ಕನ್ನಡ ವಾರ್ತೆಗಳು

ಯೆಯ್ಯಾಡಿ :ವಾಮಾಚಾರಕ್ಕಾಗಿ ಮಗುವಿನ ಹತ್ಯೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Pinterest LinkedIn Tumblr

Yeyyadi_vamachar_accusd

__ಸತೀಶ್ ಕಾಪಿಕಾಡ್

ಮಂಗಳೂರು, ಮಾ 31: ಕಳೆದ 2010 ಡಿ.16ರಂದು ಯೆಯ್ಯಾಡಿ ಸಮೀಪದ ಬಾರೆಬೈಲ್-ಕಂಪದಕೋಡಿ ಎಂಬಲ್ಲಿ ಮೂರುವರೆ ವರ್ಷದ ಮಗುವನ್ನು ವಾಮಾಚಾರಕ್ಕೆ ಬಳಸಿ ಕತ್ತು ಹಿಸುಕಿ ಕೊಲೆಗೈದಿದ್ದ ಪ್ರಕರಣದ ಆರೋಪಿಗಳ ಅಪರಾಧ ಸಾಬೀತಾಗಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಮಾಲಾಕ್ಷ ಪುರುಷ(80) ಹಾಗೂ ಚಂದ್ರಕಲಾ(30) ಅವರು ಮನೆ ಪಕ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಬಿಹಾರ ಮೂಲದ ಫಿರನ್ ಕುಮಾರ್ ಝಾ ಹಾಗೂ ಅಂಜಲಿ ದೇವಿ ದಂಪತಿಯ ಪುತ್ರಿ ಪ್ರಿಯಾಂಕಾಳನ್ನು ಹತ್ಯೆಗೈದ ಅಪರಾಧಿಗಳಾಗಿದ್ದಾರೆ.ತಪ್ಪಿತಸ್ಥ ಕಮಲಾಕ್ಷ ಪುರುಷನಿಗೆ ಜೀವಾವಧಿ ಹಾಗೂ 50 ಸಾವಿರ ರೂ. ದಂಡ ಹಾಗೂ ಆತನ ಸಾಕು ಮಗಳು ಚಂದ್ರಕಲಾಳಿಗೆ ಜೀವಾವಧಿ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ.ಜೊತೆಗೆ ಸಾಕ್ಷಿ ನಾಶಪಡಿಸಿದ್ದಕ್ಕಾಗಿ ಇಬ್ಬರಿಗೂ ಮೂರು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಘಟನೆ ನಡೆದ ದಿನ ಪ್ರಿಯಾಂಕಾಳನ್ನು ಚಂದ್ರಕಲಾ ಮನೆಗೆ ಕರೆದೊಯ್ದಿದ್ದಳು. ಬಳಿಕ ಮಗು ನಾಪತ್ತೆಯಾಗಿದ್ದು ಹುಡುಕಾಟ ನಡೆಸಿದಾಗ ಮನೆ ಪಕ್ಕದ ಅಡಿಕೆ ತೋಟದಲ್ಲಿ ಮಗುವಿನ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಮಗುವಿನ ಮೈಮೇಲೆ ಬಿಸಿ ನೀರು ಹಾಕಿದ್ದ ಗುರುತು ಮತ್ತು ಸುಟ್ಟ ಗಾಯ ಕಂಡುಬಂದಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಕದ್ರಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 18 ಜನ ಸಾಕ್ಷಿ ಹೇಳಿದ್ದು, ಮೂರು ಜನರು ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ಕೃತ್ಯ ನಡೆದ ದಿನ ಚಂದ್ರಕಲಾ ಮನೆಯಲ್ಲಿ ಪೂಜೆ ನಡೆದಿದ್ದನ್ನು ನೋಡಿದ್ದ ಸ್ಥಳೀಯರು ಪ್ರಮುಖ ಸಾಕ್ಷಿಯಾಗಿದ್ದರು. ಆರೋಪಿಗಳು ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದರು. ನಿನ್ನೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಪರಾಧವು ಸಾಬೀತಾಗಿದ್ದು, ಇಂದು ಶಿಕ್ಷೆಯ ಪ್ರಮಾಣ ಪ್ರಕಟಗೊಂಡಿದೆ.

                          —————————————————————————————————————

2010ರಲ್ಲಿ ಘಟನೆ ನಡೆದ ದಿನ ನಮ್ಮ ವೆಬ್‌ಸೈಟ್ ಪ್ರಕಟಿಸಿದ ವರದಿಯ ಸಾರಂಶ…

ಮಂಗಳೂರು: ಯೆಯ್ನಾಡಿಯ ಕಂಪದಕೋಡಿಯಲ್ಲಿ 3 ವರ್ಷದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ವಾಮಾಚಾರದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಬಿಹಾರ ಮೂಲದ ಫಿರನ್‌ ಕುಮಾರ್‌ ಝಾ ಮತ್ತು ಅಂಜಲಿ ದೇವಿ ದಂಪತಿಯ ಪುತ್ರಿ ಪ್ರಿಯಾಂಕಾ ಈ ಕೃತ್ಯಕ್ಕೆ ಬಲಿಯಾದ ಬಾಲಕಿ.

ಕಮಲಾಕ್ಷ ಪುರುಷ (74) ಮತ್ತು ಆಕೆಯ ಸಾಕುಮಗಳು ಚಂದ್ರಕಲಾ (24) ಕೊಲೆ ಆರೋಪಿಗಳು.

ಗುರುವಾರ ಅಪರಾಹ್ನ 3.30ರ ವೇಳೆಗೆ ಈ ಕೃತ್ಯ ಸಂಭವಿಸಿದ್ದು, ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿಯ ತಂದೆ ಫಿರನ್‌ ಕುಮಾರ್‌ ನಗರದ ಗಿರಿಯಾಸ್‌ ವ್ಯಾಪಾರ ಮಳಿಗೆಯ ಉದ್ಯೋಗಿಯಾಗಿದ್ದು, ಎರಡೂವರೆ ತಿಂಗಳ ಹಿಂದೆ ತನ್ನ ಪತ್ನಿ ಮತ್ತು ಮಕ್ಕಳನ್ನು ಮಂಗಳೂರಿಗೆ ಕರೆಸಿ ಯೆಯ್ನಾಡಿಯ ಕಂಪದಕೋಡಿಯಲ್ಲಿ ಮಾಧವ ಪುರುಷ ಅವರ ಮನೆಯಲ್ಲಿ ಬಾಡಿಗೆ ನೆಲೆಯಲ್ಲಿ ವಾಸಿಸತೊಡಗಿದ್ದರು. ಮಾಧವ ಅವರು ಕೊಲೆ ಆರೋಪಿ ಕಮಲಾಕ್ಷನ ಹಿರಿಯ ಸೋದರ (ಅಣ್ಣ) ಆಗಿದ್ದಾರೆ. ಇವರಿಬ್ಬರದೂ ಅಕ್ಕ ಪಕ್ಕದಲ್ಲಿ ಮನೆ. ಮಾಧವ ಅವರ ಮನೆ ಮೇಲ್ಗಡೆ ಹಾಗೂ ಕಮಲಾಕ್ಷ ಆವರದು ಕೆಳಗಡೆ ಇದೆ.

