ಮಂಗಳೂರು, ಸೆ. 24: ಎತ್ತಿನಹೊಳೆ ಯೋಜನೆ ಅನುಷ್ಠಾನವನ್ನು ವಿರೋಧಿಸಿ ದ.ಕ. ಜಿಪಂನ ಜಿಲ್ಲಾ ಯೋಜನಾ ಸಮಿತಿ ನಿರ್ಣಯ ಕೈಗೊಂಡಿದೆ. ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಒತ್ತಾಯಿಸಲೂ ತೀರ್ಮಾನಿಸಲಾಯಿತು.
ಎತ್ತಿನಹೊಳೆ ಯೋಜನೆ ಜಿಲ್ಲೆಯ ಜೀವಸೆಲೆಗೆ ಮಾರಕವಾಗಿದ್ದು, ಅದನ್ನು ಕೂಡಲೇ ರದ್ದುಪಡಿಸುವಂತೆ ಸರಕಾರವನ್ನು ಆಗ್ರಹಿಸುವ ನಿರ್ಣಯ ಕೈಗೊಳ್ಳಲಾಯಿತು. ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಜಿಲ್ಲೆಯ ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿ ಸರಕಾರ ಶೀಘ್ರ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.
14ನೆ ಹಣಕಾಸು ಆಯೋಗದಿಂದ ಮೆಸ್ಕಾಂಗೆ ಅನುದಾನ ನೀಡುವುದನ್ನು ತಡೆ ಹಿಡಿಯಬೇಕು ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕೃಷಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿ ಸರಕಾರಕ್ಕೆ ಪತ್ರ ಬರೆಯಲು ಈ ವೇಳೆ ನಿರ್ಣಯಿಸಲಾಯಿತು.
ಜಿಲ್ಲಾ ಕಾರ್ಯಪಡೆಯಲ್ಲಿ ಜಿಪಂ ಅಧ್ಯಕ್ಷರನ್ನು ಖಾಯಂ ಆಹ್ವಾನಿತರನ್ನಾಗಿ ಸೇರಿಸಬೇಕು ಇತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಯೋಜನಾ ಸಮಿತಿ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಅಲ್ಲದೇ ಅವರು ಸಭೆಗೆ ಬಾರದಿರುವ ಕುರಿತು ಸರಕಾರಕ್ಕೆ ಪತ್ರ ಮುಖೇನ ತಿಳಿಸಲಾಗುವುದು ಎಂದು ಅಧ್ಯಕ್ಷೆ ತಿಳಿಸಿದರು. ಜಿಲ್ಲೆಯ ಮಾನವ ಅಭಿವೃದ್ಧಿ ವರದಿ ಬಗ್ಗೆ ಡಾ. ಎನ್.ಎಸ್.ಶೆಟ್ಟಿ ಮಾಹಿತಿ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಸುವರ್ಣ, ಚಂದ್ರಕಲಾ, ಮೀನಾಕ್ಷಿ ಮಂಜುನಾಥ್, ಜಿಲ್ಲಾ ಯೋಜನಾಧಿಕಾರಿ ಬಸವರಾಜ್, ಜಿಪಂ ಉಪ ಕಾರ್ಯದರ್ಶಿ ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.