ಕನ್ನಡ ವಾರ್ತೆಗಳು

ಶಂಕಿತ ಆರೋಪಿ ನರೇಶ್ ಶೆಣೈ ದುಬೈಗೆ ಪರಾರಿ – ಬಾಳಿಗ ತಂದೆಯ ಆರೋಪ : ಶೀಘ್ರ ಬಂಧನಕ್ಕೆ ಶ್ರೀರಾಮರೆಡ್ಡಿ ಆಗ್ರಹ

Pinterest LinkedIn Tumblr

Baliga_Murder_cpim

ಮಂಗಳೂರು, ಎ.4: ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗ ಅವರ ಕೊಡಿಯಾಲ್ ಬೈಲ್‌ನ ಮನೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ .ಶ್ರೀರಾಮರೆಡ್ಡಿ ಅವರು ಸೋಮವಾರ ಭೇಟಿ ನೀಡಿ ವಿನಾಯಕ್ ಬಾಳಿಗ ಅವರ ತಂದೆ, ತಾಯಿ, ಸಹೋದರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹತ್ಯೆಗೊಳಗಾದ ಆರ್.ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗ ಅವರ ಕುಟುಂಬಕ್ಕೆ ಸರಕಾರ ಪರಿಹಾರವನ್ನು ನೀಡಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈಯನ್ನು ಕೂಡಲೆ ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು..

ವಿನಾಯಕ್ ಬಾಳಿಗ ಅವರ ಕುಟುಂಬಕ್ಕೆ ಅವರೊಬ್ಬರೆ ಆಧಾರವಾಗಿದ್ದರು. ಸರಕಾರ ಇದನ್ನು ವಿಶೇಷ ಪರಿಸ್ಥಿತಿ ಎಂದು ಪರಿಗಣಿಸಿ ಅವರ ಮನೆಯವರಿಗೆ ಪರಿಹಾರವನ್ನು ನೀಡಬೇಕು . ವಿನಾಯಕ್ ಬಾಳಿಗ ಅವರನ್ನು ಮನೆಮುಂದೆ ಹತ್ಯೆ ಮಾಡಿರುವುದು ಗಮನಿಸಿದಾಗ ರಾಜಕೀಯವಾಗಿ ಬೆಂಬಲ ಇರುವವರು ಈ ರೀತಿ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಈ ಬಗ್ಗೆ ತಕ್ಷಣ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು. ಆರ್.ಟಿ.ಐ ಭ್ರಷ್ಟಾಚಾರ ಬಯಲಿಗೆಳೆಯಲು ಅಸ್ತ್ರವಾಗಿದ್ದು ಆರ್.ಟಿ.ಐ ಕಾರ್ಯಕರ್ತರನ್ನು ಈ ರೀತಿ ಮಾಡಿದರೆ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈ ಅವರಿಗೆ ತನಿಖೆಗೆ ಹಾಜರಾಗಲು ನೋಟಿಸ್ ನೀಡಿರುವುದು ವಿಚಿತ್ರವಾಗಿದೆ. ಆತನನ್ನು ಕೂಡಲೆ ಹುಡುಕಿ ವಿಚಾರಣೆ ನಡೆಸಬೇಕು ಎಂದು ಹೇಳಿದರು.

ಭೇಟಿಯ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ. ಭಾಸ್ಕರ್‌ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಎಸ್ ಸಿ ಗಿರೀಶ್ ಕುಮಾರ್, ಸಾಹಿತಿ ದಯಾನಂದ್ ಟಿ.ಕೆ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್‌ಐ ಜಿಲ್ಲಾ ಪಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತೀನ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನರೇಶ್ ಶೆಣೈ ದುಬೈಗೆ ಹೋಗಿರುವ ಶಂಕೆ ವ್ಯಕ್ತಪಡಿಸಿದ ಬಾಳಿಗರ ತಂದೆ :

ಪ್ರಕರಣದಲ್ಲಿ ಭಾಗಿಯಾಗಿರುವ ನರೇಶ್ ದುಬೈಗೆ ಹೋಗಿರಬಹುದು ಎಂದು ವಿನಾಯಕ್ ಬಾಳಿಗ ಅವರ ತಂದೆ ರಾಮಚಂದ್ರ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ ಅವರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಮಗನ ಹತ್ಯೆಯ ಬಳಿಕ ನರೇಶ್ ಶೆಣೈ ನಾಪತ್ತೆಯಾಗಿದ್ದು ಆತ ದುಬೈಗೆ ಹೋಗಿರಬಹುದು ಎಂದು ಹೇಳಿದ್ದಾರೆ.

ವಶಪಡಿಸಿಕೊಂಡ ಮೊಬೈಲ್ ಹಿಂತಿರುಗಿಸದ ಪೊಲೀಸರು : ಆರೋಪ

ಈ ಸಂದರ್ಭದಲ್ಲಿ ವಿನಾಯಕ್ ಬಾಳಿಗ ಸಹೋದರಿ ಮಾತನಾಡಿ, ವಿನಾಯಕ್ ಬಾಳಿಗನಿಗೆ ಯಾವುದೆ ಬೆದರಿಕೆ ಕರೆ ಬರುತ್ತಿರಲಿಲ್ಲ. ಮನೆಗೆ ಯಾರೂ ಗೆಳೆಯರು ಬರುತ್ತಿರಲಿಲ್ಲ. ನಮ್ಮ ಕುಟುಂಬಕ್ಕೆ ವಿನಾಯಕ್ ಬಾಳಿಗ ಆಧಾರಸ್ತಂಭವಾಗಿದ್ದ. ಹತ್ಯೆ ಬಳಿಕ ಪೊಲೀಸರು ಮನೆಯಲ್ಲಿದ್ದ ಫೈಲ್‌ಗಳನ್ನು, ಸಿಡಿಗಳನ್ನು , ಮೊಬೈಲನ್ನು ಕೊಂಡೋಗಿದ್ದಾರೆ. ನಮಗೆ ಆತನ ಮೊಬೈಲ್‌ನಲ್ಲಿರುವ ಬಂಧುಬಳಗದ ದೂರವಾಣಿ ಸಂಖ್ಯೆ ಅಗತ್ಯವಿದೆ. ಆದರೆ ಮೂರು ದಿನದಲ್ಲಿ ವಾಪಾಸು ಕೊಡುತ್ತೇವೆ ಎಂದ ಮೊಬೈಲ್ ಪೋನನ್ನು ಪೊಲೀಸರು ಇನ್ನು ಹಿಂದುರಿಗಿಸಿಲ್ಲ ಎಂದು ಆಪಾದಿಸಿದರು.

Write A Comment