ಫಿರನ್‌ ಕುಮಾರ್‌- ಅಂಜಲಿ ದಂಪತಿಗೆ ಮೂವರು ಮಕ್ಕಳು. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ. ಮೊದಲನೆಯವನು ಪಂಕಜ್‌ (7). ಈತ ಕೊಂಚಾಡಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೆಯವಳು ಪ್ರಿಯಾಂಕ (3). ಈಕೆ ಕರ್ನಾಟಕ ಪಾಲಿಟೆಕ್ನಿಕ್‌ ಬಳಿ ಇರುವ ಅಂಗನವಾಡಿಗೆ ಹೋಗುತ್ತಿದ್ದಳು. ಮೂರನೇ ಮಗು ನೀರಜ್‌ (ಒಂದುವರೆ ವರ್ಷ ಪ್ರಾಯ). ಫಿರನ್‌ ಕುಮಾರ್‌ ಅವರ ಪತ್ನಿ ಅಂಜಲಿ ಗೃಹಿಣಿಯಾಗಿ ಮನೆಯಲ್ಲಿ ಇರುತ್ತಿದ್ದಳು.

ನಿನ್ನೆಯೂ ಅಂಗನವಾಡಿಗೆ ಹೋಗಿದ್ದಳು

ಗುರುವಾರ ಅಪರಾಹ್ನ ಅಂಜಲಿ ಅವರು ಪ್ರಿಯಾಂಕಳನ್ನು ಅಂಗನವಾಡಿಯಿಂದ ಮನೆಗೆ ಕರೆದುಕೊಂಡು ಬಂದಿದ್ದು, ಬಳಿಕ ಪ್ರಿಯಾಂಕ ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದಳು. ಸುಮಾರು 3 ಗಂಟೆ ವೇಳೆಗೆ ಕೆಳಗಿನ ಮನೆಯಿಂದ ಚಂದ್ರಕಲಾ ಈ ಮನೆಗೆ ಬಂದಿದ್ದು, ಮಗು ಪ್ರಿಯಾಂಕಳನ್ನು ಎತ್ತಿಕೊಂಡು ಹೋಗಿದ್ದಾಳೆ. ಬಳಿಕ ಮಗುವನ್ನು ಕಂಡವರಿಲ್ಲ. ಸಂಜೆ ಹೊತ್ತು ಮಗು ಮನೆಗೆ ಬಾರದೆ ಇದ್ದಾಗ ತಾಯಿ ಅಂಜಲಿ ಅವರು ಕೆಳಗಿನ ಮನೆಗೆ ಹೋಗಿ ವಿಚಾರಿಸಿದಾಗ ಮಗು ಎಲ್ಲಿದೆ ಎಂದು ತಿಳಿಯದು ಎಂದರು. ಬಳಿಕ ಎಲ್ಲ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿಲ್ಲ. ರಾತ್ರಿ 7.30ರ ವೇಳೆಗೆ ಫಿರನ್‌ ಕುಮಾರ್‌ ಅವರು ಕದ್ರಿ ಪೊಲೀಸ್‌ ಠಾಣೆಗೆ ತೆರಳಿ ಮಗು ಕಾಣೆಯಾದ ಬಗ್ಗೆ ದೂರು ನೀಡಿದರು. ದೂರು ದಾಖಲಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಕಮಲಾಕ್ಷನ ಮನೆಯಲ್ಲಿ ಮತ್ತು ಆಸುಪಾಸಿನ ಮನೆಗಳಲ್ಲಿ ವಿಚಾರಣೆ ನಡೆಸಿದರು. ಅಲ್ಲಿನ ತೋಟ ಮತ್ತು ಗದ್ದೆಗಳಲ್ಲಿ ಸುಮಾರು ಮಧ್ಯರಾತ್ರಿವರೆಗೂ ಪೊಲೀಸರು ಶೋಧ ನಡೆಸಿ ಬರಿಗೈಯಲ್ಲಿ ವಾಪಸಾದರು.

ಗೊಂದಲದ ಮಾತು

ಮಗುವನ್ನು ಹುಡುಕುತ್ತಾ ವಿವರಣೆ ಪಡೆಯುತ್ತಿದ್ದ ಸಂದರ್ಭದಲ್ಲಿ ಚಂದ್ರಕಲಾ ಆಡಿದ ಕೆಲವು ಗೊಂದಲದ ಮಾತುಗಳಿಂದ ಪೊಲೀಸರಿಗೆ ಸಂಶಯ ಉಂಟಾಗಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಚಂದ್ರಕಲಾಳನ್ನು ತೀವ್ರವಾಗಿ ವಿಚಾರಣೆಗೆ ಒಳ ಪಡಿಸಿದಾಗ ಬಾಲಕಿ ಪ್ರಿಯಾಂಕಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಳು. ಬಳಿಕ ನೇರವಾಗಿ ಮನೆಯಿಂದ ಸುಮಾರು ಅರ್ಧ ಫರ್ಲಾಂಗು ದೂರ ಅಡಿಕೆ ತೋಟಕ್ಕೆ ತೆರಳಿ ಮೃತ ದೇಹವನ್ನು ಎಸೆದಿರುವ ಜಾಗವನ್ನು ಪೊಲೀಸರಿಗೆ ತೋರಿಸಿದಳು.

