ಕನ್ನಡ ವಾರ್ತೆಗಳು

ಎರಡು ಪಾಸ್‌ಪೋರ್ಟ್ ಹೊಂದಿದ ಆರೋಪಿ ನಿಷೇಧಿತ ಡ್ರಗ್ಸ್‌ ತರಿಸಿದ ಆರೋಪದಲ್ಲಿ ಪತ್ನಿ ಸಮೇತ ಸೆರೆ

Pinterest LinkedIn Tumblr

Drugs_Pasport_accsed

ಮಂಗಳೂರು, ಸೆ. 19: ಎರಡು ಪಾಸ್‌ಪೋರ್ಟ್ ಗಳನ್ನು ಹೊಂದಿ ವಿದೇಶಕ್ಕೆ ತೆರಳಿ ತನ್ನ ಸ್ನೇಹಿತನಿಂದ ನಿಷೇಧಿತ ಡ್ರಗ್ಸ್‌ಗಳನ್ನು ತರಿಸಿಕೊಂಡು ಸ್ನೇಹಿತನನ್ನೇ ವಂಚಿಸಿದ ಆರೋಪದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ನಗರದ ನಿವಾಸಿ ರಿಚರ್ಡ್ ಲೂಯಿಸ್ ಕ್ಯಾಸ್ಟೊಲಿನೊ ಮತ್ತು ಆತನ ಪತ್ನಿ ಜುಸ್ತಿನ್ ಕ್ಯಾಸ್ಟೊಲಿನೊ ಬಂಧನಕ್ಕೊಳಗಾದ ಆರೋಪಿಗಳು.

ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಮರಳಿದ್ದ ಕಾರ್ಕಳ ನಿವಾಸಿ ಮೆಲ್ವಿನ್ ಫೆರ್ನಾಂಡಿಸ್ ಎಂಬವರಿಗೆ ಆರೋಪಿ ರಿಚರ್ಡ್ ಲೂಯಿಸ್ ತನಗೆ ಸೌಖ್ಯವಿಲ್ಲದ ಕಾರಣ ತನ್ನ ಪತ್ನಿ ಮಾತ್ರೆಗಳನ್ನು ನೀಡುತ್ತಿದ್ದು, ಅವನ್ನು ಕುವೈತ್‌ಗೆ ತರುವಂತೆ ಕೋರಿಕೊಂಡಿದ್ದ. ಅದರಂತೆ ರಿಚರ್ಡ್ ಪತ್ನಿ ಜುಸ್ತಿನ್ ನೀಡಿದ್ದ ಪಾರ್ಸೆಲ್‌ನ್ನು ಮೆಲ್ವಿನ್ ತೆಗೆದುಕೊಂಡು ಕುವೈತ್ ತೆರಳಿದ್ದ. ಈ ಸಂದರ್ಭ ಮೆಲ್ವಿನ್ ಫೆರ್ನಾಂಡಿಸ್‌ರನ್ನು ಕುವೈತ್ ಪೊಲೀಸರು ಬಂಧಿಸಿದ್ದರು.

ಜುಸ್ತಿನ್ ಕ್ಯಾಸ್ಟೊಲಿನೊ ನೀಡಿದ್ದ ಪಾರ್ಸೆಲ್‌ನಲ್ಲಿ ನಿಷೇಧಿತ ಡ್ರಗ್ಸ್ ಇದ್ದುದೇ ಬಂಧನಕ್ಕೆ ಕಾರಣವಾಗಿತ್ತು. ಈ ಸಂದರ್ಭ ಮೆಲ್ವಿನ್ ಈ ಪಾರ್ಸೆಲ್ ರಿಚರ್ಡ್ ಲೂಯಿಸ್‌ಗೆ ಸೇರಿದ್ದಾಗಿ ಹೇಳಿದ್ದು, ಅಲ್ಲಿನ ಪೊಲೀಸರು ರಿಚರ್ಡ್ ಲೂಯಿಸ್ ತಮ್ಮ ದೇಶದಲ್ಲಿ ಇಲ್ಲವೆಂದೂ, ಆತ ಈ ಹಿಂದೆ ಕುವೈತ್‌ನಲ್ಲಿ ಕಾರು ಕಳ್ಳತನ ಮಾಡಿ ಗಡಿಪಾರು ಆಗಿದ್ದಾನೆಂದು ತಿಳಿಸಿ ಮೆಲ್ವಿನ್‌ನನ್ನು ಜೈಲಿಗೆ ಅಟ್ಟಿದ್ದರು.

