ಗಲ್ಫ್

ದುಬಾಯಿಯಲ್ಲಿ “ಬಲೆ ತೆಲಿಪಾಲೆ” ಹಾಸ್ಯ ಸಿಂಚನಕ್ಕೆ ಕ್ಷಣ ಗಣನೆ…..

Pinterest LinkedIn Tumblr

Bale Thelipaale_A4 flyer-with sponsors

ದುಬಾಯಿ ಅಲ್ ನಾಸರ್ ಲೀಸರ್ಲ್ಯಾಂಡ್ ಒಳಾಂಗಣ ಕ್ರೀಡಾಂಗಣ ಐಸ್ ರಿಂಕ್ 2014 ಡಿಸೆಂಬರ್ 12ನೇ ತಾರೀಕು ಶುಕ್ರವಾರ ಅಪಾರಾಹ್ನ 2.30 ಕ್ಕೆ ಹಾಸ್ಯ ಸಿಂಚನ “ಬಲೆ ತೆಲಿಪಾಲೆ” ಕಾರ್ಯಕ್ರಮ ಕೊಲ್ಲಿನಾಡಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

“ಬಲೆ ತೆಲಿಪಾಲೆ” ವೀಕ್ಷಕ ಅಭಿಮಾನಿಗಳು ಕಾತರದಿಂದ ನೀರಿಕ್ಷಿಸುತ್ತಿರುವ ಹಾಸ್ಯ ಕಾರ್ಯಕ್ರಮ ಅದ್ಭುತ ಪರಿಕಲ್ಪನೆಯ ಸಾಕಾರ ಮೂರ್ತಿ ಮಂಗಳೂರಿನ ಬಡಗ ಎಡ ಪದವು ಮಿಜಾರು, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಾಸ್ಥಾನದ ಆಡಳಿತ ಮೊಕ್ತೆಸರು ಶ್ರೀ ವಿಜಯ ವಿಠಲನಾಥ ಶೆಟ್ಟಿ ಮತ್ತು ನಮ್ಮ ಟಿ,ವಿ. ಮುಖ್ಯಸ್ಥರಾದ ಡಾ. ಶಿವ ಶರಣ್ ಶೆಟ್ಟಿಯವರು ದುಬಾಯಿಯಲ್ಲಿ ಏರ್ಪಡಿಸಿರುವ ಅದ್ಧೂರಿಯ ಹಾಸ್ಯ ಪ್ರದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

Bale Thelipale 2

Bale Thelipale 3

ಕರ್ನಾಟಕದ ಕಡಲ ತೀರದ ತುಳುನಾಡಿನ ಸಾಂಸ್ಕೃತಿಕ ಕಲೆ, ಆಚಾರ ವಿಚಾರವನ್ನು ಅವಲೋಕಿಸಿದರೆ ಕಂಬಳ, ಯಕ್ಷಗಾನ, ಬಯಲಾಟ, ತಾಳ ಮದ್ದಲೆ, ಜನಪದ ಕ್ರೀಡೆಗಳು, ನಾಟಕ ವೀಕ್ಷಣೆ ಅಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಜನಾಕರ್ಷಣೆಯನ್ನು ತನ್ನೆಡೆಗೆ ಸೆಳೆದುಕೊಂಡ ದೃಶ್ಯಮಾಧ್ಯಮದ ರಿಯಾಲಿಟಿ ಶೋ ಗಳು ಸಂಪ್ರದಾಯದ ನೆಲೆಗಟ್ಟಿನಲ್ಲಿ ನಡೆಯುತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಧಾನಗತಿಯಲ್ಲಿ ಸಾಗುವಂತೆ ಮಾಡಿದೆ. ಈ ದುಸ್ತಿತಿಯನ್ನು ಮನಗಂಡು ನೂತನವಾಗಿ ಮೂಡಿಸಿದ ಪ್ರಯೋಗವೇ “ಬಲೆ ತೆಲಿಪಾಲೆ”.

Bale Thelipale 4

ತುಳುವಿನ ಮೊತ್ತ ಮೊದಲ ರಿಯಾಲಿಟಿ ಶೋ “ಬಲೆ ತೆಲಿಪಾಲೆ” ಉದಯ….