ನಿರ್ದಯವಾಗಿ ಕೊಲೆ

ಬಾಲಕಿಯನ್ನು ಗುರುವಾರ ಸುಮಾರು 3 ಗಂಟೆ ವೇಳೆಗೆ ಚಂದ್ರಕಲಾ ಕರೆ ತಂದಿದ್ದಳು. ಆಗ ಕಮಲಾಕ್ಷ ಮನೆಯಲ್ಲಿ ಪೂಜೆ ಮಾಡುತ್ತಿದ್ದ. 3.30ರ ವೇಳೆಗೆ ಬಾಲಕಿಯನ್ನು ಮನೆಯ ಕೊಠಡಿಗೆ ಕರೆದೊಯ್ದು ಆಕೆಯ ಬಾಯಿಗೆ ಪ್ರಸಾದ ಹಾಕಿ ಬಳಿಕ ಕುಡಿಯಲು ಅಮಲು ಪದಾರ್ಥ ನೀಡಲಾಯಿತು. ಆಗ ಪ್ರಿಯಾಂಕ ಪ್ರಜ್ಞೆ ತಪ್ಪಿ ಬಿದ್ದಳು. ಬಳಿಕ ಕಮಲಾಕ್ಷ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದ. ಅನಂತರ ಬಾಲಕಿಯ ಮೃತ ದೇಹವನ್ನು ಇಬ್ಬರೂ ಸೇರಿ ಮನೆಯಿಂದ ಸ್ವಲ್ಪ ದೂರ ಇರುವ ಅಡಿಕೆ ತೋಟಕ್ಕೆ ಕೊಂಡೊಯ್ದು ಅಲ್ಲಿ ಹರಿಯುತ್ತಿರುವ ಸಣ್ಣ ತೋಡಿನ ಬಳಿ ಎಸೆದಿದ್ದಾರೆ.

ಬಾಲಕಿಯ ಬಟ್ಟೆ ಗಳನು ಕಳಚಿದ್ದು, ಒಳ ಚಡ್ಡಿ ಮಾತ್ರ ಇತ್ತು. ಕಾಲಿನಲ್ಲಿ ಧರಿಸಿದ್ದ ಒಂದು ಚಪ್ಪಲಿಯೂ ಅಲ್ಲಿತ್ತು. ಮೃತ ದೇಹವನ್ನು ಹರಿಯುತ್ತಿರುವ ಸಣ್ಣ ತೋಡಿನ ದಂಡೆಯಲ್ಲಿ ಕುರುಚಲು ಗಿಡಗಳ ಮಧ್ಯೆ ಎಸೆಯಲಾಗಿತ್ತು,

ಮಾಟ-ಮಂತ್ರ ಖಯಾಲಿ

ಆರೋಪಿ ಕಮಲಾಕ್ಷನಿಗೆ ಅಡಿಕೆ ತೋಟವಿದೆ. ಮನೆಯ ಬಲ ಬದಿಯಲ್ಲಿ ಮತ್ತು ಹಿಂಭಾಗದಲ್ಲಿ ಎರಡು ದೈವದ ಗುಡಿಗಳಿವೆ. ಒಂದು ಕಾಳ ಭೈರವ ಗುಡಿ. ಇನ್ನೊಂದು ಅಣ್ಣಪ್ಪ ದೈವದ ಗುಡಿ. ಮಾಟ, ಮಂತ್ರ, ಪೂಜೆ, ಪುನಸ್ಕಾರ ಈತನ ಖಯಾಲಿ.

ಕಮಲಾಕ್ಷನಿಗೆ 75 ವರ್ಷ. ಆತನ ಜತೆಗಿರುವ ಚಂದ್ರಕಲಾಳಿಗೆ 24 ವರ್ಷ. ಆಕೆ ತನ್ನ ಸಾಕುಮಗಳು ಎಂದು ಆತ ಹೇಳುತ್ತಾನೆ. ಆಕೆಯೂ ಇದನ್ನು ಒಪ್ಪಿಕೊಳ್ಳುತ್ತಿ¤ದ್ಧಾಳೆ. ಇವರಿಬ್ಬರಲ್ಲದೆ ಮನೆಯಲ್ಲಿ ಬೇರೆ ಯಾರೂ ಇಲ್ಲ. ಆಕೆಯನ್ನು ಆತ ಇಟ್ಟುಕೊಂಡವಳು ಎಂದು ಸ್ಥಳೀಯ ಜನರು ಆರೋಪಿಸುತ್ತಾರೆ.

ಎರಡನೆ ಕೊಲೆ?

ಕಮಲಾಕ್ಷನಿಗೆ ಮದುವೆ ಆಗಿದೆಯೇ ಇಲ್ಲವೇ ಎಂಬ ಜಿಜ್ಞಾಸೆ ಕೂಡಾ ವ್ಯಕ್ತವಾಗಿದೆ. ಚಂದ್ರಕಲಾಳ ತಾಯಿ ವಿಮಲ ಯಾನೆ ರೇವತಿ ಕೂಡಾ ಕಮಲಾಕ್ಷY ಇಟ್ಟು ಕೊಂಡ ಹೆಣ್ಣು, ಮದುವೆಯಾಗಿ ಬಂದವಳಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ. ರೇವತಿ ಸಾವಿನ ಬಗೆಗೂ ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದು, ಆಕೆಯ ಸಾವಿಗೆ ಕಮಲಾಕ್ಷನೇ ಕಾರಣ ಎಂದು ಆಪಾದಿಸುತ್ತಾರೆ. ಇದು ಆತನ ಎರಡನೇ ಕೊಲೆಯಾಗಿರಬೇಕೆಂಬ ಸಂಶಯ ಸ್ಥಳೀಯರದ್ದು.

ಕಮಲಾಕ್ಷನ ಬಗ್ಗೆ ಅಲ್ಲಿನ ಸುತ್ತ ಮುತ್ತಲ ಯಾರಿಗೂ ಉತ್ತಮ ಅಭಿಪ್ರಾಯವಿಲ್ಲ. ನಮ್ಮ ಗಂಡಸರು ಈ ದಾರಿಯಲ್ಲಿ ಬರುವಾಗ ಕಮಲಾಕ್ಷ ಕಲ್ಲು ತೂರಾಟ ಮಾಡಿ ಕಿರುಕುಳ ನೀಡುತ್ತಿದ್ದ. ಹಲವಾರು ನಾಯಿಗಳನ್ನು ಸಾಕಿದ್ದು, ಕೆಲವೊಮ್ಮೆ ಅವುಗಳನ್ನು ಛೂ ಬಿಡುತ್ತಿದ್ದ. ಮಾಟ ಮಂತ್ರ ಮಾಡಿ ದಾರಿಯಲ್ಲಿ ಇರಿಸುತ್ತಿದ್ದ ಎಂದು ಸ್ಥಳೀಯ ನಿವಾಸಿ ಮಮತಾ ಆರೋಪಿಸುತ್ತಾರೆ.

ದಾರಿಯಲ್ಲಿ ಹೋಗುವಾಗ ಕಲ್ಲು ತೂರಾಟ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಕದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದೆವು. ಆದರೆ ಪೊಲೀಸರು ವಿಚಾರಣೆ ಮಾಡಿ ಆತ ಮಾನಸಿಕ ರೋಗಿ ಎಂದು ಹೇಳಿ ಬಿಡುಗಡೆ ಮಾಡಿದರು ಎಂದವರು ತಿಳಿಸಿದ್ದಾರೆ.