ಮೆಲ್ವಿನ್ ಫೆರ್ನಾಂಡಿಸ್‌ರ ಪತ್ನಿ ಕ್ಯಾರೆಲ್ ಫೆರ್ನಾಂಡಿಸ್ ಎಂಬವರು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ರಿಚರ್ಡ್ ಲೂಯಿಸ್ ಎರಡು ಪಾಸ್‌ಪೋರ್ಟ್ ಗಳನ್ನು ಹೊಂದಿದ್ದಾನೆಂದು ದೂರಿದ್ದರು. ಈ ಬಗ್ಗೆ ತನಿಖೆ ನಡೆಸಿದ ಕಾರ್ಕಳ ಪೊಲೀಸರು ಆತನಿಗೆ ಎರಡು ಪಾಸ್‌ಪೋರ್ಟ್‌ಗಳಿಲ್ಲ ಎಂದು ಹೇಳಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಆದರೆ, ಕ್ಯಾರೆಲ್ ಫೆರ್ನಾಂಡಿಸ್ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಯು.ಟಿ. ಖಾದರ್, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಸಂಸದ ವೀರಪ್ಪ ಮೊಲಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರನ್ನು ಭೇಟಿ ಮಾಡಿದ್ದರು. ಅವರು ಈ ಬಗೆ ಕೇಂದ್ರ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದು, ಸಚಿವರು ಸಹಾಯ ಮಾಡಿದ್ದರು. ಈ ಸಂದರ್ಭ ಮೆಲ್ವಿನ್ ಫೆರ್ನಾಂಡಿಸ್ 9 ತಿಂಗಳು ಜೈಲಿನಲ್ಲಿ ಕಳೆದಿದ್ದರು. ಅನಂತರ ಕ್ಯಾರೆಲ್ ತನಗಾಗಿರುವ ಅನ್ಯಾಯದ ಬಗ್ಗೆ ಪಶ್ಚಿಮ ವಲಯ ಐಜಿಪಿ ಅಮ್ರಿತ್ ಪಾಲ್‌ರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದರು.

ಅವರ ಸೂಚನೆಯಂತೆ ನ್ಯಾಯಾಲಯದಲ್ಲಿ ಹೊಸ ಮೊಕದ್ದಮೆ ದಾಖಲಾಯಿತು. ಪ್ರಕರಣವನ್ನು ಡಿವೈಎಸ್ಪಿ ಡಾ.ಎಚ್.ಎನ್.ವೆಂಕಟೇಶ ಪ್ರಸನ್ನ ರಿಗೆ ಹಸ್ತಾಂತರಿಸಿದರು. ತನಿಖೆಯನ್ನು ಕೈಗೆತ್ತಿಕೊಂಡ ವೆಂಕಟೇಶ ಪ್ರಸನ್ನ ಆರೋಪಿ ರಚರ್ಡ್ ಲೂಯಿಸ್‌ನ ಪತ್ನಿ ಜುಸ್ತಿನ್‌ಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯನ್ನು ಪತ್ತೆ ಹಚ್ಚಿದ್ದರು.