ಮಂಗಳೂರಿನ ಬಡಗ ಎಡ ಪದವು ಮಿಜಾರು, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಗಳು, ಕ್ರೀಡೆಯನ್ನು ಅಯೋಜಿಸಿಕೊಂಡು ಬರಲಾಗುತಿತ್ತು. ದೇವಸ್ಥಾನದ ಆಡಳಿತ ಮೊಕ್ತೆಸರರು ಶ್ರೀ ವಿಜಯ ವಿಠಲನಾಥ ಶೆಟ್ಟಿಯವರ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿಬಂದ ಪ್ರಹಸನ ರೀತಿಯ ರಂಗ ಪ್ರಯೋಗ ತುಳುವಿನ ಮೊತ್ತ ಮೊದಲ ರಿಯಾಲಿಟಿ ಶೋ ಗೆ ನಾಂದಿಯಾಯಿತು. ದೇವಾಸ್ಥಾನದ ಆವರಣದಲ್ಲಿ 2013 ಮೇ-ಜೂನ್ ತಿಂಗಳಿನಲ್ಲಿ ಪ್ರಥಮ ಬಹುಮಾನ ಒಂದು ಲಕ್ಷ ರೂಪಾಯಿ ಮೊತ್ತದಲ್ಲಿ “ಬಲೆ ತೆಲಿಪಾಲೆ” ಯಶಸ್ವಿ ಪ್ರಯೋಗ ನಡೆಯಿತು. ಸೀಸನ್ ಒಂದು ಪ್ರದರ್ಶನ ಅತೀ ಕಡಿಮೆ ಸಮಯದಲ್ಲಿ ಯುವಕರು, ಮಹಿಳೆಯರು, ಮನೆ ಮಂದಿ ಎಲ್ಲಾ ವರ್ಗದ ಜನರು, ಹಳ್ಳಿ, ನಗರ ಪ್ರದೇಶದವರು, ವಿದೇಶದಲ್ಲಿರುವ ತುಳುವರ ಮನಸೆಳೆಯಿತು. ಬಲೆ ತೆಲಿಪಾಲೆ ಯ ಹಾಸ್ಯದ ತುಣುಕುಗಳು ಯೂ ಟ್ಯೂಬ್ ನಲ್ಲಿ ವಿಶ್ವದಾದ್ಯಂತ ಹರಿದಾಡಿ ನಾಲ್ಕು ಮಿಲಿಯಾ ತುಳುವರು ವೀಕ್ಷಿಸಿದ್ದು ಪ್ರಥಮ ಹಂತದಲ್ಲಿಯೇ ದಾಖಲೆಯನ್ನು ನಿರ್ಮಿಸಿತ್ತು.

Bale Thelipale 5

ಜನ ಮನ ಸೆಳೆದ ನಮ್ಮ ಟಿ. ವಿ. ಯ ಆಕರ್ಷಕ ಕಾರ್ಯಕ್ರಮ “ಬಲೆ ತೆಲಿಪಾಲೆ”

ಅತ್ಯುತ್ತಮ ಪ್ರತಿಕ್ರಿಯೆ ಕಂಡ ಬಲೆ ತೆಲಿಪಾಲೆ ಸೀಸನ್ ಒಂದು ಶೋ, ಒಂದು ಲಕ್ಷ ರೂಪಾಯಿ ಬಹುಮಾನದ ಮೊತ್ತವಾಗಿದ್ದು, ಸೀಸನ್ ಎರಡು ಏಳು ಲಕ್ಷ ರುಪಾಯಿ ಮೊತ್ತದ ಬಹುಮಾನದೊಂದಿಗೆ , ರೂಪೇಶ್ ಕಾರ್ಯಕ್ರಮ ನಿರೂಪಣೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜನಮನ್ನಣೆ ಪಡೆದುಕೊಂಡಿತ್ತು. ದಿನದಿಂದ ದಿನಕ್ಕೆ ದಿನದಿಂದ ದಿನಕ್ಕೆ ಪ್ರಸಿದ್ದಿಯನ್ನು ಪಡೆದ ರಿಯಾಲಿಟಿ ಶೋ ಡಾ. ಶಿವಶರಣ್ ಶೆಟ್ಟಿಯವರ ಸಹಯೋಗದೊಂದಿಗೆ ನಮ್ಮ ಟಿ.ವಿ. ಯಲ್ಲಿ ರಾತ್ರಿ ಎಂಟು ಗಂಟೆಗೆ ಮತ್ತು ಹತ್ತು ಗಂಟೆಗೆ ಮರು ಪ್ರಸಾರದೊಂದಿಗೆ ಕರ್ನಾಟಕ ಕಡಲ ತೀರದ ಉದ್ದ ಅಗಲಗಳಲ್ಲಿ ಪ್ರತಿ ಮನೆ ಮನೆಯಲ್ಲಿ ವೀಕ್ಷಿಸುವಂತಾಯಿತು. ಮನೆ ಮಂದಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿಕೊಂಡು ಭಾಂದವ್ಯವನ್ನು ಗಟ್ಟಿಗೊಳಿಸುವ ಕಾರ್ಯಕ್ರಮವಾಗಿ ಮನೆ ಮಾತಾಯಿತು.