ತ‌ನ್ನ ಪತ್ನಿ ಎಂದು ಹೇಳುತ್ತಿದ್ದವಳನ್ನು ಕೊಲೆ ಮಾಡಿ ಚಾಪೆಯಲ್ಲಿ ಸುತ್ತಿ ಒಂದು ವಾರ ಕಾಲ ಇರಿಸಿ ಬಳಿಕ ಎಲ್ಲಿಗೋ ಎಸೆದಿದ್ದ. ಬಳಿಕ ಆಕೆಯ ಮಗಳನು ° (ಚಂದ್ರಕಲಾ) ಇಟ್ಟುಕೊಂಡಿದ್ದ. ಇಡೀ ಊರಿಗೆ ಆತನ ಕಿರುಕುಳವಿದೆ. ಆತನನ್ನು ಬಿಡುಗಡೆ ಮಾಡ ಬಾರದು ಎಂದು ಮಮತಾ ಅವರು ಒತ್ತಾ ಯಿಸಿದ್ದಾರೆ.

ಈ ದಾರಿಯಲ್ವಿ ನಾವು ತಲೆ ಎತ್ತಿ ನಡೆಯುವಂತಿಲ್ಲ. ಬಗ್ಗಿ ಬಗ್ಗಿ ನಡೆದಾಡ ಬೇಕು. ಆತನ ಮನೆ ಕಡೆ ನೋಡುವಂತಿಲ್ಲ. ಪತ್ನಿಯ (ಸಾಕು ಮ ಗಳು) ಮೂಲಕ ಬೈಗುಳ, ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯ ನಿವಾಸಿ ಮೋಹಿನಿ ಆರೋಪಿಸಿದರು.

ಶುಕ್ರವಾರ ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿದ ಕೂಡಲೇ ಜನರು ಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡಿದರು. ಸ್ಥಳೀಯ ಕೆಲವರು ಕಮಲಾಕ್ಷನ ಮನೆಯ ಮೇಲೆ ದಾಂಧಲೆ ನಡೆಸಿದರು,. ಕಲ್ಲು ತೂರಾಟ ಮಾಡಿ ಕಿಟಿಕಿ, ಬಾಗಿಲು, ಗಾಜು, ಹೆಂಚು ಪುಡಿಗೈದರು. ಮನೆಯವಳಗಿದ್ದ ಸೊತ್ತುಗಳನ್ನು ಚೆಲ್ಲಾ ಪಿಲ್ಲಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

ಪೊಲೀಸ್‌ ಅಧಿಕಾರಿಗಳ ಭೇಟಿ: ಡಿಸಿಪಿಗಳಾದ ಆರ್‌. ರಮೇಶ್‌ ಮತ್ತು ಎಂ. ಮುತ್ತೂರಾಯ, ಕದ್ರಿ ಇನ್ಸ್‌ಪೆಕ್ಟರ್‌ ನಿರಂಜನರಾಜ್‌ ಅರಸ್‌, ಸಬ್‌ ಇನ್ಸ್‌ಪೆಕ್ಟರ್‌ ಚಿಕ್ಕಸ್ವಾಮಿ ಮತ್ತು ಇತರ ಸಿಬಂದಿ, ಅಸಿಸ್ಟೆಂಟ್‌ ಕಮಿಷನರ್‌ ಪ್ರಭುಲಿಂಗ ಕವಳಿಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಕುಂತಳಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಆಘಾತದಲ್ಲಿ ಅಮಾಯಕ ಕುಟುಂಬ

ಮಂಗ­ಳೂರು ಯಾವುದೋ ಕಾರಣಕ್ಕಾಗಿ ಮಗುವನ್ನು ಬಲಿ ಕೊಡಲಾಗಿದೆ ಎಂದರೆ ನಂಬುವುದು ಕಷ್ಟವಾಗುತ್ತದೆ. ಆದರೆ ಗುರುವಾರ ಸಂಜೆಯ ಅನಂತರದ ಘಟನೆಗಳು, ಮಗುವಿನ ಕಳೇಬರದ ಮೇಲೆ ಗೋಚರಿಸುತ್ತಿರುವ ಅರಸಿನ ಪುಡಿ, ಪ್ರಸಾದ ವಸ್ತುಸ್ಥಿತಿಯನ್ನು ಹೇಳುತ್ತಿದೆ ಎಂದು ಅಲವತ್ತುಕೊಂಡರು ಫಿರನ್‌ ಕುಮಾರ್‌ ಝಾ.

ಶುಕ್ರವಾರ ಸಂಜೆ ನಗರದ ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿ ತನ್ನ ಮೂರು ವರ್ಷದ ಮಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಹೊರಗೆ ತಂಗಿದ ಜೀಪೊಂದಕ್ಕೆ ಒರಗಿ ಅವರು ಏಕಾಂಗಿಯಾಗಿ ನಿಂತುಕೊಂಡಿದ್ದರು. ಕಪ್ಪುಗಟ್ಟಿದ್ದ ಅವರ ಕಣ್ಣಿನಲ್ಲಿ ನೀರು ಕೂಡ ಇರಲಿಲ್ಲ. ಅಷ್ಟು ಹೊತ್ತಿಗೆ ಅಲ್ಲಿಗೆ ಆಗಮಿಸಿದ ಅಟೋರಿಕ್ಷಾದಿಂದ ಜೀವತ್ಛವದಂತಿದ್ದ ಮಗುವಿನ ತಾಯಿಯನ್ನು ಕೆಳಗಿಳಿಸಿದರು. ಆಕೆ ಇನ್ನೋರ್ವ ಮಹಿಳೆಗೆ ಒರಗಿ ಅಲ್ಲೇ ಕುಳಿತರು.

ಝಾ ಅವರ ಕುಟುಂಬ ಕಮಲಾಕ್ಷ ಪುರುಷ ಅವರ ಮನೆ ಪಕ್ಕದ ಬಾಡಿಗೆ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದಷ್ಟೇ ವಾಸ ಮಾಡುತ್ತಿದೆ. ಮೂಲತಃ ಬಿಹಾರ ರಾಜ್ಯ ನಿವಾಸಿಯಾದ ಅವರು ಕಳೆದ ಏಳು ವರ್ಷಗಳಿಂದ ನಗರದ ಗಿರಿಯಾಸ್‌ ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ಅನಂತರ ಕೂಡ ಮನೆಯವರಿಂದ ದೂರವಿದ್ದ ಅವರು ಹಿತೈಷಿಗಳ ಸಲಹೆಯಂತೆ ನಗರದಲ್ಲೇ ಮನೆಮಾಡಿ ಕುಟುಂಬದ ಜೊತೆ ವಾಸ ಮಾಡಲು ಯೋಚಿಸಿದ್ದರು.

