ಕನ್ನಡ ವಾರ್ತೆಗಳು

ಅಕ್ರಮವಾಗಿ ಮರಳು ಸಾಗಾಗಿಸುತ್ತಿದ್ದ ಲಾರಿಗಳನ್ನು ರಸ್ತೆಯಲ್ಲೇ ತಡೆದು ಪ್ರತಿಭಟನೆ

Pinterest LinkedIn Tumblr

ಮಂಗಳೂರು / ವಿಟ್ಲ : ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳನ್ನು ರಸ್ತೆ ಮಧ್ಯೆ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ಸೋಮವಾರ ನಡೆದಿದೆ.

ಈ ಮೂಲಕ ಸಾಲೆತ್ತೂರು ಮಾರ್ಗದಿಂದ ಅವ್ಯಾಹತವಾಗಿ ನಡೆಸಲಾಗುತ್ತಿದ್ದ ಅಕ್ರಮ ಮರಳು ಸಾಗಾಟ ಪ್ರಕರಣ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಈವರೆಗೆ ಮನವಿ ಮೇಲೆ ಮನವಿ ಸಲ್ಲಿಸಿದ್ದರೂ ಪರಿಶೀಲನೆ ನಡೆಸುತ್ತೇವೆ ಎಂದು ಕೇವಲ ಭರವಸೆ ನೀಡುತ್ತಿದ್ದ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಕೇರಳಕ್ಕೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯೊಂದು ಸಾಲೆತ್ತೂರ್ ಬಳಿಯ ಪುದೂಟ್ಟು ತಿರುವಿನಲ್ಲಿ ಸೈಕಲ್‌ ಸವಾರರೊಬ್ಬರಿಗೆ ಢಿಕ್ಕಿ ಹೊಡೆದು ನಿಲ್ಲಿಸದೇ ಪರಾರಿಯಾಗಿತ್ತು. ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಭಾಸ್ಕರ (65) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಆಕ್ರೋಷಗೊಂಡ ಸ್ಥಳೀಯ ನಾಗರಿಕರು ರಸ್ತೆ ತಡೆ ನಡೆಸಿ ಮರಳು ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಈ ರಸ್ತೆಯಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಲಾರಿಗಳು ವಿಪರೀತ ವೇಗವಾಗಿ ಸಂಚರಿಸುತ್ತಿದ್ದು, ಸಾರ್ವಜನಿಕರು ತಮ್ಮ ಜೀವವನ್ನುಕೈಯಲ್ಲಿಡಿದು ಸಂಚರಿಸುವಂತಾಗಿದೆ. ಈ ಪ್ರದೇಶದಿಂದ ಕೇರಳಕ್ಕೆ ಆವ್ಯಾಹತವಾಗಿ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ನಾಗರಿಕರು ದೂರಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಗಣಿ ಇಲಾಖೆ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗಣಿ ಇಲಾಖಾ ಅಧಿಕಾರಿಗಳು, ಈ ರಸ್ತೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸುವ ಮೂಲಕ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ ಬಳಿ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Write A Comment