ಬಲೆ ತೆಲಿಪಾಲೆ ವೇದಿಕೆಯಲ್ಲಿ ಮಿಂಚಿದ ಸ್ಥಳಿಯ ಪ್ರತಿಭೆಗಳು

ಬಲೆ ತೆಲಿಪಾಲೆ ಪ್ರಥಮ ಪ್ರಯೋಗದಲ್ಲೆ ಪ್ರಥಮ ಬಹುಮಾನ ತನ್ನದಾಗಿಸಿಕೊಂಡ ಪ್ರಶಂಸ – ಕಾಪು ತಂಡ ಅತ್ಯಂತ ಕುತೂಹಲಕಾರಿಯಾದ ಹಾಸ್ಯದ ರಸದೌತಣ ನೀಡಿತ್ತು. ಇನ್ನಿತರ ತಂಡಗಳಾದ ತೆಲಿಕೆ ಕುಡ್ಲ, ತೆಲಿಕೆ ತೆನ್ನಾಲಿ – ಮಂಗಲ್ಪಾಡಿ, ಕುಸಾಲ್ದ ಬಂಟೆರ್, ಹರಿಣಿ ಕಲಾವಿದರು, ಅಭಿನಯ-ಉಡುಪಿ, ಹಾಗೂ ಇನ್ನಿತರ ಹಾಸ್ಯ ಕಲಾವಿದರ ತಂಡಗಳು “ದೊಂಪ ನಿಲಿಕೆ ತೆಲಿಕೆ” ಹಾಸ್ಯರಸಧಾರೆಯನ್ನು ನಾಡಿನಾದ್ಯಂತ ಹರಿಸಿದ್ದಾರೆ. ತೆರೆಯ ಮರೆಯಲ್ಲಿಯೇ ಉಳಿದುಕೊಂಡಿದ್ದ ಪ್ರತಿಭೆಗಳು “ಬಲೆ ತೆಲಿಪಾಲೆ” ಮೂಲಕ ಕಿರು ತೆರೆಯ ನಿರ್ದೇಶಕರು, ನಿರ್ಮಾಪಕರ ಗಮನ ಸೆಳೆದು ಉತ್ತಮ ಅವಕಾಶ ಪಡೆದುಕೊಂಡು ಜನ ಮಾನ್ಯತೆ ಪಡೆದಿದ್ದಾರೆ.

Kudala telipuge

ಕುಡಲಾ ತೆಲಿಪುಗ……

ಬಲೆ ತೆಲಿಪಾಲೆ ಸ್ಪರ್ಧೆಯಲ್ಲಿ ಭಾಗವಹಿಸುವ ಕಲಾವಿದರ ತಂಡಗಳ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿ ಅಂತಿಮ ಸುತ್ತಿನಲ್ಲಿ ಅವಕಾಶ ಪಡೆದ ತಂಡಗಳಿಗೆ “ಕುಡಲಾ ತೆಲಿಪುಗಾ” ಹಾಸ್ಯ ಕಾರ್ಯಕ್ರಮಗಳಿಗೆ ಪ್ರದರ್ಶನ ನೀಡಲು ಅವಕಾಶ ದೊರೆಯುತ್ತದೆ.

ಇತ್ತಿಚಿನ ವರ್ಷಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಂಗತ, ಅಪ್ರಾಸಂಗಿಕ, ವ್ಯಂಗ್ಯಾರ್ಥಗಳು, ವಿಚಿತ್ರ ಅರ್ಥಚ್ಛಾಯಗಳು, ಸಂಭಾಷಣೆಗಳು ಪ್ರೇಕ್ಷಕರಿಗೆ ಬಲವಂತಾಗಿ ಮುಟ್ಟಿಸುವ ನಾಟಕಗಳು, ಚಲನ ಚಿತ್ರಗಳು ಸೋಲುತಿರುವುದಕ್ಕೆ ಮುಖ್ಯ ಕಾರಣವಾಗಿದೆ.