ಎರಡು ತಿಂಗಳ ಹಿಂದೆ ಕಮಲಾಕ್ಷ ಅವರ ಸಹೋದರ ಮಾಧವ ಪುರುಷ ಅವರ ಮನೆ ಬಾಡಿಗೆ ಪಡೆದು ಹೆಂಡತಿ ಅಂಜಲಿ ದೇವಿ ಝಾ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಕರೆಸಿಕೊಂಡಿದ್ದಾರೆ.

‘ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ಇಲ್ಲದಿರುವುದನ್ನು ಕಂಡು ಪತ್ನಿಯಲ್ಲಿ ವಿಚಾರಿಸಿದೆ. ಆಕೆಯನ್ನು ಹತ್ತಿರದ ಕಮಲಾಕ್ಷ ಪುರುಷ ಅವರ ಮನೆಯಲ್ಲಿದ್ದ ಚಂದ್ರಕಲಾ ಸಂಜೆ ಸುಮಾರು 3 ಗಂಟೆಗೆ ಕರೆದೊಯ್ದಿರುವುದಾಗಿ ಆಕೆ ತಿಳಿಸಿದಳು. ಕರೆದುಕೊಂಡು ಬರುವಂತೆ ತಿಳಿಸಿದೆ. ಪತ್ನಿ ಅಲ್ಲಿಗೆ ಹೋಗಿ ವಿಚಾರಿಸಿದಾಗ ಮಗು ಬಂದ ಅರ್ಧ ಗಂಟೆಯೊಳಗೆ ತನ್ನ ಮನೆಗೆ ಮರಳಿರುವುದಾಗಿ ತಿಳಿಸಿದಳು’ ಎಂದು ಹಿಂದಿನ ದಿನದ ಘಟನೆಯನ್ನು ಫಿರನ್‌ ಕುಮಾರ್‌ ಝಾ ಸ್ಮರಿಸಿಕೊಂಡರು.

ನಾವು ಆ ಮನೆಯವರೊಂದಿಗೆ ಮಾತನಾಡುವುದೇ ಕಡಿಮೆ. ನಮಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅವರಿಗೆ ಹಿಂದಿ ಬರುವುದಿಲ್ಲ. ಅಲ್ಲದೆ ಆ ಮನೆಯವರ ಜೊತೆ ಆಸುಪಾಸಿನ ಜನರು ಇಟ್ಟುಕೊಂಡಿರುವ ಸಂಬಂಧ ಕೂಡ ಅಷ್ಟಕಷ್ಟೆ ಎಂದು ನೆನಪಿಸಿಕೊಂಡ ಅವರು, ನಮ್ಮ ಮನೆ ಮಾಲಕರಿಗೆ ಬೇಕಾದವರು ಕರೆಯುವಾಗ ಅವರ ಮೇಲೆಯೇ ಅನುಮಾನಿಸುವುದು ಹೇಗೆ ? ಎಂದು ತಲೆಮೇಲೆ ಕೈಹೊತ್ತು ಕುಳಿತರು.

‘ಸಂಜೆಯೇ ಝಾ ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ರಾತ್ರಿ ಮತ್ತೆ ನಾವು ಪೊಲೀಸ್‌ ಠಾಣೆಗೆ ತೆರಳಿ ವಿಷಯದ ಗಂಭೀರತೆ ಕುರಿತು ತಿಳಿಸಿದೆವು. ಠಾಣೆಯಲ್ಲಿ ಜನರು ಕಡಿಮೆ ಇರುವುದಾಗಿ ತಿಳಿಸಿದ ಪೊಲೀಸರು ಮತ್ತೆ ಮನಸು ಬದಲಿಸಿ ನಮ್ಮ ಜೊತೆ ಕಮಲಾಕ್ಷ ಪುರುಷ ಅವರ ಮನೆಗೆ ಬಂದರು. ರಾತ್ರಿ ಮಗುವಿಗಾಗಿ ಸಾಕಷ್ಟು ಹುಡುಕಾಡಿದೆವು’ ಎಂದು ವಿವರಿಸಿದರು ಪಾಲಿಕೆ ಸದಸ್ಯ ಜಯಾನಂದ ಅಂಚನ್‌.

ನೆರೆಮನೆಯವರು ಹೊಟ್ಟೆಗೆ ಏನಾದರೂ ತೆಗೆದುಕೊಳ್ಳುವಂತೆ ಝಾ ಅವರನ್ನು ಒತ್ತಾಯಿಸುತ್ತಿದ್ದರು. ನಿನ್ನೆ ಮಗು ಕಾಣದಾದಂದಿನಿಂದ ಮನೆಯಲ್ಲಿ ಯಾರೂ ಏನೂ ಸೇವಿಸಿಲ್ಲ ಎಂದವರು ಸ್ಥಳದಲ್ಲಿದ್ದ ನೆರೆಯ ಲ್ಯಾನ್ಸಿ ಫೆರ್ನಾಂಡಿಸ್‌.

ಮೂಢನಂಬಿಕೆಯ ಪರಾಮಾವಧಿ

ತಂತ್ರಶಾಸ್ತ್ರದಲ್ಲಿ ಮನುಷ್ಯನನ್ನು ಬಲಿಕೊಡುವ ಯಾವುದೇ ಕ್ರಮ ಇಲ್ಲ. ಇದು ಮೂಢನಂಬಿಕೆಯ ಪರಾಮಾವಧಿ. ತಾಂತ್ರಿಕ ಪ್ರಯೋಗದಲ್ಲಿ ಪ್ರಾಣಿ ಬಲಿ ನೀಡುವುದು ನಡೆದುಕೊಂಡು ಬಂದಿದೆ. ಕೋಳಿ, ಕುರಿ, ಕೋಣಗಳನ್ನು ಮಾರಣ ಪ್ರಯೋಗಕ್ಕೆ ಬಳಸುತ್ತಾರೆ. ಆದರೆ ಮಕ್ಕಳನ್ನು ಬಲಿ ಕೊಡುವುದು ಅರ್ಧ ಮಂತ್ರ – ತಂತ್ರ ಕಲಿತವರು. ನಿಧಿ ಅಥವಾ ಇನ್ನಿತರ ದುರಾಸೆೆಯಿಂದ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ. ಇದು ಭ್ರಾಂತಿ. ತಿಳುವಳಿಕೆ ಇಲ್ಲದ ಜನರು ಮಾಡುವ ಕೆಲಸ.

