ಕನ್ನಡ ವಾರ್ತೆಗಳು

ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆ : ಸ್ಥಳೀಯ ಯುವಕನ ಮೇಲೆ ಶಂಕೆ ವ್ಯಕ್ತ

Pinterest LinkedIn Tumblr

ullla_kidnap_student

ಮಂಗಳೂರು, ಫೆ.27: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ನಿವಾಸಿ ಅಪ್ರಾಪ್ತ ವಯಸ್ಕ ಶಾಲಾ ವಿದ್ಯಾರ್ಥಿನಿಯೋರ್ವಳು ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದು, ಸ್ಥಳೀಯ ಯುವಕನೋರ್ವ ಆಕೆಯನ್ನು ಅಪಹರಿಸಿರ ಬಹುದೆಂದು ಶಂಕಿಸಲಾಗಿದೆ.

ಕುಂಪಲ ನಿವಾಸಿ, 16ರ ಹರೆಯದ ಬಾಲಕಿ ಸ್ಥಳೀಯ ಖಾಸಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಫೆ.19ರಂದು ಎಂದಿನಂತೆ ಶಾಲೆಗೆ ತೆರಳಿದ್ದ ಬಾಲಕಿ ಆ ಬಳಿಕ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾಳೆ. ಮನೆಯವರು ಸಂಬಂಧಿಕರು ಮತ್ತು ಪರಿಚಿತರ ಮನೆಗಳಲ್ಲಿ ವಿಚಾರಿಸಿದರೂ ಆಕೆಯ ಬಗ್ಗೆ ಯಾವುದೇ ಮಾಹಿತಿ ದೂರಕಿರಲಿಲ್ಲ. ತನ್ಮಧ್ಮೆ ತಮ್ಮ ಹುಡುಗಿಗೆ ಕುಂಪಲ ಮೂರುಕಟ್ಟೆ ನಿವಾಸಿ, ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿರುವ ಶಶಿ (21) ಎಂಬಾತನ ಸಂಪರ್ಕವಿತ್ತು ಎಂಬ ಮಾಹಿತಿ ಪಡೆದ ಮನೆಯವರು ಆತನ ಮನೆಗೆ ತೆರಳಿ ವಿಚಾರಿಸಿದಾಗ ಆತನೂ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಆತನೇ ತನ್ನ ಪುತ್ರಿಯನ್ನು ಅಪಹರಿಸಿರಬಹುದೆಂದು ಬಾಲಕಿಯ ತಂದೆ ಶಂಕೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದಾನೆ. ತನ್ನ ಬೈಕ್ ಮಾರಿದ ದುಡ್ಡಿನ ಜೊತೆಗೆ ಸ್ವಸಹಾಯ ಸಂಘದಿಂದಲೂ ಹಣವನ್ನು ಪಡೆದುಕೊಂಡು ಹೋಗಿದ್ದಾನೆ ಎಂದು ಆತನ ಮನೆಯವರು ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಬಾಲಕಿಯ ತಂದೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ಶಶಿಯ ಸ್ನೇಹಿತರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು, ಆತ ಎಲ್ಲಿಗೆ ಹೋಗಿದ್ದಾನೆಂಬ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ.

ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.

Write A Comment