Bale Thelipale 7

ತುಳು ಭಾಷೆಯಲ್ಲಿ ನೂತನ ಹಾಸ್ಯ ರಂಗ ಪ್ರಯೋಗ ಇಂದು ವಿಶ್ವ ಮಾನ್ಯತೆ ಪಡೆದಿದೆ. ಇಪ್ಪತು ನಿಮಿಷಗಳ ಕಾಲಮಿತಿಯಲ್ಲಿ ಪ್ರದರ್ಶನ ನೀಡಬೇಕಾಗಿದೆ. ಸಂಗೀತ ಸಂಯೋಜನೆ, ಪರಿಕರಗಳನ್ನು ಉಪಯೋಗಿಸಿಕೊಂಡು, ಮೂರೇ ಪಾತ್ರಗಳು ಒಂದು ಸ್ತ್ರೀಪಾತ್ರ ಇರಬೇಕು. ತುಳುನಾಡಿನ ಹಳೆ ತಲೆಮಾರಿನ ಪೋಷಾಕು, ಪಾತ್ರಕ್ಕೆ ತಕ್ಕ ಪೋಷಾಕು, ಹಾಸ್ಯವನ್ನೇ ಜೀವಾಳವಾಗಿರಿಸಿಕೊಂಡು, ಪ್ರತಿ ಹತ್ತು ಸೆಕೆಂಡಿಗೆ ಹಾಸ್ಯದ ತುಣುಕುಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಚಮತ್ಕಾರಿಕೆ “ಬಲೆ ತೆಲಿಪಾಲೆ” ಕಲಾವಿದರ ಯಶಸ್ಸಿನ ಗುಟ್ಟು.

Bale Thelipale 6

ಯಾಂತ್ರಿಕ ಬದುಕಿನಲ್ಲಿ ಹಾಸ್ಯ ಪ್ರಜ್ಞೆ ತುಸು ಹೆಚ್ಚಾಗಿದ್ದರೆ ಮನಸ್ಸಿಗೆ ಮುದದೊರೆತು ಹೆಚ್ಚು ಆರೋಗ್ಯವಂತರಾಗಿ ಇರಬಹುದೆಂಬುದನ್ನು ಮನಗಂಡಿರುವ ಬಲೆ ತೆಲಿಪಾಲೆ ಕಲಾವಿದರು, ಸದಾ ಟೆನ್ಶನ್ ನಲ್ಲಿ ಹಣೆಯ ಮೇಲೆ ಗೆರೆ ಮೂಡಿಸಿಕೊಂಡಿರುವ ಮಂದಿಗಳು, ಮುಖ ಗಂಟಿನ ಬಿಗಿಯನ್ನು ಹಾಸ್ಯದ ಮೂಲಕ ಸಡಿಲಿಸುವ ಕಾಯಕದಲ್ಲಿರುವ ಹಾಸ್ಯಕಲಾವಿದರು ಸರ್ವಕಾಲಿಕ ಮಾನ್ಯರಾಗುತ್ತಾರೆ.

Bale Thelipale 8

“ಬಲೆ ತೆಲಿಪಾಲೆ” ಅದ್ಭುತ ಕಾರ್ಯಕ್ರಮದ ನಿರೀಕ್ಷೆಯಲ್ಲಿ ಕೊಲ್ಲಿನಾಡಿನ ಅಭಿಮಾನಿಗಳು

2013 ರಲ್ಲಿ ಪ್ರಥಮ ಬಾರಿಗೆ ದುಬಾಯಿಯಲ್ಲಿ ಬಲೆ ತೆಲಿಪಾಲೆ ಪ್ರದರ್ಶನ ನೀಡಿರುವ ಪ್ರಶಂಸ ಕಾಪು ತಂಡ ಅಭೂತಪೂರ್ವ ಯಶಸ್ಸು ಕಂಡಿದ್ದು, ನಂತರ 2014 ರ ಏಪ್ರಿಲ್ ನಲ್ಲಿ ಯು.ಎ.ಇ. ಬಂಟ್ಸ್ ಆಶ್ರಯದಲ್ಲಿ ನಡೆದ “ವಿಶ್ವ ಬಂಟರ ದಿನ” ದಲ್ಲಿ ಎರಡನೆಯ ಬಾರಿ ಪ್ರದರ್ಶನ ನೀಡಿ ಬಹು ದೊಡ್ಡ ಅಭಿಮಾನಿಗಳ ಸಮೂಹ ಯು.ಎ.ಇ. ಯಲ್ಲಿ ಬಲೆ ತೆಲಿಪಾಲೆ ಸೃಷ್ಠಿಯಾಗಿದೆ.
ಕೊಲ್ಲಿನಾಡಿನ ಹಾಸ್ಯಪ್ರಿಯರ ಬಹುನಿರೀಕ್ಷಿತ “ಬಲೆ ತೆಲಿಪಾಲೆ” ಕಾರ್ಯಕ್ರಮ ನಮ್ಮ ಟಿ.ವಿ. ನಿರೂಪಕ ನವೀನ್ ಶೆಟ್ಟಿ ನಿರೂಪಣೆಯಲ್ಲಿ ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಮೂರು ಸಾವಿರಕಿಂತಲೂ ಹೆಚ್ಚು ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಸಜ್ಜಾಗಿದೆ. ಈ ಬಾರಿ ನೆರೆಯ ರಾಷ್ಟ್ರಗಳಾದ ಬಹೆರಿನ್, ಕತ್ತಾರ್, ಒಮಾನ್, ಮಸ್ಕತ್ ನಿಂದ ಹಾಸ್ಯ ಕಲಾವಿದರ ತಂಡ, ಯು.ಎ.ಇ. ಯ ಸ್ಥಳಿಯ ಕಲಾವಿದರ ತಂಡ ಪಾಲ್ಗೊಳ್ಳಲಿದೆ.