ಜಯಶಂಕರ ಭಟ್‌ , ಜ್ಯೋತಿಷ್ಯ ಸಲಹೆಗಾರರು , ಕೇರಳ

ದೇವಸ್ಥಾನ ಮುಚ್ಚಬೇಕು

ಅಲ್ಲಿ ವಾಮಚಾರ ನಡೆಯುತ್ತಿದ್ದರೆ, ತತ್‌ಕ್ಷಣ ಜಿಲ್ಲಾಡಳಿತ ಅಂತಹ ದೇವಸ್ಥಾನವನ್ನು ಮುಚ್ಚಬೇಕು. ಜೊತೆಯಲ್ಲಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಮಾಜಕ್ಕೆ ಅನ್ಯಾಯವಾಗುವ ಅಂತಹ ಯಾವುದೇ ಪದ್ದತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ, ಬೆಂಬಲಿಸುವುದಿಲ್ಲ . ಪೊಲೀಸರು ಈ ಪ್ರಕರಣದಲ್ಲಿ ತತ್‌ಕ್ಷಣ ಆರೋಪಪಟ್ಟಿ ಸಲ್ಲಿಸಬೇಕು. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗೆ ಶಿಕ್ಷೆ ಆಗಬೇಕು.

ಜಗದೀಶ್‌ ಶೇಣವ, ವಿಶ್ವಹಿಂದೂ ಪರಿಷತ್‌ ಜಿಲ್ಲಾ ಉಪಾಧ್ಯಕ್ಷ

ವಿರೋಧ

ಇಂತಹ ಕೃತ್ಯಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಇಂತಹ ಯಾವುದೇ ವಾಮಾಚಾರ ಮಾರ್ಗಗಳನ್ನು ನಾವು ಸಹಿಸುವುದಿಲ್ಲ .

ಶರಣ್‌ ಪಂಪ್‌ವೆಲ್‌, ಜಿಲ್ಲಾ ಸಂಚಾಲಕ ಬಜರಂಗದಳ

ಅಮಾಯಕನಂತೆ ಪೋಸು ನೀಡುತ್ತಿದ್ದ

ಮಂಗಳೂರು ಮಗುವನ್ನು ನಾನು ನೋಡಿಯೇ ಇಲ್ಲ. ಆಕೆ (ಚಂದ್ರಕಲಾ) ಮತ್ತು ಮಗುವಿನ ತಾಯಿ ಅಂಜಲಿ ಅವರೇ ಏನೋ ಮಾಡಿರ ಬೇಕು. ಇದು 3 ವರ್ಷದ ಬಾಲಕಿ ಪ್ರಿಯಾಂಕಾಳ ಕೊಲೆ ಆರೋಪಿ ಕಮಲಾಕ್ಷ ಪುರುಷ ಕದ್ರಿ ಪೊಲೀಸ್‌ ಠಾಣೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ನೀಡಿದ ಉತ್ತರ.

ಪೊಲೀಸ್‌ ಠಾಣೆಯ ಕೊಠಡಿಯಲ್ಲಿ ತನಗೇನೂ ಗೊತ್ತಿಲ್ಲದಂತೆ ಕಮಲಾಕ್ಷ ಮುಗªತೆ ಪ್ರದರ್ಶಿಸುತ್ತಿದ್ದ. ನಿನ್ನೆ ಸಂಕ್ರಮಣ. ಹಾಗಾಗಿ ಎಂದಿನಂತೆ ಮನೆಯಲ್ಲಿ ಸಾಮಾನ್ಯ ಪಂಚ ಪರ್ವ ಪೂಜೆ ಅರ್ಥಾತ್‌ ಪರಿಹಾರಕ್ಕಾಗಿ ಕಾಳ ಭೈರವ ಪೂಜೆ ನೆರವೇರಿಸಲಾಗಿದೆ ಎಂದು ಆತ ಉತ್ತರಿಸಿದ.

ರಾತ್ರಿ 7.30ರ ವೇಳೆಗೆ ನನಗೆ ಮಗು ಇಲ್ಲ ಎಂದು ತಿಳಿಯಿತು. ಅಷ್ಟರ ತನಕ ನನಗೆ ಗೊತ್ತೇ ಇರಲಿಲ್ಲ ಎಂದರು ಕಮಲಾಕ್ಷನ ಅಣ್ಣ ಹಾಗೂ ಫಿರನ್‌ ಕುಮಾರ್‌ ವಾಸಿಸುತ್ತಿರುವ ಬಾಡಿಗೆ ಮನೆಯ ಮಾಲಕ ಮಾಧವ ಪುರುಷ.

ಮಗುವನ್ನು ಮನೆಯ ಕೊಠಡಿಯಲ್ಲಿ ಮಲಗಿಸಿ, ಮೊದಲು ಪ್ರಸಾದ ನೀಡಿ, ಬಳಿಕ ಕುಡಿಯಲು ಅಮಲು ಪದಾರ್ಥ ನೀಡಿ, ಅನಂತರ ಕೊಲೆ ಮಾಡಲಾಗಿದೆ ಎಂದು ಚಂದ್ರಕಲಾ ಹೇಳಿದರು. ಆದರೆ ಕೊಲೆ ಮಾಡಿದ್ದು, ನಾನಲ್ಲ. ಅವರು (ಕಮಲಾಕ್ಷ) ಎಂದು ಆಕೆ ವಿವರಿಸಿದಳು.

ನನ್ನ ತಾಯಿ ರೇವತಿಯನ್ನು ಆತ (ಕಮಲಾಕ್ಷ) ಹೊಡೆಯುತ್ತಿದ್ದ. ಕೊನೆಗೆ ಆಕೆಯನ್ನು ಸಾಯಿಸಿದ್ದು ಆತನೇ ಎಂದು ಚಂದ್ರಕಲಾ ಆರೋಪಿಸಿದಳು.

ಆಕೆಯನ್ನು ವಿಚಾರಿದೆ ಇರುತ್ತಿದ್ದರೆ, ಆತ ಒಪ್ಪುತ್ತಿರಲಿಲ್ಲ: ಆರ್‌ ರಮೇಶ್‌

ಚಂದ್ರಕಲಾಳನ್ನು ತೀವ್ರ ವಿಚಾರಣೆಗೆ ಒಳಪಡಿಸದಿರುತ್ತಿದ್ದರೆ ಮತ್ತು ಆಕೆ ಬಾಯಿ ಬಿಡದಿರುತ್ತಿದ್ದರೆ ಆತ (ಕಮಲಾಕ್ಷ ಪುರುಷ) ಕೊಲೆ ಮಾಡಿದ ಬಗ್ಗೆ ಒಪ್ಪುತ್ತಿರಲಿಲ್ಲ ಎಂದು ಡಿಸಿಪಿ ಆರ್‌. ರಮೇಶ್‌ ತಿಳಿಸಿದರು.

