ಮಂಗಳೂರು: ಮಂಗಳೂರು ವಕೀಲರ ಸಂಘದ ವತಿಯಿಂದ ಐದು ಜಿಲ್ಲೆಗಳ ಪ್ರಾಂತೀಯ ವಕೀಲರ ಸಮ್ಮೇಳನ ಸೆಪ್ಟಂಬರ್ 26 ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸಭಾಂಗಣದಲ್ಲಿ ಜರಗಲಿದೆ. ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ವಕೀಲರ ಸಮ್ಮೇಳನವನ್ನು ಉದ್ಘಾಟಿಸಲಿರುವರು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಅಧ್ಯಕ್ಷತೆ ವಹಿಸುವರು, ಹೈಕೋರ್ಟ್ ನ್ಯಾಯಮೂರಿ ಎ.ಎನ್.ವೇಣುಗೋಪಾಲ್, ರಾಜ್ಯದ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ, ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮುಂತಾದವರು ಭಾಗವಹಿಸುವರು ಎಂದರು.
ಸಮ್ಮೇಳನದಲ್ಲಿ ಹೈಕೋರ್ಟ್ ನ ಹಿರಿಯ ನ್ಯಾಯವಾದಿಗಳಾದ ಉದಯ ಹೊಳ್ಳ, ಸಜನ್ ಪೂವಯ್ಯ, ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ವಿವಿಧ ವಿಷಯಗಳಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ.
ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹೆಚ್.ಎಲ್.ನಾಗಮೋಹನ್ ದಾಸ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ವಕೀಲರ ಪರಿಷತ್ ಅಧ್ಯಕ್ಷ ಪಿ.ಪಿ.ಹೆಗ್ಡೆ, ಮಾಜಿ ಉಪಾಧ್ಯಕ್ಷ ಬಿ.ರವೀಂದ್ರನಾಥ್ ರೈ, ಎ.ಎಲ್.ಭೋಜೇಗೌಡ, ವಕೀಲರ ಸಂಘದ ಅಧ್ಯಕ್ಷ ಶಿವರಾಮ್ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರಲ್ಲಿ ಉಚ್ಛ ನ್ಯಾಯಾಲಯದ ಸಂಚಾರಿ ಪೀಠ ಆರಂಭಿಸುವಂತೆ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಎತ್ತಿನಹೊಳೆ ತಿರುವ ಯೋಜನೆ ವಿರುದ್ದದ ಹೋರಾಟಕ್ಕೆ ಮಂಗಳೂರು ವಕೀಲರ ಸಂಘದ ಸಂಪೂರ್ಣ ಬೆಂಬಲ :
ನೇತ್ರಾವತಿ ಮತ್ತು ಎತ್ತಿನಹೊಳೆಯಂತ ನದಿ ತಿರುವು ಯೋಜನೆಯಿಂದ ದ.ಕ ಜಿಲ್ಲೆಗೆ ತೀವ್ರ ಅನ್ಯಾಯವಾಗಿದ್ದು ಪ್ರಕೃತಿ ನಾಶ, ಪ್ರಾಣಿ ಸಂಕುಲದ ನಾಶ, ಮತ್ತಿತರ ಸಮಸ್ಯೆಗಳಲ್ಲದೆ ಜಿಲ್ಲೆಯಲ್ಲಿ ಕೃಷಿಗಾಗಿ ನೇತ್ರವಾತಿಯ ನೀರನ್ನು ಆವಲಂಬಿಸಿರುವ ಜಿಲ್ಲೆಯ ಕೃಷಿಕರು ಈಗಾಗಲೇ ಸರಿಯಾದ ಮಳೆ ಇಲ್ಲದೆ ಅನಾವೃಷ್ಠಿಯನ್ನು ಎದುರಿಸುತ್ತಿದ್ದು ಸದ್ರಿ ಯೋಜನೆ ಜಾರಿಗೊಂಡಲ್ಲಿ ದ.ಕ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಬವಣೆ ಉಂಟಾಹಬಹುದು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಹಿತಸಾಸಕ್ತಿಗೆ ಮಾರಕವಾದ ಮತ್ತು ಭಾರಿ ವೆಚ್ಚದಿಂದ ಪ್ರಾರಂಭಿಸಲು ಹೊರಟಿರುವ ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಕೈ ಬಿಡಬೇಕೆಂದು, ಹಾಗೂ ಜನರ ಇಚ್ಚೆಗೆ ವಿರುದ್ಧವಾಗಿ ಸದ್ರಿ ಯೋಜನೆಯನ್ನು ಪ್ರಾರಂಭಿಸಲು ಹೊರಟರೆ ಮಂಗಳೂರು ವಕೀಲರ ಸಂಘವು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳನ್ನೊಟ್ಟುಗೂಡಿಸಿ ಹೋರಾಟ ಮಾಡುವುದು ಆನಿವಾರ್ಯವಾದೀತು.
ಆದುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸದ್ರಿ ಜನವಿರೋಧಿ, ಪರಿಸರ ವಿರೋಧಿ ಯೋಜನೆಯನ್ನು ಕೂಡಲೇ ಕೈ ಬಿಡಬೇಕೆಂದು ಮಂಗಳೂರು ವಕೀಲರ ಸಂಘ ಆಗ್ರಹಿಸುವುದಾಗಿ ಚೆಂಗಪ್ಪ ಅವರು ತಿಳಿಸಿದರು.
ಉಪಾಧ್ಯಕ್ಷ ಯಶೋಧರ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೆಚ್.ವಿ., ಜೊತೆ ಕಾರ್ಯದರ್ಶಿ ಸುಮನ್ ಶರಣ್, ಕೋಶಾಧಿಕಾರಿ ಯತೀಶ್ ಕುಮಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.