ಕನ್ನಡ ವಾರ್ತೆಗಳು

ವೈದ್ಯರ ನಿರ್ಲಕ್ಷವೇ ಸಾವಿಗೆ ಕಾರಣ : ಸಲ್ಮಾನ್ ಕುಟುಂಬಸ್ಥರ ಆರೋಪ

Pinterest LinkedIn Tumblr

ಉಳ್ಳಾಲ, ನ.29: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಕೆಲವೇ ನಿಮಿಷಗಳಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಆದರೆ ಯುವಕನ ಸಾವು ವೈದ್ಯರ ನಿರ್ಲಕ್ಷದಿಂದ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ದೇರಳಕಟ್ಟೆ ಜಲಾಲ್‌ಬಾಗ್ ನಿವಾಸಿ ಅಹ್ಮದ್ ಎಂಬವರ ಪುತ್ರ ಸಲ್ಮಾನ್ (24) ಮೃತಪಟ್ಟ ಯುವಕ. ವೃತ್ತಿಯಲ್ಲಿ ಈತ ಎಲೆಕ್ಟ್ರಿಷಿಯನ್ ಆಗಿದ್ದ.

ನಿನ್ನೆ ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿದ್ದರಿಂದ ಸಲ್ಮಾನ್ ತನ್ನ ಮನೆಯಿಂದ ಬೈಕ್‌ನಲ್ಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಆತನನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದರೆನ್ನಲಾಗಿದೆ.

ಸಲ್ಮಾನ್‌ನ ಬಲ ಕೈ ಮತ್ತು ಎದೆಯ ಬಲಭಾಗದಲ್ಲಿ ಕಾಣಿಸಿಕೊಂಡಿದ್ದ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ವೈದ್ಯರು ಆತನನ್ನು ಪರೀಕ್ಷಿಸಿ ಎರಡು ಚುಚ್ಚುಮದ್ದನ್ನು ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಸಲ್ಮಾನ್ ವಾಂತಿ ಮಾಡಲು ಪ್ರಾರಂಭಿಸಿದಾಗ ವೈದ್ಯರು ಆತತನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದು, ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿರುವುದಾಗಿ ಸಲ್ಮಾನ್‌ನ ಕುಟುಂಬಸ್ಥರು ತಿಳಿಸಿದ್ದಾರೆ.

ವೈದ್ಯರು ಸರಿಯಾದ ಸಮಯದಲ್ಲಿ ಆತನಿಗೆ ಚಿಕಿತ್ಸೆ ನೀಡದೆ, ನಿರ್ಲಕ್ಷ ತೋರಿದ್ದರಿಂದ ಸಲ್ಮಾನ್ ಮೃತಪಟ್ಟಿದ್ದಾನೆಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಯುವಕ ಮೃತಪಟ್ಟ ಸುದ್ದಿಯಿಂದ ನೂರಾರು ಮಂದಿ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ವೈದ್ಯರ ನಿರ್ಲಕ್ಷವೇ ಯುವಕನ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.

Write A Comment