ಪೊಲೀಸರು ರಾತ್ರಿ ವೇಳೆಯೇ ತೀವ್ರ ಶೋಧ ಹಾಗೂ ವಿಚಾರಣೆ ನಡೆಸಿದ್ದರಿಂದ ಅವರು (ಕಮಲಾಕ್ಷ ಮತ್ತು ಚಂದ್ರಕಲಾ) ಭೀತರಾಗಿರಬೇಕು. ಹಾಗಾಗಿ ಮೃತ ದೇಹ ಇಂದು ಬೆಳಗ್ಗೆ ಕೂಡಾ ಅಲ್ಲಿಯೇ ಇತ್ತು. ಅವರಿಗೆ ಭಯಪಡದೇ ಇರುತ್ತಿದ್ದರೆ, ಬಾಲಕಿಯ ಮೃತ ದೇಹವನ್ನು ರಾತ್ರೋ ರಾತ್ರಿ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇತ್ತು ಎಂದು ಅವರು ವಿವರಿಸಿದರು.

ಸುಶಿಕ್ಷಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಮಾಚಾರದಂತಹ ಘಟನೆಗಳು ನಡೆಯಬಾರದಿತ್ತು. ಈಗ ನಡೆದಿರುವುದು ದುರಾದೃಷ್ಟಕರ. ಮೂಢ ನಂಬಿಕೆ ಮತ್ತು ವಾಮಾಚಾರಗಳ ಬಗೆಗೆ ಜನರು ಜಾಗೃತರಾಗಿರಬೇಕು ಎಂದು ಡಿಸಿಪಿ ವಿವರಿಸಿದರು.

ಆತ ಮತ್ತು ಆಕೆ ಮೃತ ದೇಹವನ್ನು ತೋರಿಸಿದ್ದಾರೆ. ಹಾಗಾಗಿ ಅವರೇ ಕೊಲೆ ಮಾಡಿರಬೇಕು ಎಂದು ನಂಬಲಾಗಿದೆ. ಯಾಕೆ ಕೊಲೆ ಮಾಡಿರಬಹುದು ಎಂದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ ಎಂದರು.

ಅಜ್ಜಿ ಕಥೆಯಲ್ಲಿ ಕೇಳಿದ್ದು ನಮ್ಮೆದುರು ನಡೆಯಿತು: ಬೆಚ್ಚಿ ಬಿತ್ತು ಕರಾವಳಿ ಜನ

ಅಜ್ಜಿ ಕಥೆಗಳಲ್ಲಿ ನರಬಲಿ ಬಗ್ಗೆ ಕೇಳಿದ್ದ ಕರಾವಳಿ ಜನತೆ ಇದೇ ಮೊದಲ ಬಾರಿಗೆ ಅದನ್ನು ಪ್ರತ್ಯಕ್ಷ ಕಂಡು ಬೆಚ್ಚಿ ಬಿದ್ದಿದೆ.

ಬಹಳ ವರ್ಷಗಳ ಹಿಂದೆ ದೊಡ್ಡ ದೊಡ್ಡ ನದಿಗಳಿಗೆ ಸೇತುವೆ ನಿರ್ಮಿಸುವಾಗ ನರ ಬಲಿ ಕೊಡಲಾಗುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಸೇತುವೆ ಭದ್ರತೆಗೆ ರಕ್ತ ತರ್ಪಣ ನೀಡಬೇಕು, ಅದಕ್ಕೆ ಮಕ್ಕಳನ್ನು ಬಲಿ ನೀಡಲಾಗುತ್ತದೆ ಎಂದೆಲ್ಲ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಆದರೆ ಅದ್ಯಾವುದನ್ನು ನೋಡಿದವರಿಲ್ಲ. ಎಲ್ಲವೂ ಬರೇ ಗಾಳಿ ಸುದ್ದಿಗಳೇ.

ಆದರೆ ಈಗ ಅಂತದ್ದೊಂದು ಬಲಿ ನೀಡಿದ ಘಟನೆ ನಮ್ಮ ಕಣ್ಣ ಮುಂದೆ ನಡೆದಿದೆ. ಈ ಅಮಾನವೀಯ ಘಟನೆ ಸುಸಂಸ್ಕೃತರ ನಾಡು ಎಂದು ಕರೆಯಲಾಗುವ ಈ ಕರಾವಳಿ ಪ್ರದೇಶದ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ. ಇನ್ನಷ್ಟೇ ಹೊರ ಜಗತ್ತಿನೊಂದಿಗೆ ಬೆರೆತು ನಲಿದು ಕುಪ್ಪಳಿಸಬೇಕಿದ್ದ ಮೂರು ವರ್ಷದ ಮುಗª ಬಾಲೆ ವಾಮಾಚಾರಕ್ಕೆ ಬಲಿಯಾದ್ದಾಳೆ.

ಜ್ಯೋತಿಷ್ಯ, ತಂತ್ರ – ಮಂತ್ರಗಳನ್ನು ಮನುಕುಲದ ಒಳಿತಿಗಾಗಿ ರೂಪಿಸಲಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅವು ಹಣ ಮಾಡುವ ದಂಧೆಗಳಾಗಿವೆ ಎನ್ನುವುದು ಸ್ಪಷ್ಟ. ತಂತ್ರ ಶಾಸ್ತ್ರಗಳನ್ನು ಸರಿಯಾಗಿ ಅರಗಿಸಿಕೊಳ್ಳದೆ, ಅರ್ಧಂಬರ್ಧ ಅಭ್ಯಸಿಸಿದ ತಾಂತ್ರಿಕರು ಇಂತಹ ಕೃತ್ಯಗಳಿಗೆ ಇಳಿಯುವುದು ಅಧಿಕ.

ಸಿದ್ದಿ, ನಿಧಿ ಶೋಧ, ವೈರಿಗಳ ನಿಗ್ರಹ ಮುಂತಾದ ಕೃತ್ಯಗಳಿಗೆ ವಾಮಾಚಾರದ ಮಾರ್ಗ ಬಳಸುತ್ತಾರೆ. ಇಲ್ಲಿ ಮಾರಣ ಪ್ರಯೋಗಗಳಿಗೆ ಮಾತ್ರ ಪ್ರಾಣಿ ಬಲಿ ನೀಡುವ ವಾಡಿಕೆ ಇದೆ. ಕೋಳಿ, ಕುರಿ, ಕೋಣಗಳನ್ನು ಬಲಿ ನೀಡಿ ತಮ್ಮ ಉದ್ದೇಶ ಸಾಧಿಸಲು ಪ್ರಯತ್ನಿಸುತ್ತಾರೆ. ಕೆಲವೊಂದು ಆರಾಧನಾ ಕೇಂದ್ರದಲ್ಲಿ ಮಾಂತ್ರಿಕರು ಇಂದಿಗೂ ಈ ಪ್ರಯೋಗ ಮಾಡುತ್ತಾರೆ. ಇನ್ನೂ ಕೆಲವೊಂದು ಕಡೆ ಪ್ರಾಣಿಗಳ ಬದಲಿಗೆ ಬೂದು ಕುಂಬಳ ಕಾಯಿ, ಬಾಳೆ ದಿಂಡು ಕಡಿಯುವ ಪದ್ದತಿ ಇದೆ.

