೆ “ಮಾರ್ಚ್ 22” ಕನ್ನಡ ಚಲನ ಚಿತ್ರದ ಕುರಿತು ಯುಎಇ ಕನ್ನಡಿಗರಿಗೆ ಕಿರುಪರಿಚಯ ಮಾಡಲಾಯಿತು.
‘ವಿಭಿನ್ನ ಚಿತ್ರಕತೆಯುಳ್ಳ “ಮಾರ್ಚ್ 22” ಕನ್ನಡ ಚಲನ ಚಿತ್ರ ಜಾತಿ-ಧರ್ಮದ ಎಲ್ಲೆಮೀರಿ ನಡೆಯುವಂತ ಘಟನೆಯನ್ನು ಆಧರಿಸಿದ್ದು, ಸಿನೆಮಾದಲ್ಲಿ ಕನ್ನಡ ಸಿನೆಮಾ ಲೋಕದ ನಟ ದಿಗ್ಗಜರಾದ ಅನಂತ್ ನಾಗ್, ಲಕ್ಷ್ಮಿ, ಜೈಜಗದೀಶ್, ಶರತ್ ಲೋಹಿತಾಶ್ವ, ವಿನಯ ಪ್ರಸಾದ್, ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಒಂದು ಉತ್ತಮ ಸಿನೆಮಾವಾಗಿ ಮೂಡಿಬರಲಿದೆ’ ಎಂದು ಹರೀಶ್ ಶೇರಿಗಾರ್ ತಮ್ಮ ಸಿನೆಮಾದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.
ಡಿ.9 ರಂದು ದುಬೈಯಲ್ಲಿ ನಡೆಯಲಿರುವ ‘ಹಂಸನಾದ’ ಕಾರ್ಯಕ್ರಮದ ಟಿಕೆಟ್ ಬಿಡುಗಡೆ
ಕಾರ್ಯಕ್ರಮದ ಮಧ್ಯೆ Desember 9 ರಂದು ದುಬೈಯ ಮಾಲ್ ಆಫ್ ಎಮಿರೇಟ್ಸ್’ನ ಸೆಂಟರ್ ಪಾಯಿಂಟ್ ಥಿಯೇಟರ್’ನಲ್ಲಿ ಕನ್ನಡ ಸಿನೆಮಾ ಲೋಕದ ಸಂಗೀತ ದಿಗ್ಗಜ ಹಂಸಲೇಖರವರ ‘ಹಂಸನಾದ’ ಸಂಗೀತ ಕಾರ್ಯಕ್ರಮದ ಟಿಕೇಟನ್ನು ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಖ್ಯಾತ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಬಿಡುಗಡೆಗೊಳಿಸಿದರು. ಈ ವೇಳೆ ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಉದ್ಯಮಿ ಫ್ರಾಂಕ್ ಫೆರ್ನಾಡೀಸ್, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವೊಕೇಟ್ ವೈ. ಎ. ರಹೀಮ್, ಮಾರ್ಕ್ ಡೆನ್ನಿಸ್ ಡಿಸೋಜ ಹಾಗು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್ ಮತ್ತು ‘ಹಂಸನಾದ’ ಸಂಗೀತ ಕಾರ್ಯಕ್ರಮದ ಆಯೋಜಕರ ತಂಡದ ಸದಸ್ಯರು ಹಾಜರಿದ್ದರು.
ಮನೋರಂಜನಾ ಕಾರ್ಯಕ್ರಮವನ್ನು ರೋಹಿಣಿ ಅನಂತ್ ನಿರೂಪಿಸಿದರೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಲೇಖಕ, ಕಲಾವಿದ ಗಣೇಶ್ ರೈ ಹಾಗು ಗೀತಾ ಗಾಯನ ಸ್ಪರ್ಧೆ ಹಾಗು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಖ್ಯಾತ ಮಿಮಿಕ್ರಿ ಕಲಾವಿದ ರವಿ ಸಂತೋಷ್ ಅವರು ತಮ್ಮ ಹಾಸ್ಯಭರಿತ ಮಾತುಗಳ ಮೂಲಕ ನಡೆಸಿಕೊಟ್ಟರು.