ಕಾರ್ಕಳದ ಕೆನರಾ ಬ್ಯಾಂಕ್‌ನಲ್ಲಿ ಆಕೆ ಹೊಂದಿದ್ದ ಬ್ಯಾಂಕ್ ಖಾತೆಗೆ ಕುವೈತ್‌ನಿಂದ ರೋಶನ್ ಕ್ರಾಸ್ತಾ ಎಂಬ ಹೆಸರಿನ ವ್ಯಕ್ತಿಯು ಹಣ ಕಳುಹಿಸಿರುವ ಮಾಹಿತಿ ಲಭಿಸಿತ್ತು. ಹಣ ಬಂದ ಜಾಡನ್ನು ಹಿಡಿದ ಪೊಲೀಸರು ಕೆನರಾ ಬ್ಯಾಂಕಿನ ಮುಖಾಂತರ ನೆಫ್ಟ್ ಸಂಸ್ಥೆಗೆ ಮತ್ತು ನೆಫ್ಟ್ ಸಂಸ್ಥೆಯ ಮುಖಾಂತರ ಕುವೈತ್‌ನಲ್ಲಿರುವ ಡೋರ್ಲಾಕೊ ಮನಿ ಎಕ್ಸ್‌ಚೇಂಜ್‌ಗೆ ಪತ್ರ ಬರೆದು ಜುಸ್ತೀನ್ ಲೂಯಿಸ್ ಕ್ಯಾಸ್ಟೊಲಿನೊಗೆ ಹಣ ಸಂದಾಯ ಮಾಡಿದ ರೋಶನ್ ಕ್ರಾಸ್ತಾ ಎಂಬ ವ್ಯಕ್ತಿಯ ಐಡಿ ಕಾರ್ಡ್‌ನ್ನು ಪಡೆಯಲಾಯಿತು. ಆ ಐಡಿ ಕಾರ್ಡ್‌ನಲ್ಲಿದ್ದ ಭಾವಚಿತ್ರ ಆರೋಪಿ ರಿಚರ್ಡ್ ಲೂಯಿಸ್ ಕ್ಯಾಸ್ಟೊಲಿನೊ ಭಾವಚಿತ್ರ ಒಂದಕ್ಕೊಂದು ತಾಳೆಯಾಗುತ್ತಿತ್ತು ಎಂದು ಪ್ರಕಟನೆ ತಿಳಿಸಿದೆ.

ಇಮಿಗ್ರೇಷನ್‌ಗೆ ತೆರಳಿದ ಪೊಲೀಸ್ ಅಧಿಕಾರಿಗಳು ರೋಶನ್ ಕ್ರಾಸ್ತಾ ಎಂಬ ಹೆಸರಿನ ಪಾಸ್‌ಪೋರ್ಟ್ ವಿವರಗಳನ್ನು ಪಡೆದರು. ಈ ಪಾಸ್‌ಪೋರ್ಟ್‌ನಲ್ಲಿದ್ದ ಫೋಟೊ ಹಾಗೂ ಆರೋಪಿ ರಿಚರ್ಡ್ ಲೂಯಿಸ್‌ನ ಫೋಟೋ ಒಂದೇ ರೀತಿಯಲ್ಲಿದ್ದು, ಇದರಿಂದಾಗಿ ಆರೋಪಿ ಎರಡು ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದು ಖಚಿತವಾಯಿತು. ಸೆ.15ರಂದು ಆರೋಪಿ ರಿಚರ್ಡ್ ಲೂಯಿಸ್ ಮತ್ತು ಆತನ ಪತ್ನಿ ಜುಸ್ತಿನ್‌ರನ್ನು ಪೊಲೀಸರು ಬಂಧಿಸಿದ್ದಾರೆ.

ಐಜಿಪಿ ಅಮ್ರಿತ್ ಪಾಲ್‌ರ ನಿರ್ದೇಶನದಂತೆ ಡಾ.ಎಚ್.ಎನ್.ವೆಂಕಟೇಶ ಪ್ರಸನ್ನ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಲೋಲಾಕ್ಷಿ ಜಿ. ಶಿವಕುಮಾರ್, ವಿಜಯ ಕುಮಾರ್ ಸಹಕರಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Write A Comment