ಒರಿಸ್ಸಾ, ಪಶ್ಚಿಮಬಂಗಾಳಗಳಲ್ಲಿ ಈ ರೀತಿಯ ವಾಮಚಾರದ ಪೂಜೆಗಳು ಚಾಲ್ತಿಯಲ್ಲಿವೆ. ಆಗೊಮ್ಮೆ ಈಗೊಮ್ಮೆ ನರಬಲಿ ನಡೆದಿದೆಯೆನ್ನುವ ಸುದ್ದಿಗಳು ಕೂಡಾ ಕೇಳಿ ಬಂದಿವೆ.

ನರಬಲಿ ನೀಡಬೇಕೆಂದು ಯಾವ ಶಾಸ್ತ್ರದಲ್ಲಿ ಹೇಳಿಲ್ಲ. ಇದು ಮೂಢನಂಬಿಕೆಯ ಪರಾಮಾವಧಿ ಎನ್ನುತ್ತಾರೆ ಜ್ಯೋತಿಷ್ಯ ಸಲಹೆಗಾರ ತೆಕ್ರುಂಜೆ ಜಯಶಂಕರ ಭಟ್‌.

ನಗರದಲ್ಲಿ ಗುರುವಾರ ನಡೆದ ಘಟನೆಯಲ್ಲಿ ಭೈರವನಿಗೆ ಬಲಿ ನೀಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ ಉದ್ದೇಶ ಸ್ಪಷ್ಟವಿಲ್ಲ . ಆದರೆ ಆರೋಪಿ ಕಮಲಾಕ್ಷ ಪುರುಷನ ವೈಯಕ್ತಿಕ ಲಾಭದಾಸೆಗೆ ಪುಟಾಣಿ ಮಾತ್ರ ಬಲಿಯಾಗಿದ್ದಾಳೆ.

ಕಮಲಾಕ್ಷ ವಿರುದ್ಧ ಸ್ಥಳೀಯರ ಆಕ್ರೋಶ

ಬಾಲಕಿಯ ಕೊಲೆ ಆರೋಪಿ ಕಮಲಾಕ್ಷನ ಕೃತ್ಯದ ವಿರುದ್ಧ ಯೆಯ್ನಾಡಿ ಕಂಪದ ಕೋಡಿಯ ಜನರು ಆಕ್ರೋಶಭರಿತರಾಗಿದ್ದಾರೆ.

ಆತನನ್ನು ಇನ್ನು ಇಲ್ಲಿಗೆ ಬರಲು ಬಿಡಬಾರದು. ಇಂತಹ ಕೆಲಸ ಇನ್ನು ಮುಂದೆ ಮಾಡಬಾರದು ಎಂದು ಜನರು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಆತ ಈ ಹಿಂದೆ ಹೆಂಡತಿಯನ್ನು ಇಲ್ಲವಾಗಿಸಿದ್ದಾನೆ. ಆತನಿಗೆ ನಾಲ್ಕು ವರ್ಷದ ಇಬ್ಬರು ಮಕ್ಕಳಿದ್ದರು. ಈಗ ಅವರು ಎಲ್ಲಿದ್ದಾರೆ ಎಂದು ತಿಳಿಯದು. ಈ ಬಗೆಗೂ ಆತನ ವಿಚಾರಣೆ ನಡೆಸಬೇಕು ಮತ್ತು ಸತ್ಯ ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಊಟ ಕೂಡಾ ಮಾಡಿರಲಿಲ್ಲ

ಬಾಲಕಿ ಪ್ರಿಯಾಂಕಾ ಅಂಗನವಾಡಿಯಿಂದ ಬಂದು ಊಟ ಕೂಡಾ ಮಾಡಿರಲಿಲ್ಲ. ಅಂಗಳದಲ್ಲಿ ಆಡುತ್ತಿದ್ದವಳನ್ನು ಮುದ್ದಿಸಿ ಚಂದ್ರಕಲಾ ಎತ್ತಿಕೊಂಡು ಹೋಗಿದ್ದಳು ಎಂದು ಮಾಧವ ಪುರುಷ ಅವರ ಇನ್ನೊಂದು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೊಂಚಾಡಿ ಶಾಲೆಯ ಶಿಕ್ಷಕ ಪ್ರಕಾಶ್‌ ಹೇಳಿದರು.

ಬಿಸ್ಕಿಟ್‌, ಚಾಕೊಲೇಟು ಕೊಡುತ್ತೇನೆ ಎಂದು ಹೇಳಿ ಈ ಹಿಂದೆ ಕೂಡಾ ಬಾಲಕಿ ಪ್ರಿಯಾಂಕಳನ್ನು ಚಂದ್ರಕಲಾ ಕರೆದುಕೊಂಡು ಹೋಗಿದ್ದಿದೆ ಎಂದವರು ವಿವರಿಸಿದರು.

ರಾತ್ರಿ ಹೊತ್ತು ಯಾವಾಗಲೂ ಕಮಲಾಕ್ಷ ಅವರ ಮನೆಯಲ್ಲಿ ಪೂಜೆಯ ಸದ್ದು ಕೇಳಿಸುತ್ತಿತ್ತು ಎಂದರು.

ಒಳ್ಳೆಯದಾಗಲಿ ಎಂದು ಕೃತ್ಯ

ಪ್ರಕರಣಕ್ಕೆ ಸಂಬಂಧಿಸಿ ಕಮಲಾಕ್ಷ ಮತ್ತು ಚಂದ್ರಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಧವ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವಾಮಾಚಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ನಿಸ್ಸಂಶಯ. ತಮಗೆ ಒಳ್ಳೆಯದಾಗಲಿ ಎಂದು ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಇದುವರೆಗಿನ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ತನಿಖಾಧಿಕಾರಿ ಕದ್ರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ನಿರಂಜನರಾಜ್‌ ಅರಸ್‌ ತಿಳಿಸಿದ್ದಾರೆ.

Write A Comment