ಬಲೆ ತೆಲಿಪಾಲೆ ಕಾರ್ಯಕ್ರಮ ಅಜ್ಮಾನ್ ತುಂಬೆ ಗ್ರೂಪ್, ತುಂಬೆ ಹಾಸ್ಪಿಟಲ್ ಅರ್ಪಿಸುತಿದ್ದು, ನಮ್ಮ ಟಿ.ವಿ. ಮತ್ತು ಶ್ರೀ ಭೂತನಾತೇಶ್ವರ ದೇವಾಸ್ಥಾನದ ಆಶ್ರಯದಲ್ಲಿ ನಡೆಯಲಿದೆ. ಕನ್ನಡ ಚಲನ ಚಿತ್ರ ರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರು ಗುರು ಕಿರಣ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಪ್ರಖ್ಯಾತ ಕಿಶೋರ್ ಅಮ್ಮಾನ್, “ಬಲೆ ತೆಲಿಪಾಲೆ” ಸೀಸನ್ 1 ಮತ್ತು ಸೀಸನ್ 2 ಪ್ರಥಮ ಬಹುಮಾನ ಪುರಸ್ಕೃತ ಪ್ರಸಂಸ-ಕಾಪು ತಂಡ ದುಬಾಯಿಯ ಪ್ರದರ್ಶನಕ್ಕಾಗಿಯೇ ಎರಡು ನೂತನ ಪರಿಕಲ್ಪನೆಯ ಅದ್ಭುತ ಕಿರು ಹಾಸ್ಯ ನಾಟಕ ಸಿದ್ದಪಡಿಸಲಾಗಿದ್ದು ದುಬಾಯಿಯ ವೇದಿಕೆಯಲ್ಲಿ ಜನಮನ ಸೆಳೆಯಲಿದೆ. ಒಂದು ವಾರದ ಮುಂಚಿತವಾಗಿ ಹೆಚ್ಚು ಹೆಚ್ಚು ಟಿಕೆಟ್ ಖರಿದಿಯಾಗಿದ್ದು ಬಲೆ ತೆಲಿಪಾಲೆ ಯಶಸ್ಸಿನ ಶುಭಸೂಚನೆಯಾಗಿದೆ.
ಬಲೆ ತೆಲಿಪಾಲೆ ಪ್ರದಶನ ವ್ಯವಸ್ಥಿತ ಪೂರ್ವಭಾವೀ ತಯಾರಿಯೊಂದಿಗೆ ಶ್ರೀ ವಿನಯ ಕುಮಾರ್ ನಾಯಕ್ರವರ ಸಂಘಟನೆಯಲ್ಲಿ ಕೊಲ್ಲಿನಾಡಿನಲ್ಲಿ ಅದ್ಧೂರಿಯ ಬಲೆ ತೆಲಿಪಾಲೆ ಯಶಸ್ಸಿಗೆ ಕೊಲ್ಲಿನಾಡಿನ ಸಮಸ್ಥ ಅಭಿಮಾನಿಗಳ ಪರವಾಗಿ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

2 Comments

  1. Sharath Shetty, Mangalore

    ಬಲೆ ತೆಲಿಪಾಲೆ ಕಾರ್ಯಕ್ರಮ ದುಬಾಯಿಯ ಎಲ್ಲಾ ಪ್ರೇಕ್ಷಕರನ್ನು ನಗಿಸುವಂತಾಗಲಿ, ಕಲಾವಿದರಿಂದ ಅಪಹಾಸ್ಯ, ದ್ವಂದ್ವಾರ್ಥ ಸಂಭಾಷಣೆ ಬರದಿರಲಿ. ಮನೆ ಮಂದಿ ಕುಳಿತು ನೋಡುವ ಎಲ್ಲರಿಗೂ ಹಾಸ್ಯದ ರಸದೌತಣ ದೊರೆಯುವಂತಾಗಲಿ.

Write A Comment